Advertisement
ನಗರದ ಅರಮನೆ ಮೈದಾನದಲ್ಲಿ ಭಾನುವಾರ ಕರ್ನಾಟಕ ಪ್ರದೇಶ ಕುರುಬರ ಸಂಘ ಹಮ್ಮಿಕೊಂಡಿದ್ದ “ಪ್ರತಿಭಾ ಪುರಸ್ಕಾರ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯದ ನಾಲ್ಕು ಕೋಟಿ ಜನರಿಗೆ ಅನ್ನಭಾಗ್ಯ, ಲಕ್ಷಾಂತರ ವಿದ್ಯಾರ್ಥಿಗಳಿಗೆ ವಾರದ ಐದು ದಿನಗಳು ಕ್ಷೀರಭಾಗ್ಯ, ಕೃಷಿಭಾಗ್ಯದಡಿ ಕೃಷಿ ಹೊಂಡಗಳ ನಿರ್ಮಾಣ, ಎಲ್ಲ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ, ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಣೆ ಸೇರಿದಂತೆ ಅನೇಕ ಯೋಜನೆಗಳನ್ನು ನನ್ನ ಅಧಿಕಾರಾವಧಿಯಲ್ಲಿ ಜಾರಿಗೊಳಿಸಿದ್ದೇನೆ. ಇವೆಲ್ಲವೂ ಎಲ್ಲ ಜಾತಿಗಳಿಗೂ ಅನ್ವಯ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಸಾಮಾಜಿಕನ್ಯಾಯದಡಿ ಇಷ್ಟೆಲ್ಲಾ ಯೋಜನೆಗಳನ್ನು ಘೋಷಿದ್ದರೂ ಆ ಜಾತಿ ವಿರೋಧಿ, ಈ ಜಾತಿ ವಿರೋಧಿಯಾಗಿ ಜಾತಿಗಳನ್ನು ಒಡೆಯುತ್ತೇನೆ ಎಂದು ಅಪಪ್ರಚಾರ ಮಾಡಿ ಸೋಲಿಸಿಬಿಟ್ಟರು. ಸಾಮಾಜಿಕನ್ಯಾಯದಿಂದ ಈವರೆಗೆ ವಂಚಿತರಾದವರು ಚುನಾವಣೆಯಲ್ಲಿ ಟೀಕಾಕಾರರಿಗೆ ತಿರುಗೇಟು ನೀಡಬೇಕಾಗಿತ್ತು. ಅವರು ಕೂಡ ಮೌನ ವಹಿಸಿದರು ಎಂದು ಬೇಸರ ವ್ಯಕ್ತಪಡಿಸಿದರು.
ಸಮುದಾಯದಲ್ಲಿ ಬಿರುಕು ಮೂಡುತ್ತಿದೆ. ಶೇ. 70ರಷ್ಟು ಜನ ಒಗ್ಗಟ್ಟಾಗಿದ್ದಾರೆ. ಉಳಿದವರು ಸ್ವಲ್ಪ ಆ ಕಡೆ ಈ ಕಡೆ ಎನ್ನುತ್ತಾರೆ. ಒಗ್ಗಟ್ಟಿನ ವಿಚಾರದಲ್ಲಿ ಬೇರೆಯವರನ್ನು ನೋಡಿ ಕಲಿಯಿರಿ ಎಂದು ಕಿವಿಮಾತು ಹೇಳಿದ ಅವರು, ಚುನಾವಣೆ ಸಂದರ್ಭದಲ್ಲಿ ರಾಯಣ್ಣ ಬ್ರಿಗೇಡ್ ಚಾಲ್ತಿಯಲ್ಲಿತ್ತು. ಈಗ ಅದು ಎಲ್ಲಿ ಹೋಯಿತು? ಕೆ.ಎಸ್.ಈಶ್ವರಪ್ಪ ಅಹಿಂದದ ಮೊದಲ ಸಭೆಗೆ ಬಂದರು. ಆದರೆ, ಹಣ ಸಂಗ್ರಹಿಸುವ ಸಮಯಕ್ಕೆ ಕೈಕೊಟ್ಟರು. ಈ ವಿಷಯಗಳ ಬಗ್ಗೆ ವಿಶಾಲವಾಗಿ ಯೋಚಿಸಿ ಎಂದು ಸೂಚ್ಯವಾಗಿ ಹೇಳಿದರು.
Related Articles
Advertisement
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್“ನೀವು ಘೋಷಿಸಿದ್ದ ಉಚಿತ ಬಸ್ ಪಾಸ್ ಕೊಡಲೇ ಇಲ್ಲ ಸ್ವಾಮಿ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಸಮುದಾಯದ ವ್ಯಕ್ತಿಯೊಬ್ಬ ದೂರು ಸಲ್ಲಿಸಿದ ಪ್ರಸಂಗ ನಡೆಯಿತು. ಪ್ರತಿಭಾ ಪುರಸ್ಕಾರದಲ್ಲಿ ಸಿದ್ದರಾಮಯ್ಯ ಅವರು, “ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಘೋಷಿಸಿದ್ದೇನೆ’ ಎಂದರು. ಆಗ, ವೇದಿಕೆ ಮುಂಭಾಗದಲ್ಲೇ ಇದ್ದ ವ್ಯಕ್ತಿಯೊಬ್ಬ, “ಬಸ್ ಪಾಸ್ ಇನ್ನೂ ಕೊಟ್ಟಿಲ್ಲ ಸ್ವಾಮಿ’ ಎಂದು ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ಸಮನ್ವಯ ಸಮಿತಿ ಸಭೆಯಲ್ಲಿ ಹೇಳುತ್ತೇನೆ. ಕೊಡ್ತಾರೆ ಸುಮ್ಮನೆ ಕುಳಿತುಕೊ’ ಎಂದು ಗದರಿದರು. “ನಾನು ಹಂಡ್ರೆಡ್ ಪರ್ಸೆಂಟ್ ಹಿಂದೂ’
ನಾನು ಹಂಡ್ರೆಡ್ ಪರ್ಸೆಂಟ್ ಹಿಂದೂ. ನಾನ್ಯಾಕೆ ಹಿಂದೂ ವಿರೋಧಿ ಆಗಲಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ನಾನು ಹಿಂದೂ ವಿರೋಧಿ ಎಂದು ಪದೇ ಪದೇ ಕೆಲವರು ಹೇಳುತ್ತಾರೆ. ಆದರೆ, ನಾನ್ಯಾಕೆ ಹಿಂದೂಗಳನ್ನು ವಿರೋಧಿಸಲಿ? ನಾನೂ ಅಪ್ಪಟ ಹಿಂದೂ. ಆದರೆ, ಎಲ್ಲ ಜಾತಿಯವರನ್ನೂ ಪ್ರೀತಿಸುತ್ತೇನೆ ಎಂದರು. ಡಾಕ್ಟರ್ ಆಗ್ಬೇಕು ಅನ್ಕೊಂಡಿದ್ದೆ….
ನಾನೂ ಡಾಕ್ಟರ್ ಆಗುವ ಕನಸು ಕಂಡಿದ್ದೆ. ಈ ನಿಟ್ಟಿನಲ್ಲಿ ಎರಡು ಬಾರಿ ಪ್ರಯತ್ನವನ್ನೂ ಮಾಡಿದ್ದೆ. ಆದರೆ, ಆಗಲಿಲ್ಲ ಎಂದು ಸಿದ್ದರಾಮಯ್ಯ ಮೆಲುಕುಹಾಕಿದರು. ಪಿಯುಸಿ ಮತ್ತು ಬಿಎಸ್ಸಿಯಲ್ಲಿ ಎರಡೂ ಸಲ ವೈದ್ಯನಾಗಬೇಕು ಎಂಬ ಕನಸು ಕಂಡಿದ್ದೆ, ಸಾಧ್ಯವಾಗಲಿಲ್ಲ. ಡಾಕ್ಟರ್ ಆಗಿದ್ದರೆ, ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ ಹಾಗೂ ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ಈಗಿನ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲೂ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆಯುತ್ತಾರೆ. ಆದರೆ, ನಾನು ಲೆಕ್ಕದಲ್ಲಿ ಪಕ್ಕಾ ಇದ್ದೆ. ಹಾಗಾಗಿ, ಗಣಿತದಲ್ಲಿ ಮಾತ್ರ ಹೆಚ್ಚು ಅಂಕಗಳು 90 ದಾಟುತ್ತಿತ್ತು. ಉಳಿದವು 50-60 ಅಂಕ ದಾಟುತ್ತಿರಲಿಲ್ಲ ಎಂದು ಸ್ಮರಿಸಿದರು.