Advertisement

ಜನರ ಪರವಾಗಿ ಭಾರತ್‌ ಜೋಡೋ ಪಾದಯಾತ್ರೆ: ಸಿದ್ದರಾಮಯ್ಯ

07:36 PM Sep 18, 2022 | Team Udayavani |

ಮೈಸೂರು: ಬಿಜೆಪಿ ಸರ್ಕಾರದ ದುರಾಡಳಿತದಿಂದ ಸಾಮಾನ್ಯ ಜನರು ಬದುಕಲಾಗದ ಪರಿಸ್ಥಿತಿ ಎದುರಾಗಿದೆ. ಈ ಸಮಸ್ಯೆಗಳನ್ನು ಅರಿತ ರಾಹುಲ್‌ ಗಾಂಧಿ ಸಾಮಾನ್ಯ ಜನರ ಪರವಾಗಿ ಪಾದಯಾತ್ರೆ ಮಾಡುತ್ತಿದ್ದಾರೆಯೇ ಹೊರತು ಸ್ವಾರ್ಥಕ್ಕಾಗಿ, ಅಧಿಕಾರಕ್ಕಾಗಿ ಅಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಇಲ್ಲಿನ ಇಂದಿರಾಗಾಂಧಿ ಕಾಂಗ್ರೆಸ್‌ ಭವನದಲ್ಲಿ ಭಾನುವಾರ ನಡೆದ ಭಾರತ್‌ ಜೋಡೋ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಸರ್ಕಾರದ ಆಡಳಿತದಲ್ಲಿ ಯಾವುದೇ ವರ್ಗದ ಜನರು ನೆಮ್ಮದಿಯಿಂದ ಬದುಕುತ್ತಿಲ್ಲ. ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ.

ತಮ್ಮ ರಾಜಕೀಯ ಹಿತಾಸಕ್ತಿಗೋಸ್ಕರ ಮತಾಂತರ ನಿಷೇಧ ಕಾಯಿದೆ ಜಾರಿಗೊಳಿಸುತ್ತಿದ್ದಾರೆ. ಇದರ ಮೂಲಕ ಸಂವಿಧಾನದಲ್ಲಿ ಇರುವ ಮೂಲಭೂತ ಹಕ್ಕನ್ನು ಮೊಟಕುಗೊಳಿಸುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

ಪಾದಯಾತ್ರೆಯಿಂದ ನಮಗೆ ರಾಜಕೀಯ ಲಾಭ ಇದೆ. ಮುಂದಿನ 6 ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರಲಿದೆ. ರಾಹುಲ್‌ ಗಾಂಧಿ ಮೈಸೂರು-ಚಾಮರಾಜನಗರ ಜಿಲ್ಲೆಗಳಿಗೆ ಬಂದಾಗ ಹೆಚ್ಚು ಜನರನ್ನು ಸೇರಿಸಿದರೆ ರಾಜಕೀಯ ಲಾಭ ಆಗುತ್ತದೆ. ಈ ಐತಿಹಾಸಿಕ ಪಾದಯಾತ್ರೆ ಯಶಸ್ವಿಗೊಳಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರದಿಂದ 5 ಸಾವಿರಕ್ಕಿಂತ ಹೆಚ್ಚಿನ ಜನರನ್ನು ಕರೆತರಬೇಕು ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ವಿಜಯದಶಮಿ ವೇಳೆಗೆ ರಾಹುಲ್‌ ಗಾಂಧಿ ನೇತೃತ್ವದ ಪಾದಯಾತ್ರೆ ಮೈಸೂರಿಗೆ ಬರಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ 10ರಿಂದ 15 ಸಾವಿರ ಜನರನ್ನು ಕರೆತರಬೇಕು. ಕಾರ್ಯಕರ್ತರು ನಡಿಗೆ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಎಂದರು. ಪ್ರಸ್ತುತ ಬೆಲೆ ಏರಿಕೆ ಗಗನಕ್ಕೇರಿದೆ. ಆದಾಯ ಪಾತಾಳಕ್ಕೆ ಇಳಿದಿದೆ. ಕರ್ನಾಟಕ ಭ್ರಷ್ಟಚಾರದ ರಾಜಧಾನಿಯಾಗಿದೆ. ರೈತರ ಬದುಕಿಗೆ ಭದ್ರತೆ ಇಲ್ಲವಾಗಿದೆ ಎಂದರು.

Advertisement

ಮೋದಿಯಿಂದ ಪಾದಯಾತ್ರೆ ಎಂದ ಸಿದ್ದು
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸುವ ಭರದಲ್ಲಿ ಮೋದಿಯಿಂದ ಪಾದಯಾತ್ರೆ ಎಂದು ಹೇಳಿ ಪೇಚಿಗೆ ಸಿಲುಕಿದ ಪ್ರಸಂಗ ನಡೆಯಿತು.

ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರದ ವಿರುದ್ಧ ನರೇಂದ್ರ ಮೋದಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು. ಆಗ ಮುಂದೆ ಕುಳಿತಿದ್ದ ಮುಖಂಡರು, ಕಾರ್ಯಕರ್ತರು “ಮೋದಿಯಲ್ಲ, ರಾಹುಲ್‌ ಗಾಂಧಿ’ ಎಂದು ಕೂಗಿದರು. ಎಚ್ಚೆತ್ತುಕೊಂಡ ಸಿದ್ದರಾಮಯ್ಯ ನಾನು ಮೋದಿ ಎಂದು ಹೇಳಿದ್ನೇ. ಮೋದಿಯಲ್ಲ, ರಾಹುಲ್‌ ಗಾಂಧಿ ಪಾದಯಾತ್ರೆ ಮಾಡುತ್ತಿರುವುದು ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next