ಬೆಂಗಳೂರು: ಯಾವುದೇ ಪ್ರಕರಣದಲ್ಲಿ ಅನಾಥ ಸಿಡಿ ಅಥವಾ ಸ್ಟಿಂಗ್ ಆಪರೇಷನ್ ಮೂಲಕ ಮಾಡಿದ ಸಿ.ಡಿಗಳನ್ನು ನ್ಯಾಯಾಲಯ ಸ್ಯಾಕ್ಷ್ಯವಾಗಿ ಪರಿಗಣಿಸುವುದಿಲ್ಲ ಎಂಬ ಸಾಮಾನ್ಯ ಜ್ಞಾನ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಇಲ್ಲದಿರುವುದು ದುರದೃಷ್ಟಕರ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆರೋಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿ, ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಆಂತರಿಕ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಡಿರುವ ಮಾತುಗಳ ಸಿಡಿಯನ್ನೇ ಮುಂದಿಟ್ಟುಕೊಂಡು ಮಾಜಿ ಸಿಎಂ ಸಿದ್ದರಾಮಯ್ಯನವರು ಸುಪ್ರೀಂ ಕೋರ್ಟ್‌ಗೆ ಹೋಗಿರುವುದು ಹಾಸ್ಯಾಸ್ಪದ.
ಸಿದ್ದರಾಮಯ್ಯ ಅವರು ಧರ್ಮಸ್ಥಳದ ಶಾಂತಿವನದಲ್ಲಿ ಬೆಂಬಲಿಗರೊಂದಿಗೆ ಅನೌಪಚಾರಿಕವಾಗಿ ಮಾತನಾಡುವಾಗ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿರುವ ಸಿಡಿ ಬಿಡುಗಡೆಯಾಗಿತ್ತು. ತಾವು ಒಬ್ಬ ವಕೀಲರಾಗಿ, ಕಾನೂನು ತಿಳಿದುಕೊಂಡಿದ್ದು, ಎವಿಡೆನ್ಸ್ ಆಕ್ಟ್ ಸೆಕ್ಷನ್ 65ರ ಪ್ರಕಾರ ಯಾವುದೇ ಪ್ರಕರಣದಲ್ಲಿ ಅನಾಥ ಸಿಡಿ ಅಥವಾ ಸ್ಟಿಂಗ್ ಆಪರೇಷನ್ ಮೂಲಕ ಮಾಡಿದ ಸಿ.ಡಿಗಳನ್ನು ನ್ಯಾಯಾಲಯ ಸ್ಯಾಕ್ಷ್ಯವಾಗಿ ಪರಿಗಣಿಸುವುದಿಲ್ಲ ಎಂಬ ಸಾಮಾನ್ಯ ಜ್ಞಾನ ನಿಮಗೆ ಇಲ್ಲವೇ? ಎಂದು ಪ್ರಶ್ನಿಸಿದರು.
ಸಿಡಿ ಸಿದ್ದರಾಮಯ್ಯ ಅವರ ಪುರಾಣ ತುಂಬಾ ಇದೆ. ಈ ಹಿಂದೆ ದಿವಂಗತ ಅನಂತಕುಮಾರ್ ಹಾಗೂ ಸಿಎಂ ಯಡಿಯೂರಪ್ಪ ವಿರುದ್ಧ ನಕಲಿ ಸಿಡಿ ಬಿಡುಗಡೆ ಮಾಡಿದ್ದರು. ಡಿ.ಕೆ.ಶಿವಕುಮಾರ್, ಜೆಡಿಎಸ್ ಧ್ವಜ ಹಿಡಿದಿದ್ದ ಸಿಡಿ ಹೀಗೆ ಹಲವು ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್‌ಗೆ ಅಪಮಾನ ಮಾಡಿದ್ದಾರೆ. ಬಿಜೆಪಿಯನ್ನು ಹೆದರಿಸಲು ನಕಲಿ ಸಿಡಿ ಮಾಡಿದ್ದಾರೆ. ಇದಕ್ಕೆಲ್ಲ ಬಿಜೆಪಿ ಹೆದರುವುದಿಲ್ಲ ಎಂದು ಹೇಳಿದರು.