Advertisement

ಸಿದ್ದು ಸ್ಪರ್ಧೆ ಘೋಷಣೆ ನಂತರದ 69 ದಿನ…

04:38 PM Feb 20, 2023 | Team Udayavani |

ಕೋಲಾರ: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆಂಬ ಕಾರಣಕ್ಕೆ ಕೋಲಾರ ವಿಧಾನಸಭಾ ಕ್ಷೇತ್ರ ರಾಷ್ಟ್ರದ ಗಮನ ಸೆಳೆದಿದೆ. ಪ್ರತಿ ನಿತ್ಯವೂ ಸುದ್ದಿಯಲ್ಲಿರುವಂತಾಗಿದೆ.  ಚುನಾವಣಾ ಕಾರಣಕ್ಕಾಗಿ ನ.13 ಕೋಲಾರಕ್ಕೆ ಮೊದಲ ಭೇಟಿ ನೀಡಿದ್ದ ಸಿದ್ದರಾಮ ಯ್ಯ ಹೋದ ನಂತರ ಅರವತ್ತೂಂಬತ್ತು ದಿನಗಳು ಕಳೆದಿದ್ದು, ಈ ಅವಧಿಯಲ್ಲಿ ಆನೇಕ ರಾಜಕೀಯ ವಿದ್ಯಮಾನಗಳಿಗೆ ಕೋಲಾರ ಸಾಕ್ಷಿಯಾಗಿದೆ.

Advertisement

ಮೊದಲ ಭೇಟಿ: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆಂಬ ವದಂತಿಗೆ ಪುಷ್ಠಿ ದೊರೆತಿದ್ದು 2022 ನ.13 ರಂದು ಸಿದ್ದರಾಮಯ್ಯ ಕೋಲಾರಕ್ಕೆ ಭೇಟಿ ನೀಡಿ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ ನಂತರ. ಇಡೀ ದಿನ ಕೋಲಾರ ಕ್ಷೇತ್ರದಲ್ಲೇ ಸುತ್ತಾಡಿದ್ದ ಸಿದ್ದರಾಮಯ್ಯ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಮಾತನಾಡುವ ಸಂದರ್ಭದಲ್ಲಿ ಮತ್ತೂಮ್ಮೆ ನಾಮಪತ್ರ ಸಲ್ಲಿಸಲು ಬರುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸ್ಪರ್ಧೆಯ ಸುಳಿವು ನೀಡಿದ್ದರು. ಆದರೂ, ಸಿದ್ದರಾಮಯ್ಯ ಕೆಲವು ಮುಖಂಡರ ಬಲವಂತಕ್ಕೆ ಬಂದಿದ್ದಾರೆ, ಕೋಲಾರದಿಂದ ಸ್ಪರ್ಧಿಸುವು ದಿಲ್ಲ ಎಂಬ ಅಪಪ್ರಚಾರ ವಿರೋಧಿಗಳಿಂದ ನಡೆದಿತ್ತು. ಬಿಜೆಪಿಯ ವರ್ತೂರು ಪ್ರಕಾಶ್‌ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಕೋಲಾರದಿಂದ ಸ್ಪರ್ಧಿಸುವು ದಿಲ್ಲ ಎಂಬ ಮಾತುಗಳನ್ನಾಡಿದ್ದರು.  ಜೆಡಿಎಸ್‌ ಪಂಚರತ್ನ ಯಾತ್ರೆಯಲ್ಲಿ ಕುಮಾರಸ್ವಾಮಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು ಅದರಲ್ಲೇನು ವಿಶೇಷ ಎಂದಿದ್ದರು. ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಖಚಿತಪಡಿಸುವ ಸಲುವಾಗಿಯೇ ಸಿದ್ದರಾಮಯ್ಯ ಮತ್ತೇ ಬರುವ ಅನಿವಾರ್ಯತೆ ಎದುರಾಗಿತ್ತು.

ಎರಡನೇ ಭೇಟಿ: 2023 ಜ.9ರಂದು ಸಿದ್ದರಾಮಯ್ಯರನ್ನು ಮತ್ತೇ ಕೋಲಾರಕ್ಕೆ ಆಹ್ವಾನಿಸಲಾಯಿತು. ಮದುವೆ ಛತ್ರದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲು ಕಾಂಗ್ರೆಸ್‌ನ ಒಂದು ಗುಂಪು ಸಜ್ಜಾಗುತ್ತಿತ್ತು. ಅದೇ ವೇಳೆಗೆ ವರ್ತೂರು ಪ್ರಕಾಶ್‌ ಸಿದ್ದರಾಮಯ್ಯರಂತ ದೊಡ್ಡ ನಾಯಕರನ್ನು ಕರೆಯಿಸಿ ಪುಟ್ಟದಾಗಿ ಸಭೆ ಮಾಡುತ್ತಿದ್ದಾರೆಂದು ಕಾಂಗ್ರೆಸ್‌ ಮುಖಂಡರನ್ನು ಕೆಣಕಿದ್ದರು. ಇದರಿಂದ ದೊಡ್ಡ ಕಾರ್ಯಕ್ರಮ ಮಾಡು ವುದು ಮುಖಂಡರಿಗೆ ಅನಿವಾರ್ಯವಾಯಿತು.

ಅಂದು ಕೋಲಾರಕ್ಕೆ ಬರುವ ಮುನ್ನ ಸಿದ್ದರಾಮಯ್ಯ ಖುದ್ದು ಕೆ.ಎಚ್‌.ಮುನಿಯಪ್ಪರ ಮನೆಗೆ ತೆರಳಿ ಅವರನ್ನು ಕೋಲಾರಕ್ಕೆ ಕರೆತಂದು ಪಕ್ಕದಲ್ಲಿ ಕೂರಿಸಿ ಕೊಂಡಿದ್ದರು. ಈ ಮೂಲಕ ಭಿನ್ನಾಭಿಪ್ರಾಯಗಳಿಲ್ಲವೆಂಬ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದರು.

ಹೈಕಮಾಂಡ್‌ ನಿರ್ಧಾರ ಅಂತಿಮ: ಕೋಲಾರದ ಜೂನಿಯರ್‌ಕಾಲೇಜು ಮೈದಾನದಲ್ಲಿ ಐದಾರು ಸಾವಿರ ಮಂದಿ ಜಮಾಯಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದೇನೆ, ಇದು ಹೈಕಮಾಂಡ್‌ ಅಂತಿಮ ನಿರ್ಧಾರದ ಮೇಲೆ ಅವಲಂಬಿತವಾಗಿದೆಯೆಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ವರ್ತೂರು ಪ್ರಕಾಶ್‌ ರನ್ನು ಕೆರಳಿಸುವಂತೆ ಮಾಡಿತ್ತು. ಆ ಕ್ಷಣದಿಂದ ಮೂರು ನಾಲ್ಕು ದಿನ ಸಿದ್ದರಾಮಯ್ಯರ ಸ್ಪರ್ಧೆಯನ್ನು ವರ್ತೂರು ಸೇರಿದಂತೆ ಬಿಜೆಪಿ ಮುಖಂಡರು ರಾಜ್ಯಾವ್ಯಾಪಿ ಪ್ರತಿಕ್ರಿಯಿಸಿ ತಮ್ಮದೇ ಮಾತುಗಳಲ್ಲಿ ವ್ಯಂಗ್ಯವಾಡಿದ್ದರು. ಕಟುವಾಗಿ ಟೀಕಿಸಿದ್ದರು. ಕೋಲಾರದ ಜೆಡಿಎಸ್‌ ಅಭ್ಯರ್ಥಿ ಸಿಎಂಆರ್‌ ಶ್ರೀನಾಥ್‌ ಮಾತ್ರ ಸಿದ್ದರಾಮಯ್ಯರ ವಿರುದ್ಧ ಸ್ಪರ್ಧಿಸುವುದು ತಮಗೆ ಹೆಮ್ಮೆಯ ವಿಚಾರ ಎಂದು ಮತದಾರರ ಮನ ಗೆದ್ದಿದ್ದರು. ರಾಜ್ಯ ಮಟ್ಟದಲ್ಲಿ ಜೆಡಿಎಸ್‌ ಮುಖಂಡರು ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಯನ್ನು ತಮ್ಮದೇ ಮಾತುಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.

Advertisement

ಮೂರನೇ ಭೇಟಿ: ಕಾಂಗ್ರೆಸ್‌ ಪ್ರಜಾಧ್ವನಿ ಕಾರ್ಯ ಕ್ರಮದ ಭಾಗವಾಗಿ ಜ.23 ರಂದು ಮತ್ತೇ ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸಿದ್ದರು. ಕೋಲಾರದ ಹೊರವಲಯದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿಗೆ ನಿರೀಕ್ಷಿತ ಮಟ್ಟಿಗೆ ಜನ ಸೇರಲಿಲ್ಲ. ಇದಕ್ಕಾಗಿ ಸಿದ್ದರಾಮಯ್ಯ ಸೇರಿ ಹಿರಿಯ ಮುಖಂಡರು ಒಂದು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು. ಅಂದಿನ ಕಾರ್ಯಕ್ರಮದಲ್ಲಿಯೂ ಕಾಂಗ್ರೆಸ್‌ ಕಾರ್ಯಕ್ರಮಗಳ ಕುರಿತಂತೆ ಪ್ರಣಾಳಿಕೆಯ ಭರವಸೆಗಳನ್ನಾಡುವ ಮೂಲಕ ಕೋಲಾರದಲ್ಲಿ ಸ್ಪರ್ಧೆಯ ವಿಚಾರವನ್ನು ಹಸಿರಾಗಿಡಲಾಯಿತು.

ನಾಲ್ಕನೇ ಭೇಟಿ: ಫೆ.13, 2023ರಂದು ಸಿದ್ದರಾಮಯ್ಯ ರನ್ನು ಮತ್ತೇ ಕೋಲಾರಕ್ಕೆ ಆಹ್ವಾನಿಸಲಾಯಿತು. ವೇಮಗಲ್‌ನಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಆಯೋಜಿಸಿದ್ದ ಮಹಿಳಾ ಸಮಾವೇಶ ದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಈ ಕಾರ್ಯಕ್ರಮದ ಮೂಲಕ ಕೋಲಾರದಿಂದ ಸ್ಪರ್ಧಿ ಸುವುದನ್ನು ಮತ್ತಷ್ಟು ಪುಷ್ಠಿಕರಿಸಿದ್ದರು.ಕೋಲಾರದಲ್ಲಿ ವಾರ್‌ ರೂಂ ಉದ್ಘಾಟಿಸಿದ್ದರು. ವಿವಿಧ ಪಕ್ಷಗಳಿಂದ ಮುಖಂಡರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಮಾಡಿಕೊಂಡಿದ್ದರು. ಈ ಕಾರ್ಯಕ್ರಮಕ್ಕೂ ಮುನ್ನವೇ ವರ್ತೂರು ಪ್ರಕಾಶ್‌ ಸ್ತ್ರೀಶಕ್ತಿ ಸಂಘಗಳ ದುರ್ಬಳಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಟೀಕಿಸಿದ್ದರು. ಜೆಡಿಎಸ್‌ ವಿಧಾನಪರಿಷತ್‌ ಸದಸ್ಯ ಗೋವಿಂದರಾಜು ಇದೇ ವಿಷಯದಲ್ಲಿ ಆರೋಪಗಳನ್ನು ಮಾಡಿದ್ದರು.

ಸಿದ್ಧತೆಗಳೇನು: ಸಿದ್ದರಾಮಯ್ಯ ಸ್ಪರ್ಧೆ ಬಹುತೇಕ ಖಚಿತವಾಗುತ್ತಿದ್ದಂತೆಯೇ ಕಾಂಗ್ರೆಸ್‌ ಮುಖಂಡರು ಇಲ್ಲದ ಬೂತ್‌ ಸಮಿತಿಗಳನ್ನು ರಚನೆ ಮಾಡುತ್ತಲೇ ಇದ್ದಾರೆ. ಸಿದ್ದರಾಮಯ್ಯರಿಗಾಗಿ ಮನೆ, ಕಚೇರಿ ಕಟ್ಟಡಗಳ ಹುಡುಕಾಟ ನಡೆದಿದೆ. ಕಾಂಗ್ರೆಸ್‌ ಪಕ್ಷದಲ್ಲಿನ ಗುಂಪುಗಾರಿಕೆ ಮೇಲ್ನೋಟಕ್ಕೆ ಕಾಣಿಸುತ್ತಿಲ್ಲವಾದರೂ ಹೊಗೆಯಾಡುತ್ತಿದೆ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ನೇಮಕ ಆಗಿದೆ. ಆದರೆ, ಜನಸಾಮಾನ್ಯರ ಮಟ್ಟದಲ್ಲಿ ಇನ್ನೂ ಸಿದ್ದರಾಮಯ್ಯರ ಸ್ಪರ್ಧೆ ಕುರಿತು ಅನೇಕ ಅನುಮಾನ ಗಳಿವೆ. ಇದನ್ನು ನಿವಾರಿಸುವ ಸಂಘಟಿತ ಪ್ರಯತ್ನ ಕೋಲಾರ ಕಾಂಗ್ರೆಸ್‌ ಮುಖಂಡರಿಂದ ಆಗಲೇ ಇಲ್ಲ. ವರ್ತೂರು ಪ್ರಕಾಶ್‌ ಮೂಲಕ ಬಿಜೆಪಿ ಸಿದ್ದರಾಮಯ್ಯ ಸ್ಪರ್ಧೆಯನ್ನು ಕಠೊರವಾಗಿ ಟೀಕಿಸುತ್ತಿದೆ. ವರ್ತೂರು ಪ್ರಕಾಶ್‌ ನಿತ್ಯವೂ ಹತ್ತಾರು ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ಸೇರ್ಪಡೆ ಮಾಡುತ್ತಲೇ ಇದ್ದಾರೆ. ಎಸ್‌ಸಿ ಮೋರ್ಚಾ, ವರ್ತೂರು ಹುಟ್ಟುಹಬ್ಬ ಮತ್ತಿತರ ಸಮಾವೇಶಗಳ ಮೂಲಕ ಮತದಾರರನ್ನು ಸೆಳೆಯುವ, ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಿರಂತರವಾಗಿ ಸಾಗಿದೆ.

ಗ್ರಾಪಂವಾರು ಸಭೆ ಸಮಾರಂಭ: ಜೆಡಿಎಸ್‌ ಗ್ರಾಪಂವಾರು ಸಭೆ ಸಮಾವೇಶ ನಡೆಸುತ್ತ, ಮನೆ ಮನೆ ಭೇಟಿ ಪ್ರಚಾರವನ್ನು ಚುರುಕುಗೊಳಿಸಿದೆ. ಜೆಡಿಎಸ್‌ ಯುವ ನಾಯಕ ನಿಖೀಲ್‌ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಬಂದು ಹೋಗಿದ್ದಾರೆ.

ದಲಿತ ಸಿಎಂ ಅಸ್ತ್ರ: ಸಿದ್ದರಾಮಯ್ಯ ವಿರೋಧಿಗಳು ದಲಿತ ಸಿಎಂ ಅಸ್ತ್ರವನ್ನು ಕೋಲಾರದಿಂದ ಪ್ರಯೋಗಿಸುತ್ತಿದ್ದಾರೆ. ಕೆಲವು ದಲಿತ ಮುಖಂಡರನ್ನು ಹಿಡಿದಿಟ್ಟುಕೊಂಡು ಅವರ ಮೂಲಕ ಕರಪತ್ರಗಳ ವಿತರಣೆ, ಭಿತ್ತಿಪತ್ರಗಳನ್ನು ಕ್ಷೇತ್ರಾದ್ಯಂತ ವಿತರಿಸುವ ಮೂಲಕ ಸಿದ್ದರಾಮಯ್ಯರ ಸ್ಪರ್ಧೆಗೆ ಅಡೆತಡೆ ಒಡ್ಡುತ್ತಿದ್ದಾರೆ. ಸಿದ್ದರಾಮಯ್ಯ ವಿರೋಧಿ ನಿಲುವಿನ ಸಮೀಕ್ಷೆಗಳನ್ನು ಬಹಿರಂಗ ಪಡಿಸಿ ಪ್ರಚಾರ ಮಾಡಲಾಗುತ್ತಿದೆ. ನೂರಾರು ಯೂಟ್ಯೂಬ್‌ ತಂಡಗಳು ಕೋಲಾರ ಕ್ಷೇತ್ರದಲ್ಲಿ ಓಡಾಡಿ ತಮ್ಮದೇ ಅಭಿಪ್ರಾಯಗಳನ್ನು ಜನಾಭಿಪ್ರಾಯವಾಗಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಅಹಿಂದ ಸಮೀಕ್ಷೆ ಎಂಬ ಅಸ್ತ್ರವನ್ನು ತೇಲಿ ಬಿಡಲಾಗಿದೆ.

ವಿರೋಧಿಗಳ ಇಷ್ಟೆಲ್ಲಾ ತಂತ್ರಗಾರಿಕೆಗೆ ವಿರುದ್ಧವಾಗಿ ಸಿದ್ದರಾಮಯ್ಯ ಪರವಾಗಿ ದೊಡ್ಡ ಮಟ್ಟದ ಧ್ವನಿ ಎತ್ತುವಲ್ಲಿ ಕಾಂಗ್ರೆಸ್‌ ಸಂಪೂರ್ಣ ವಿಫ‌ಲವಾಗಿದೆ. ಸಾಮಾನ್ಯ ಮತದಾರರ ಮಟ್ಟದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಕೋಲಾರದಿಂದಲೇ ಖಚಿತ ಎಂಬ ಸಂದೇಶವನ್ನು ಮನದಟ್ಟು ಮಾಡಿಸುವಲ್ಲಿಯೂ ವಿಫ‌ಲವಾಗಿದ್ದಾರೆ.

ಕೋಲಾರ ಕ್ಷೇತ್ರದಲ್ಲಿ ಪಕ್ಷವಾರು ತಂತ್ರಗಾರಿಕೆ : ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕೋಲಾರದಿಂದ ಸ್ಪರ್ಧಿಸುವಂತೆ ಒತ್ತಾಯ ಮಾಡಿರುವ ಕಾಂಗ್ರೆಸ್‌ ತಂಡ, ತಮ್ಮ ಶಕ್ತಿ ಸಾಮರ್ಥ್ಯ ಬಳಸಿ ಸಿದ್ದರಾಮಯ್ಯ ಪರ ಪ್ರಚಾರ ಮಾಡುವುದಕ್ಕಿಂತಲೂ ಸಿದ್ದರಾಮಯ್ಯ ಎಂಬ ಬ್ರಾಂಡ್‌ ಅನ್ನೇ ಧಾಳವಾಗಿ ಬಳಸಿಕೊಂಡು ಸರ್ವಜನಾಂಗದ ನಾಯಕರಾಗಿ ಹೊರ ಹೊಮ್ಮುವ ಸ್ವಾರ್ಥ ಪ್ರಯತ್ನದಲ್ಲಿದೆ. ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ, ಕಾರ್ಯಕರ್ತರ ಹಂತದಿಂದ ಮುಖಂಡರ ಮಟ್ಟದವರೆಗೂ ಯಥಾಸ್ಥಿತಿ ಮುಂದುವರಿದಿದೆ. ಸಿದ್ದರಾಮಯ್ಯ ವಿರೋಧಿ ಬಣದಿಂದ ಮತ್ತಷ್ಟು ಅಸ್ತ್ರಗಳು ಹೊರ ಬರುವ ಸಾಧ್ಯತೆಗಳಿದ್ದರೂ, ಕಾಂಗ್ರೆಸ್‌ ಪ್ರತ್ಯಾಸ್ತ್ರಗಳನ್ನು ರೂಪಿಸದೆ, ಮುಗಿಯದ ಬೂತ್‌ ಕಮಿಟಿ ಪಟ್ಟಿಯೆಂಬ ಗಜಪ್ರಸವಕ್ಕೆ ಕಾಲ ವ್ಯಯ ಮಾಡುತ್ತಿದೆ. ಬಿಜೆಪಿಯಿಂದ ಕೋಲಾರ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಆರಂಭವಾಗಿಲ್ಲವಾದರೂ, ವರ್ತೂರು ಪ್ರಕಾಶ್‌ ವ್ಯಾಘ್ರರಾಗಿ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಓಂಶಕ್ತಿ ಚಲಪತಿಯೂ ಹಿಂದೆ ಬಿದ್ದಿಲ್ಲ. ಈ ಇಬ್ಬರೂ ಸಮಯ ಸಂದರ್ಭ ಸಿಕ್ಕಾಗಲೆಲ್ಲಾ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ವಿರೋಧಿ ಚಟುವಟಿಕೆಗಳಿಗೆ ಜೆಡಿಎಸ್‌ ತೆರೆ ಮರೆಯಲ್ಲಿ ಪ್ರೋತ್ಸಾಹ ನೀಡುತ್ತ, ತಮ್ಮ ಪ್ರಚಾರವನ್ನು ಚುರುಕುಗೊಳಿಸುತ್ತಿರುವುದು ಸದ್ಯದ ಕೋಲಾರ ರಾಜಕೀಯವಾರು ಚಿತ್ರಣವಾಗಿದೆ.

ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next