ಶಿವಮೊಗ್ಗ: ಕುವೆಂಪು ಅವರನ್ನು ಅವಮಾನ ಮಾಡಿದ್ದು ಸಿದ್ದರಾಮಯ್ಯ, ಹಾಗಾಗಿ ಮೊದಲು ಅವರು ವಿರೋಧ ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಯಲಿ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.
ಪಠ್ಯ ಪುಸ್ತಕದಲ್ಲಿ ಕುವೆಂಪು, ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ ಎನ್ನುವ ಕಾಂಗ್ರೆಸ್ ನವರ ಆರೋಪಕ್ಕೆ, ಸುದ್ದಿಗಾರರೊಂದಿಗೆ ಮಾತನಾಡಿ, ನೈತಿಕತೆ ಇದ್ದರೆ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಳಿಕ ನಮ್ಮ ಬಗ್ಗೆ ಮಾತನಾಡಲಿ ಎಂದರು.
ಕುವೆಂಪು ಅವರ ನಾಡಗೀತೆ ತಿರುಚಿದ್ದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ 2017ರಲ್ಲಿ. ಆಗ ಒಂದು ಕ್ರಮಕೈಗೊಳ್ಳಲಿಲ್ಲ. ದ್ವೇಷದಿಂದ ಆಗ ಫಾರ್ವಡ್ ಮಾಡಿದ್ದ ರೋಹಿತ್ ಚಕ್ರತೀರ್ಥ ಮೇಲೆ ಕೇಸ್ ಹಾಕಿದ್ದರು. ಅದಕ್ಕೂ ಅವರದೇ ಸರ್ಕಾರ ಬಿ ರಿಪೋರ್ಟ್ ಕೊಟ್ಟಿತ್ತು. ಬರೆದವನು ಅವರ ಪೈಕಿ ಕಾಂಗ್ರೆಸ್ ನವನಾಗಿರಬೇಕು ಹಾಗಾಗಿ ಆವಾಗ ಅವರ ಮೇಲೆ ಕೇಸ್ ದಾಖಲಿಸಲಿಲ್ಲ. ಕುವೆಂಪು ಅವರ ರಾಮಾಯಣ ದರ್ಶನಂ ಪಾಠವನ್ನು ತೆಗೆದು ಅವಮಾನ ಮಾಡಿದ್ದು ಅವರು. ನಾವು ಈಗ ಪಬ್ಲಿಕ್ ಡೊಮೈನ್ ಗೆ ಹಾಕುತ್ತೇವೆ ಎಂದಾಗ, ಜನರಿಗೆ ಲೆಫ್ಟಿಸ್ಟ್ ವಿಚಾರ ತುಂಬಿ ರಾಷ್ಟ್ರೀಯ ವಿಚಾರವನ್ನು ತಗೆದಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಹೆದರಿಕೆಯಿಂದ ಈ ರೀತಿ ಕೆಲಸ ಮಾಡುತ್ತಿದ್ದಾರೆ ಎಂದರು.
ವೈಚಾರಿಕವಾಗಿ ಮಾತನಾಡಲು ಅವರ ಬಳಿ ಏನೂ ಇಲ್ಲ. ಹಾಗಾಗಿ ನಮ್ಮ ಬಗ್ಗೆ ಮಾತನಾಡುತ್ತಾರೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿಗಳನ್ನು ಅವರ ಕೈಯಲ್ಲಿ ಸಹಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ಜನರನ್ನು ದಾರಿ ತಪ್ಪಿಸಲು ಏನೇನೊ ಹೇಳುತ್ತಿದ್ದಾರೆ ಎಂದರು.
ಇದನ್ನೂ ಓದಿ:ಇಳಕಲ್ ಮತ ಪೆಟ್ಟಿಗೆಯಲ್ಲಿ ಗೊಂದಲ: ತನಿಖೆಗೆ ಪಕ್ಷೇತರ ಅಭ್ಯರ್ಥಿ ಆಗ್ರಹ
ಇನ್ನೂ ಅವರು ಕೇಸರಿಕರಣ ಎಂದರೆ ಏನು? ಅದನ್ನು ಏನು ಮಾಡಿದ್ದೇವೆ ಎಂದು ಅವರು ಮೊದಲು ಹೇಳಲಿ. ಆಗ ಅದರ ಬಗ್ಗೆ ಮಾತನಾಡಲು ರೆಡಿ ಇದ್ದೇವೆ. ಅವರ ಬಳಿ ಏನು ಇಲ್ಲ. ನಾವು ಪಠ್ಯ ಪುಸ್ತಕ ದಿಂದ ನಾರಾಯಣ ಗುರು ತೆಗೆದಿಲ್ಲ. ಭಗತ್ ಸಿಂಗ್ ಪಾಠ ತೆಗೆದಿಲ್ಲ, ಬಸವಣ್ಣನವರದ್ದು ತೆಗೆದಿಲ್ಲ ಈ ದೇಶಕ್ಕೆ ಅರಾಷ್ಟ್ರಿಯ ವಿಚಾರ ತುಂಬುವ ಪ್ರಯತ್ನ ಮಾಡಿರುವುದು ಆಚೆ ಬರುತ್ತದೆ ಎಂದು ಈ ರೀತಿಯಲ್ಲಿ ಅವರು ಮಾತನಾಡುತ್ತಿದ್ದಾರೆ ಎಂದರು.