Advertisement

ನೆರೆ ನೆಪದಲ್ಲಿ ಸಿದ್ದರಾಮಯ್ಯ ಚುನಾವಣಾ ತಾಲೀಮು

11:17 PM Aug 29, 2019 | Lakshmi GovindaRaj |

ಬೆಳಗಾವಿ: ನೆರೆ ಹಾವಳಿ ಪ್ರದೇಶಗಳ ವೀಕ್ಷಣೆ ಹಾಗೂ ಸಂತ್ರಸ್ತರ ಭೇಟಿ ನೆಪದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆಗೆ ಬಂದು ಹೋಗಿರುವುದು ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ.

Advertisement

ಸಿದ್ದರಾಮಯ್ಯ ಭೇಟಿ ಹಿಂದೆ ರಾಜಕೀಯ ಉದ್ದೇಶವೂ ಇತ್ತು ಎಂಬುದು ಕಾಂಗ್ರೆಸ್‌ ಮುಖಂಡರ ಹೇಳಿಕೆ. ಉಪಚುನಾವಣೆ ಇಲ್ಲವೇ ಮಧ್ಯಂತರ ಚುನಾವಣೆ ಸಿದ್ಧತೆ ಸುಳಿವು ನೀಡಿದೆ. ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಅನರ್ಹ ಶಾಸಕರ ಕ್ಷೇತ್ರಗಳ ಕಾಂಗ್ರೆಸ್‌ ಆಕಾಂಕ್ಷಿಗಳ ಪಟ್ಟಿಯೂ ಸಿದ್ಧವಾಗಿದ್ದು ರಾಜಕೀಯ ಚಟುವಟಿಕೆಗಳು ಸದ್ದಿಲ್ಲದೇ ಆರಂಭಗೊಂಡಿವೆ.

ಅನರ್ಹ ಶಾಸಕರ ಕ್ಷೇತ್ರಗಳಾದ ಅಥಣಿ, ಕಾಗವಾಡ ಹಾಗೂ ಗೋಕಾಕ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ತೋರಿ ಜನರ ಕಷ್ಟ ಕೇಳಿದ್ದಲ್ಲದೇ ಸಭೆಗಳನ್ನೂ ನಡೆಸಿರುವುದು ಇದಕ್ಕೆಲ್ಲ ಪುಷ್ಟಿ ನೀಡಿದೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾದರೆ ಅದಕ್ಕೆ ಸಿದ್ಧವಾಗಿರಬೇಕೆಂಬ ಉದ್ದೇಶದಿಂದಲೇ ಸಿದ್ದರಾಮಯ್ಯ ಪ್ರವಾಸ ಕೈಗೊಂಡಿದ್ದಾರೆ ಎಂಬುದು ಈಗ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಅಥಣಿ, ಕಾಗವಾಡ ಹಾಗೂ ಗೋಕಾಕ ಕ್ಷೇತ್ರಗಳಿಗೆ ಈಗ ಶಾಸಕರು ಇಲ್ಲ. ಅನರ್ಹತೆ ಶಿಕ್ಷೆಗೆ ಗುರಿಯಾಗಿರುವ ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ ಹಾಗೂ ರಮೇಶ ಜಾರಕಿಹೊಳಿ ತಮ್ಮ ಅನರ್ಹತೆ ಶಿಕ್ಷೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲು ಹತ್ತಿದ್ದಾರೆ. ಈ ಮೂವರೂ ಶಾಸಕರು ಈಗಾಗಲೇ ಕಾಂಗ್ರೆಸ್‌ನಿಂದ ಹೊರಗಡೆ ಕಾಲಿಟ್ಟಿರುವುದು ಸ್ಪಷ್ಟ. ಅವರ ಸ್ಥಾನ ತುಂಬಲು ಈಗ ಕಾಂಗ್ರೆಸ್‌ನಲ್ಲಿ ತಯಾರಿ ನಡೆದಿದೆ. ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಈ ಮೂರು ಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡರು.

ತಮ್ಮ ಭೇಟಿ ಕಾಲಕ್ಕೆ ಸಿದ್ದರಾಮಯ್ಯ ಈ ಮೂರೂ ಕ್ಷೇತ್ರಗಳಲ್ಲಿ ಸಂಭವನೀಯ ಅಭ್ಯರ್ಥಿಗಳನ್ನೇ ಕರೆದುಕೊಂಡು ಓಡಾಡಿದ್ದಾರೆ. ಅಥಣಿ ಕ್ಷೇತ್ರದಲ್ಲಿ ಮಾಜಿ ಶಾಸಕ ಶಹಜಹಾನ ಡೊಂಗರಗಾವ, ಕಿರಣ ಪಾಟೀಲ ಮೊದಲಾದವರು ಸಿದ್ದರಾಮಯ್ಯಗೆ ಸಾಥ್‌ ನೀಡಿದ್ದರೆ, ಕಾಗವಾಡದಲ್ಲಿ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಮಾಜಿ ಶಾಸಕ ಮೋಹನ ಶಹಾ ಇದ್ದರು. ಗೋಕಾಕ ತಾಲೂಕಿನಲ್ಲಿ ಲಖನ್‌ ಜಾರಕಿಹೊಳಿ ಸಿದ್ದರಾಮಯ್ಯ ಜೊತೆ ಓಡಾಡಿದ್ದಾರೆ.

Advertisement

ಅಥಣಿಗೆ ಏಕೆ ಮಹತ್ವ?: ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋತಿದ್ದ ಲಕ್ಷ್ಮಣ ಸವದಿ ಪಕ್ಷದ ವರಿಷ್ಠರಲ್ಲಿ ತಮ್ಮ ಪ್ರಭಾವ ಬಳಸಿ ಈಗ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವುದರಿಂದ ಇಲ್ಲಿಯ ಉಪಚುನಾವಣೆ ಎಲ್ಲರ ಗಮನಸೆಳೆಯುವಂತೆ ಮಾಡಿದೆ. ಜೊತೆಗೆ ಕಾಂಗ್ರೆಸ್‌ಗೂ ಇದು ಪ್ರತಿಷ್ಠೆಯಾಗಿ ಪರಿಣಮಿಸಿದ್ದು ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಯಾರಿಗೆ ಎನ್ನುವ ಕುತೂಹಲ ಇದೆ.

15 ವರ್ಷಗಳ ನಂತರ ಈ ಕ್ಷೇತ್ರ ಕಾಂಗ್ರೆಸ್‌ ತೆಕ್ಕೆಗೆ ಬಂದಿತ್ತು. ಮಹೇಶ ಕುಮಟಳ್ಳಿ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲು ಹತ್ತಿ, ಕೊನೆಗೆ ಅನರ್ಹತೆ ಶಿಕ್ಷೆಗೆ ಗುರಿಯಾದರು. ಈಗ ಅವರ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಹುಡುಕಾಟ ನಡೆದಿದೆ. ಲಕ್ಷ¾ಣ ಸವದಿ ಉಪ ಮುಖ್ಯಮಂತ್ರಿ ಆಗಿರುವುದು ಹಾಗೂ ಮುಂದಿನ ಚುನಾವಣೆಯಲ್ಲಿ ಬಹುತೇಕ ಅವರೇ ಬಿಜೆಪಿ ಅಭ್ಯರ್ಥಿಯಾಗಲಿರುವುದರಿಂದ ಕಾಂಗ್ರೆಸ್‌ನಿಂದ ಪ್ರಮುಖ ನಾಯಕರನ್ನೇ ಕಣಕ್ಕಿಳಿಸುವ ಜವಾಬ್ದಾರಿ ಸಿದ್ದರಾಮಯ್ಯ ಮೇಲಿದೆ. ಈ ನಿಟ್ಟಿನಲ್ಲಿ ಅಥಣಿ ಪ್ರವಾಸ ಕೈಗೊಂಡಿದ್ದು ಮಹತ್ವ ಪಡೆದುಕೊಂಡಿದೆ.

ಕಾಗವಾಡಕ್ಕೆ ಶಹಾ?: ಮೂಲಗಳ ಪ್ರಕಾರ ಕಾಗವಾಡ ಕ್ಷೇತ್ರಕ್ಕೆ ಮಾಜಿ ಶಾಸಕ ಮೋಹನ ಶಹಾ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹೆಸರು ಸಹ ಕೇಳಿಬರುತ್ತಿದೆ. ಆದರೆ ಹುಕ್ಕೇರಿ ಆಸಕ್ತಿ ತೋರಿಸಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ, ಮೋಹನ ಶಹಾ ಅವರಿಗೆ ಕ್ಷೇತ್ರದಲ್ಲಿ ನಿರಂತರ ಸಂಚಾರ ಮಾಡಿ ತಯಾರಿ ಮಾಡಿಕೊಳ್ಳುವಂತೆ ಮೌಖೀಕವಾಗಿ ಸೂಚಿಸಿದ್ದಾರೆ ಎಂಬುದು ಪಕ್ಷದ ಮುಖಂಡರ ಹೇಳಿಕೆ.

ಕುತೂಹಲದ ಗೋಕಾಕ: ಗೋಕಾಕ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪ್ರವಾಸ ಸಾಕಷ್ಟು ಕುತೂ ಹಲ ಹುಟ್ಟಿಸಿತ್ತು. ಈಗಾಗಲೇ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಲಖನ್‌ ಜಾರಕಿಹೊಳಿ ಹಾಗೂ ಅವರಿಗೆ ಬೆಂಬಲವಾಗಿ ನಿಂತಿರುವ ಸತೀಶ ಜಾರಕಿಹೊಳಿ ತಮ್ಮ ನಾಯಕ ಸಿದ್ದರಾಮಯ್ಯ ಜೊತೆ ಓಡಾಡಿ ಚುನಾವಣೆ ತಯಾರಿ ಮುನ್ಸೂಚನೆ ನೀಡಿದ್ದಾರೆ. ಒಂದು ವೇಳೆ ಅನರ್ಹತೆ ಶಿಕ್ಷೆಯಿಂದ ಪಾರಾಗಿ ಉಪ ಚುನಾವಣೆ ಯಲ್ಲಿ ರಮೇಶ ಜಾರಕಿಹೊಳಿ ಸ್ಪರ್ಧೆ ಮಾಡಿದ್ದೇ ಆದರೆ ಅವರ ವಿರುದ್ಧ ಲಖನ್‌ ನಿಲ್ಲುವುದು ಖಚಿತವೇ ಎಂಬ ಕುತೂಹಲ ಈಗ ಕ್ಷೇತ್ರದ ಜನರಲ್ಲಿದೆ.

* ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next