ಬೆಂಗಳೂರು: ರಾಜ್ಯದಲ್ಲಿ ಸಿದ್ದವಾಗಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆಧಾರದಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿಯನ್ನು ರೂಪಿಸಿ ಅದನ್ನು ಸುಪ್ರೀಮ್ ಕೋರ್ಟ್‌ಗೆ ಸಲ್ಲಿಸಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಅವಕಾಶ ಕೋರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸುಪ್ರೀಮ್ ಕೋರ್ಟ್ ಮಂಗಳವಾರ ನೀಡಿರುವ ಆದೇಶದಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿಗೆ ಇದೊಂದೇ ಪರಿಹಾರ. ಈ ಆದೇಶದಿಂದ ಹಿಂದುಳಿದ ಜಾತಿಗಳಿಗೆ ಆಗಲಿರುವ ಈ ಅನ್ಯಾಯವನ್ನು ತಪ್ಪಿಸಲು ರಾಜ್ಯ ಸರ್ಕಾರ ಕಾನೂನು ತಜ್ಞರ ಜೊತೆ ಸಮಾಲೋಚಿಸಿ, ವಿರೋಧಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು ಸಮರೋಪಾದಿಯಲ್ಲಿ ಕಾನೂನು ಹೋರಾಟಕ್ಕೆ ತಯರಾಗಬೇಕು ಎಂದು ಆಗ್ರಹಿಸಿದ್ದಾರೆ.
“ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಹಿಂದುಳಿದ ಜಾತಿಗಳ ಮೀಸಲಾತಿಯನ್ನು ರಾಜಕೀಯ ಕ್ಷೇತ್ರಕ್ಕೆ ಅನ್ವಯಿಸಲಾಗದು. ಇದಕ್ಕಾಗಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ ವಿಶ್ವಾಸಾರ್ಹ ದತ್ತಾಂಶ ಆಧರಿಸಿದ ಮಾಹಿತಿಯನ್ನು ಮೂರು ಹಂತಗಳ ಪರಿಶೀಲನೆಗೊಡ್ಡಿ ಪ್ರತ್ಯೇಕ ರಾಜಕೀಯ ಮೀಸಲಾತಿಯನ್ನು ರೂಪಿಸಬೇಕು” ಎಂದು 2010ರಲ್ಲಿಯೇ ಸುಪ್ರೀಮ್ ಕೋರ್ಟ್ ರಾಜ್ಯಗಳಿಗೆ ಆದೇಶ ನೀಡಿತ್ತು. ಅದೇ ಆದೇಶವನ್ನು ಸುಪ್ರೀಮ್ ಕೋರ್ಟ್ ಪುನರುಚ್ಚರಿಸುತ್ತಾ ಬಂದಿದೆ ಎಂದರು.
ಹಿಂದುಳಿದ ಜಾತಿಗಳಿಗೆ ಸಂಬಂಧಿಸಿದ ಪರಿಷ್ಕೃತ ರಾಜಕೀಯ ಮೀಸಲಾತಿ ತಕ್ಷಣಕ್ಕೆ ಲಭ್ಯ ಇಲ್ಲದೆ ಹೋದರೆ ಅದಕ್ಕಾಗಿ ಕಾಯದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳನ್ನು ಸಾಮಾನ್ಯ ಕ್ಷೇತ್ರಗಳೆಂದು ಪರಿಗಣಿಸಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂದು ತನ್ನ ಹಿಂದಿನ ಆದೇಶವನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಡಿಜಿಪಿ ರವೀಂದ್ರನಾಥ್ ರಾಜಿನಾಮೆ ವಿಚಾರ: ಸರಕಾರ ನಡತೆ ಅಧಿಕಾರಿಗಳಿಗೆ ದೊಡ್ಡ ಬೆದರಿಕೆ
ಸ್ಥಳೀಯ ಸಂಸ್ಥೆಗಳಲ್ಲಿನ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಯ ಆದೇಶ ಆದೇಶ ಎಲ್ಲ ರಾಜ್ಯಗಳಿಗೆ ಅನ್ವಯಿಸಿದೆ ಎಂದು ಹೇಳುತ್ತಲೇ ಇದ್ದರೂ ರಾಜ್ಯದ ಬಿಜೆಪಿ ಸರ್ಕಾರ ಕಾನೂನು ಹೋರಾಟಕ್ಕೆ ಮುಂದಾಗದೆ ಕಾಲಹರಣ ಮಾಡುತ್ತಿರುವುದು ವಿಷಾದನೀಯ. ರಾಜ್ಯ ಸರ್ಕಾರ ಪ್ರತಿಷ್ಠೆಯಾಗಿ ಮಾಡಿಕೊಳ್ಳದೆ, ಸರ್ವಜನರ ಹಿತದ ವಿಷಯದಲ್ಲಿ ರಾಜಕೀಯ ಮಾಡಲು ಹೋಗದೆ ಕಾಂತರಾಜ್ ಆಯೋಗದ ವರದಿಯನ್ನು ಒಪ್ಪಿಕೊಳ್ಳಬೇಕು ಎಂದು ಎಂದರು.