Advertisement

ಸಿದ್ದರಾಮಯ್ಯರದ್ದು ಭ್ರಷ್ಟ-ನೀಚ ಸರ್ಕಾರ

11:36 AM Mar 27, 2018 | Team Udayavani |

ದಾವಣಗೆರೆ: ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕಿಂತ ಭ್ರಷ್ಟ, ನೀಚ ಸರ್ಕಾರ ಇನ್ನೊಂದಿಲ್ಲ ಎಂದು ಹಿರೇಕೇರೂರು ಶಾಸಕ, ಬಿಜೆಪಿಯ ಮಾಯಕೊಂಡ ಕ್ಷೇತ್ರದ ಉಸ್ತುವಾರಿ ಯು.ಬಿ. ಬಣಕಾರ್‌ ಜರೆದಿದ್ದಾರೆ.

Advertisement

ಸೋಮವಾರ, ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಾಯಕೊಂಡ ಕ್ಷೇತ್ರದ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ. ಜಾತೀಯತೆ ಬಿತ್ತುತ್ತಿದೆ. ಇಂತಹ ನೀಚ ಸರ್ಕಾರವನ್ನು ನಾನೆಂದೂ ನೋಡಿಲ್ಲ ಎಂದರು.

ಮುಖ್ಯಮಂತ್ರಿ, ಲಿಂಗಾಯತ ಪ್ರತ್ಯೇಕ ಧರ್ಮ ವಿಷಯ ಎತ್ತಿಕೊಂಡು ರಾಜ್ಯದ ಬಹುದೊಡ್ಡ ಸಮಾಜದಲ್ಲಿ ಒಡಕು ಮೂಡಿಸಿದ್ದಾರೆ. ಲಿಂಗಾಯತ-ವೀರಶೈವ ಎಂಬ ಎರಡು ಪಂಗಡ ಸೃಷ್ಟಿಸಿ, ಜಗಳ ಹಚ್ಚಿದ್ದಾರೆ. ಇಂತಹವರಿಗೆ ತಕ್ಕ ಪಾಠ ಕಲಿಸಬೇಕು. ಬಿ.ಎಸ್‌. ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿ ಮಾಡಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಅವರು ತಿಳಿಸಿದರು.

ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಅತ್ಯುತ್ತಮ ಆಡಳಿತ ನಡೆಸುತ್ತಿದೆ. ದೇಶದ ಅಭಿವೃದ್ಧಿಗೆ ಒತ್ತು ನೀಡಿದೆ. ಬಡ, ಸಾಮಾನ್ಯ, ದಲಿತ ವರ್ಗದವರ ಅಭಿವೃದ್ಧಿಗಾಗಿ ಹಲವು ಯೋಜನೆ ತಂದಿದೆ. ಇನ್ನೂ ಹಲವು ಯೋಜನೆ ಜಾರಿಗೆ ಉತ್ಸುಕವಾಗಿದೆ. ಇದೇ ಮಾದರಿಯ ಸರ್ಕಾರ ರಾಜ್ಯದಲ್ಲಿ ಬರಬೇಕು. ದೇಶದಲ್ಲಿ ಕಾಂಗ್ರೆಸ್‌ ಪಕ್ಷವೇ ಇರಬಾರದು. ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಕಾರ್ಯವನ್ನು ನೀವೆಲ್ಲಾ ಮಾಡಬೇಕು ಎಂದು ಅವರು ತಿಳಿಸಿದರು. 

ಸಮಾವೇಶ ಉದ್ಘಾಟಿಸಿ, ಮಾತನಾಡಿದ ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌, ನಮ್ಮ ಗುರಿ ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸೀಟು ಗೆಲ್ಲುವುದಾಗಿದೆ. ಮಾಯಕೊಂಡ ಕ್ಷೇತ್ರದ ಕಾರ್ಯಕರ್ತರು ಈ 150ರಲ್ಲಿ ನಮ್ಮ ಕ್ಷೇತ್ರ ಇರಲಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಮ್ಮ ನಮ್ಮಲ್ಲಿ ವೈಮನಸ್ಸು ಸೃಷ್ಟಿಸಿಕೊಂಡು ಕ್ಷೇತ್ರದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವಂತೆ ಮಾಡಬಾರದು ಎಂದು ಅವರು ತಿಳಿಸಿದರು.

Advertisement

ಅವಿಭಾಜಿತ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆಯಲು ಕಾರಣವಾಗಿದ್ದು ಇದೇ ಮಾಯಕೊಂಡ ಕ್ಷೇತ್ರ. ಅದಾದ ನಂತರ ಸತತ 4 ಬಾರಿ ಈ ಕ್ಷೇತ್ರದ ಜನರು ಬಿಜೆಪಿ ಗೆಲ್ಲಿಸಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಕಾರ್ಯಕರ್ತರು ಫಲಿತಾಂಶಕ್ಕೆ ಮನಸ್ಸು ಮಾಡಬೇಕಿದೆ. ಸದ್ಯದ ಸ್ಥಿತಿಯಲ್ಲಿ ನಿಮ್ಮ ಶಕ್ತಿ ಕಡಿಮೆಯಾಗಿದೆ. ಮತ್ತೆ ರಿಚಾರ್ಜ್‌ ಆಗಲು ಕ್ಷೇತ್ರದ ಮುಖಂಡರು ಕಾರ್ಯಕರ್ತರಿಗೆ ಶಕ್ತಿ ತುಂಬಬೇಕಿದೆ ಎಂದು ಅವರು ತಿಳಿಸಿದರು.

ಪಕ್ಷದ ಮಾಯಕೊಂಡ ಮಂಡಲದ ಅಧ್ಯಕ್ಷ ಡಿ.ಇ. ಮೆಳ್ಳೇಕಟ್ಟೆ ನಾಗರಾಜ್‌, ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಜಿಪಂ ಉಪಾಧ್ಯಕ್ಷೆ ಗೀತಾ ಗಂಗಾನಾಯ್ಕ, ಸದಸ್ಯರಾದ ಶೈಲಜಾ, ನಟರಾಜ, ಮಾಜಿ ಸದಸ್ಯೆ ಸಹನಾ, ಮುಖಂಡರಾದ ಎನ್‌. ನಿಂಗಣ್ಣ, ಆನಂದಪ್ಪ, ಎಂ.ಪಿ. ನಾಯ್ಕ, ಹನುಮಂತ ನಾಯ್ಕ, ವೆಂಕಟಪ್ಪ, ಗುಡ್ಡೇಶ, ಕೆ.ಎಸ್‌. ಬಸವರಾಜ, ಕೆ.ಎನ್‌. ಓಂಕಾರಪ್ಪ, ರಮೇಶ ನಾಯ್ಕ, ಟಿಪ್ಪು ಸುಲ್ತಾನ್‌ ಇತರರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next