ಬೆಂಗಳೂರು: ವಿಧಾನಸಭಾ ಚುನಾವಣೆಗೆ ಸುಮಾರು ಮೂರು ತಿಂಗಳುಗಳಿರುವ ಮುನ್ನ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಪಕ್ಷದ ‘ಪ್ರಜಾಧ್ವನಿ ಯಾತ್ರೆ’ಯ ಭಾಗವಾಗಿ ಪ್ರತ್ಯೇಕ ಬಸ್ ಪ್ರವಾಸ ಆರಂಭಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ತಂಡ ಉತ್ತರ ಕರ್ನಾಟಕದ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದು, ಡಿ.ಕೆ.ಶಿವಕುಮಾರ್ ದಕ್ಷಿಣ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ.
ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿರುವ ಅನುಭವ ಮಂಟಪದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಬಳಿಕ ಶ್ರೀ ಬಸವಲಿಂಗ ಪಟ್ಟದೇವರು ಸ್ವಾಮೀಜಿಯವರ ಆಶೀರ್ವಾದ ಪಡೆದು ಪ್ರಜಾಧ್ವನಿ ಯಾತ್ರೆಯನ್ನು ಆರಂಭಿಸಿದರು.
ಬಸವಾದಿ ಶರಣರ ‘ನುಡಿದಂತೆ ನಡೆಯಬೇಕು’ ಎಂಬ ತತ್ವವೇ ನನ್ನ ಆದರ್ಶ. ಇದಕ್ಕೆ ನನ್ನ 5ವರ್ಷಗಳ ಆಡಳಿತ ಸಾಕ್ಷಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
Related Articles
ಕೋಲಾರದಲ್ಲಿ ಯಾತ್ರೆ ನಡೆಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಡಾ.ಜಿ.ಪರಮೇಶ್ವರ್ ಅವರು ಮುಳಬಾಗಿಲಿನ ಕುರುಡುಮಲೆ ಸಾಲಿಗ್ರಾಮ ಮೂರ್ತಿ ಕೂಡುಮಲೆ ಶ್ರೀ ಮಹಾಗಣಪತಿ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಿದರು. ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಹಜ್ರತ್ ಬಾಬಾ ಹೈದರ್ ಔಲಿಯಾ ದರ್ಗಾಗೆ ಭೇಟಿ ನೀಡಿ ಪ್ರಾರ್ಥಿಸಿದರು.
ಚಿತ್ರದಲ್ಲಿ ನಂಬಿಕೆಯನ್ನು ತೋರಿಸಬಹುದಾದರೆ, ಅದು ಹೀಗಿರುತ್ತದೆ! ಈ ವರ್ಷಗಳಲ್ಲಿ ಕಾಂಗ್ರೆಸ್ ಗಳಿಸಿದ್ದು- ಜನರ ಪ್ರೀತಿ ಮತ್ತು ಅವರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಕಾಂಗ್ರೆಸ್ ಸಹಾಯ ಮಾಡುತ್ತದೆ ಎಂಬ ಅವರ ಸಂಪೂರ್ಣ ನಂಬಿಕೆ ಎಂದು ಜನಸಮೂಹ ಸೇರಿರುವ ಫೋಟೋವನ್ನು ಡಿಕೆಶಿ ಅವರು ಟ್ವೀಟ್ ಮಾಡಿದ್ದಾರೆ.