Advertisement
ಉರಿವ ಬಿಸಿಲಿನಲ್ಲಿ ತೆರೆದ ವಾಹನದಲ್ಲಿ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ರೋಡ್ ಶೋ ನಡೆಸಿದ್ದರಿಂದ ಬಳಲಿದ್ದರೂ ಬಿಸಿಲಿನಿಂದ ರಕ್ಷಣೆ ಪಡೆಯಲು ಕಾಂಗ್ರೆಸ್ ಟೋಪಿ, ತಂಪು ಕನ್ನಡಕ ಹಾಕಿಕೊಂಡು, ಮಧ್ಯೆ ಮಧ್ಯೆ ನೀರು ಕುಡಿಯುತ್ತಾ ದಣಿವಾರಿಸಿಕೊಂಡು ಉತ್ಸಾಹದಿಂದಲೇ ಮುನ್ನಡೆದರು.
Related Articles
Advertisement
ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಮಾಜಿ ಶಾಸಕ ಸತ್ಯನಾರಾಯಣ, ಜಿಪಂ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವು, ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್, ಜಿಪಂ ಸದಸ್ಯ ರಾಕೇಶ್ ಪಾಪಣ್ಣ ಮುಂತಾದವರು ಜತೆಗಿದ್ದರು.
750ಕೆಜಿ ಸೇಬಿನ ಹಾರ ಹಾಕಿ ಸ್ವಾಗತ: ಮೈಸೂರು-ತಲಚೇರಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಹೂಟಗಳ್ಳಿ ಗ್ರಾಮದಲ್ಲಿ ಭಾನುವಾರ ಸೇಬಿನ ಭಾರೀ ಗಾತ್ರದ ಹಾರವೇ ಕೇಂದ್ರ ಬಿಂದು. ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿ ರೋಡ್ ಶೋ ನಡೆಸುವ ಮೂಲಕ ಮತಬೇಟೆ ಆರಂಭಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಒಕ್ಕಲಿಗ ಮತದಾರರ ಪ್ರಾಬಲ್ಯವಿರುವ ಇಲವಾಲ ಹೋಬಳಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ್ದರು.
ಮತಬೇಟೆಗೆ ಹೂಟಗಳ್ಳಿಗೆ ಆಗಮಿಸಿದ ಮುಖ್ಯಮಂತ್ರಿಯವರನ್ನು ಸಿದ್ದರಾಮಯ್ಯ ಅಭಿಮಾನಿ ಬಳಗದವರು ಸ್ವಾಗತಿಸಿದ್ದು, ಬರೋಬ್ಬರಿ 750 ಕೆಜಿ ತೂಕದ ಸೇಬಿನ ಬೃಹತ್ ಹಾರ ಹಾಕುವ ಮೂಲಕ. ಹೂಟಗಳ್ಳಿಯಲ್ಲಿ ಭಾನುವಾರ ವಾರದ ಸಂತೆ. ಅದರ ಜತೆಗೆ ಸಿದ್ದರಾಮಯ್ಯ ಅವರ ರೋಡ್ ಶೋ ಎರಡೂ ಒಟ್ಟಿಗೆ ಇದ್ದಿದ್ದರಿಂದ ಹುಣಸೂರು ರಸ್ತೆಯಲ್ಲಿ ಕಿಕ್ಕಿರಿದು ಜನ ಸೇರಿದ್ದರು. ಹೀಗಾಗಿ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 1ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.
ಬೆಳಗ್ಗೆ 10.30ಕ್ಕೆ ಸಿದ್ದರಾಮಯ್ಯ ಅವರ ಭೇಟಿ ನಿಗದಿಯಾಗಿತ್ತು. ಹೀಗಾಗಿ ಹೂಟಗಳ್ಳಿಯ ಸಿದ್ದರಾಮಯ್ಯ ಅಭಿಮಾನಿ ಬಳಗದವರು ಪೈಲ್ವಾನ್ ದೇಶೀಗೌಡ ನೇತೃತ್ವದಲ್ಲಿ 750 ಕೆಜಿ ತೂಕದ 3000 ಹಣ್ಣುಗಳಿಂದ ಕೂಡಿದ ಭಾರೀ ಗಾತ್ರದ ಸೇಬಿನ ಹಣ್ಣು ಹಾರ ಮಾಡಿಸಿದ್ದರು.
ಈ ಬೃಹತ್ ಹಾರವನ್ನು ಹೊತ್ತು ತರಲು ಕ್ರೇನ್ ಬಳಸಲಾಗಿತ್ತು. ಬೆಳಗ್ಗೆ 10ಗಂಟೆಗೆ ಕ್ರೇನ್ ನಲ್ಲಿ ಸೇಬು ಹಣ್ಣಿನ ಹಾರವನ್ನು ತಂದು ನಿಲ್ಲಿಸಿದ್ದರಿಂದ ರಸ್ತೆಯಲ್ಲಿ ಹಾದು ಹೋಗುವ ಪ್ರಯಾಣಿಕರು, ಸ್ಥಳೀಯ ಗ್ರಾಮಸ್ಥರ ಚಿತ್ತ ಇತ್ತಲೇ ನೆಟ್ಟಿತ್ತು. ಹೋಗುವವರು-ಬರುವವರೆಲ್ಲ ಅದರ ಫೋಟೋ ತೆಗೆದುಕೊಂಡು, ಸೆಲ್ಫಿ ತೆಗೆದುಕೊಂಡು ಮುಂದೆ ಸಾಗುತ್ತಿದ್ದರು.
ಈ ಮಧ್ಯೆ ಭಾರ ತಡೆಯಲಾರದೆ ಸೇಬು ಹಣ್ಣಿನ ಹಾರ ಕ್ರೇನ್‌ನಿಂದ ಕಳಚಿಬಿತ್ತು. ಅಭಿಮಾನಿಗಳೆಲ್ಲ ಸೇರಿ ಹತ್ತು ನಿಮಿಷದಲ್ಲಿ ಮತ್ತೆ ಕಟ್ಟಿ ನಿಲ್ಲಿಸಿದರು. ಇತ್ತ ಟಿ.ಕೆ.ಲೇಔಟ್‌ನ ತಮ್ಮ ಮನೆಯಿಂದ ಆಪ್ತರೊಂದಿಗೆ ಹೊರಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲಿಗೆ ಹೂಟಗಳ್ಳಿ ಎಸ್‌ಆರ್‌ಎಸ್ ಕಾಲೋನಿಗೆ ಭೇಟಿ ನೀಡಿ, ರೋಡ್ ಶೋ ನಡೆಸಿ ಹೂಟಗಳ್ಳಿಗೆ ಬಂದರು. ಕ್ರೇನ್ ಮೂಲಕ ಅವರಿಗೆ ಬೃಹತ್ ಸೇಬಿನ ಹಾರ ಹಾಕಿ ಮುಖ್ಯಮಂತ್ರಿಯವರನ್ನು ಬರ ಮಾಡಿಕೊಳ್ಳಲಾಯಿತು.
ಸೇಬು ಹಣ್ಣಿನ ಬೃಹತ್ ಹಾರವನ್ನು ಕಂಡು ಅಚ್ಚರಿಗೊಂಡ ಸಿದ್ದರಾಮಯ್ಯ ಅವರು, ಹಾರವನ್ನು ಕೈಯಿಂದ ಮುಟ್ಟಿನೋಡಿ ಹಾರದಿಂದ ಒಂದು ಹಣ್ಣನ್ನು ಕಿತ್ತು ಸಿಗಿದು ತಿನ್ನುವ ಪ್ರಯತ್ನ ಮಾಡಿದರಾದರೂ ಸಾಧ್ಯವಾಗಲಿಲ್ಲ. ಹೀಗಾಗಿ ಮೂರ್‍ನಾಲ್ಕು ಹಣ್ಣುಗಳನ್ನು ಕಿತ್ತು ಘೋಷಣೆ ಕೂಗುತ್ತಿದ್ದ ಅಭಿಮಾನಿಗಳಿಗೆ ಕ್ಯಾಚ್ ನೀಡಿದರು.
ಹೆದ್ದಾರಿ ಬದಿಯಲ್ಲೇ ತೆರೆದ ವಾಹನದಲ್ಲಿ ನಿಂತು ಭಾಷಣ ಮಾಡಿ ಮತಯಾಚನೆ ಮಾಡಿದ ಅವರು ಗ್ರಾಮದೊಳಗೆ ಪ್ರವೇಶಿಸುತ್ತಿದ್ದಂತೆ ಇತ್ತ ನೆರೆದಿದ್ದ ಜನತೆ ಕ್ರೇನ್ ನಲ್ಲಿದ್ದ ಸೇಬಿನ ಹಾರದ ಮೇಲೆ ಮುಗಿಬಿದ್ದು, ಕೈಗೆ ಸಿಕ್ಕಷ್ಟು ಹೊತ್ತೂಯ್ದರು. ಜನರ ಈ ಕಿತ್ತಾಟದಲ್ಲಿ ಹತ್ತಾರು ಕೆಜಿ ಹಣ್ಣು ರಸ್ತೆ ಪಾಲಾಯಿತು.
* ಗಿರೀಶ್ ಹುಣಸೂರು