Advertisement

ಜಾತಿ ಸಮಾವೇಶ ಮಾಡುವ ಸಿದ್ಧರಾಮಯ್ಯ ಡೋಂಗಿ ಜ್ಯಾತ್ಯತೀತ ನಾಯಕ: ಎಚ್.ಡಿ.ಕುಮಾರಸ್ವಾಮಿ

04:09 PM May 24, 2022 | Team Udayavani |

ಬೆಂಗಳೂರು: ನಮ್ಮ ಪಕ್ಷದ ಬಗ್ಗೆ ಆರೇಳು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಡೋಂಗಿ ಜ್ಯಾತ್ಯತೀತ ನಾಯಕರು ಸುಳ್ಳು ಪ್ರಚಾರ ಮಾಡುತ್ತಿದ್ದು ಅವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

Advertisement

ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್‍ ಅಭ್ಯರ್ಥಿ ಟಿ.ಎ.ಶರವಣ ನಾಮಪತ್ರ ಸಲ್ಲಿಸಿದ ನಂತರ ವಿಧಾನಸೌಧದಲ್ಲಿರುವ ಜೆಡಿಎಸ್‍ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಅವರು ಮಾಧ್ಯಮಗಳ ಜತೆ  ಮಾತನಾಡಿದರು.

ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಬಿಂಬಿಸಲು ಪ್ರಯತ್ನ ಮಾಡಿದ್ದಾರೆ, ಅದನ್ನು ಇನ್ನೂ ಮುಂದುವರಿಸುತ್ತಿದ್ದಾರೆ ಎಂದರು.

ಈಚೆಗೆ ತುಮಕೂರಿನಲ್ಲೂ ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತಾಡಿದ್ದಾರೆ. ಅವರೇ ಜಾತಿವಾರು ಸಮಾವೇಶ ಮಾಡಿಕೊಂಡು ನಾವು ಜಾತ್ಯತೀತರು ಎಂದು ಭಂಡತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಬಿಜೆಪಿ ಜತೆ ಸರಕಾರ ಮಾಡಿದಾಗಲೂ ಸಹ ಕೋಮು ಸಂಘರ್ಷಕ್ಕೆ ಅವಕಾಶ ಕೊಡಲಿಲ್ಲ. ಇಂದು ಸಣ್ಣ ಕೋಮು ಸಂಘರ್ಷ ಘಟನೆ ನಡೆಯಲಿಲ್ಲ. ಆದರೆ ಈಗ ಏನಾಗಿದೆ? ಅನೇಕ ತಿಂಗಳಿನಿಂದ ಸಮಾಜವನ್ನು ಒಡೆಯುವ ಘಟನೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ಯಾರು? ಇಂಥ ಸರಕಾರ ಬರಲು ಕಾರಣ ಯಾರು? ಎನ್ನುವುದು ಜನತೆಗೆ ಗೊತ್ತಿದೆ ಎಂದು ಅವರು ಕಾಂಗ್ರೆಸ್ ನಾಯಕರ ಮೇಲೆ ಟೀಕಾ ಪ್ರಹಾರ ನಡೆಸಿದರು.

Advertisement

ಪಕ್ಷ ಉಳಿಸುವುದಕ್ಕೆ ನಾನು ಬಿಜೆಪಿ ಜತೆ ಸೇರಿ ಸರಕಾರ ಮಾಡಿದೆ. ಅದೇ ರೀತಿ ಕಾಂಗ್ರೆಸ್ ಜತೆಯಲ್ಲೂ ಸೇರಿ ಸರಕಾರ ಮಾಡಿದೆ. ಆದರೆ ಇವತ್ತಿಗೂ ಕಾಂಗ್ರೆಸ್ ನವರು ಇವತ್ತಿಗೂ ನಮ್ಮ ಪಕ್ಷವನ್ನು ಬಿಜೆಪಿ ಬಿ ಟೀಂ ಅಂತಾರೆ. ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಸರಕಾರದಲ್ಲಿ ಮಂತ್ರಿ ಆಗಿದ್ದರು. ಈಗ ಕಾಂಗ್ರೆಸ್ ಪಕ್ಷವೇ ಮಹಾರಾಷ್ಟ್ರದಲ್ಲಿ ಶಿವಸೇನೆ ಜತೆ ಸರಕಾರ ಮಾಡಿದೆ. ಇದಕ್ಕೆ ಏನೆಂದು ಹೇಳಬೇಕು ಎಂದು ಕುಮಾರಸ್ವಾಮಿ ಅವರು ಕುಟುಕಿದರು.

ಮಾತಿಗೆ ಮುಂಚೆ ನಾವು ಜಾತ್ಯತೀತರು ಎಂದು ಹೇಳಿಕೊಳ್ಳುವ ನೀವು, ರಾಜಕಾರಣ ಮಾಡುತ್ತಿರುವುದು ಯಾರ ಹೆಸರಲ್ಲಿ? ಮಡಿವಾಳ, ಅಲ್ಪಸಂಖ್ಯಾತ ಸಮಾವೇಶ ಮಾಡ್ತೀರಾ? ಹಾಗಾದರೆ ಅದು ಏನು? ಐದು ವರ್ಷ ಸರ್ಕಾರ ನಡೆಸಿದಾಗ ಈ ಸಮುದಾಯದವರಿಗೆ ಏನು ಮಾಡಿದಿರಿ? ಕಾಂಗ್ರೆಸ್ ನವರು ಜ್ಯಾತ್ಯಾತೀತತೆ ಬಗ್ಗೆ ಚರ್ಚೆ ಮಾಡಲು ನೈತಿಕತೆ ಉಳಿಸಿಕೊಂಡಿಲ್ಲ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

ನಾನು ಯಾವ ಪಕ್ಷದ ಬಿ ಟೀಂ ಅಲ್ಲ. ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮ ವಹಿಸುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಇದನ್ನೂ ಓದಿ:ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಸವರಾಜ ಹೊರಟ್ಟಿ

ಬಿಜೆಪಿ ಸಾಮರಸ್ಯ ಹಾಳು ಮಾಡಲು ಸಂಘಟನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಆ ಸಂಘಟನೆಗಳನ್ನು ಎದುರು ಹಾಕಿಕೊಂಡು ಹೋರಾಟ ನಡೆಸುತ್ತಿರುವವರು ನಾವು. ಸದನದಲ್ಲಿ ಮತಾಂತರ ನಿಷೇಧ ಕಾಯ್ದೆ ಬಂದಾಗ ಕಾಂಗ್ರೆಸ್ ನವರು ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡರು. ಆದರೂ ಪದೆಪದೇ ನಮ್ಮ ಪಕ್ಷದ ಬಗ್ಗೆ ಇವರು ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿ.ಎಂ.ಇಬ್ರಾಹಿಂ ಪಕ್ಷ ಬಿಟ್ಟ ಮೇಲೆ ನಮ್ಮ ಪಕ್ಷವನ್ನೇ ಮುಗಿಸಲು ಹೊರಟಿರಿ. ಆದರೂ ನಾವು ಸಾಯಲು ಬಿಡಲಿಲ್ಲ. ಮತ್ತೆ ಇಬ್ರಾಹಿಂ ವಾಪಸ್ ಬಂದ ಮೇಲೆ ಅಲ್ಲಿ ಡೌನ್ ಫಾಲ್ ಆಗ್ತಿದೆ. ಇಬ್ರಾಹಿಂ ಅವರ ಕಾಲ್ಗುಣವೇ ಅಂತಹದ್ದು ಎಂದರು.

ನಾಲ್ಕನೇ ಅಭ್ಯರ್ಥಿಗೆ ಕಾಂಗ್ರೆಸ್, ಬಿಜೆಪಿಗೆ ಸಂಖ್ಯೆ ಇಲ್ಲ: ನಾಲ್ಕನೇ ಅಭ್ಯರ್ಥಿಗೆ ಮೂರು ಪಕ್ಷಗಳಿಗೂ ನಂಬರ್ ಇಲ್ಲ. ಮೂರು ಪಕ್ಷಕ್ಕೆ ಹೋಲಿಕೆ ಮಾಡಿದರೆ ನಮ್ಮ ಮತಗಳು ಹೆಚ್ಚಿವೆ. ನಾವು ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ. ಆ ಪಕ್ಷಗಳು ಕೂಡ ಒಂದಿಷ್ಟು ಲೆಕ್ಕಾಚಾರ ಮಾಡುತ್ತಿದ್ದು, ನಾವು ಇಲ್ಲಿಯವರೆಗೆ ಯಾವುದೇ ಚರ್ಚೆಯನ್ನು ಯಾರ ಜೊತೆಯೂ ಮಾಡಿಲ್ಲ. ನಾಲ್ಕನೇ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ಅವರಿಗೂ ಇಲ್ಲ ಎಂದು ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ, ಮುಖ್ಯ ಸಚೇತಕ ವೆಂಕಟರಾವ್ ನಾಡಗೌಡ, ಪಕ್ಷದ ಅಭ್ಯರ್ಥಿ ಟಿ. ಎ.ಶರವಣ, ಮಾಜಿ ಸಚಿವ ಸಾ.ರಾ.ಮಹೇಶ್ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಜರಿದ್ದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next