ಕೊಪ್ಪಳ: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿ ನಾವೆಲ್ಲ ಹಿಂದೂಗಳೇ. ಸಿ.ಟಿ.ರವಿಗೆ ಬೇರೆ ಕೆಲಸವಿಲ್ಲ. ಸುಮ್ಮನೆ ಧರ್ಮದ ವಿಷಯ ತಂದಿಟ್ಟು ಜನರನ್ನು ರೊಚ್ಚಿಗೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ ಅಮರೇಗೌಡ ಬಯ್ಯಾಪೂರ ಆರೋಪಿಸಿದರು.
ಸುದ್ದಿಗಾರರ ಜತೆ ಮಾತನಾಡಿ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆಯಾಗುತ್ತೆ ಎನ್ನಲು ಸಿ.ಟಿ.ರವಿ ಏನು ಬ್ರಹ್ಮನಾ? ಅವರ ಕಾಲದಲ್ಲಿ ಹಿಂದೂಗಳ ಹತ್ಯೆಯೇ ಆಗಿಲ್ವಾ? ನಾವು ಹಿಂದೂ ಅಲ್ವಾ? ಸಿದ್ದರಾಮಯ್ಯ, ಡಿಕೆಶಿ ಹಿಂದೂ ಅಲ್ವಾ? ಬಾಯಿ ಇದೆ ಅಂತ ಏನೇನೋ ಮಾತಾಡುವುದಲ್ಲ. ಇನ್ನಾದರೂ ಅರಿತು ಮಾತನಾಡಲಿ. ಇಲ್ಲಾ ಅಂದರೆ ನಾವು ಹಿಂದೂಗಳು ಏನು ಎನ್ನುವುದನ್ನು ತೋರಿಸಬೇಕಾಗುತ್ತದೆ ಎಂದರು.
ದೇಶದಲ್ಲಿರೋ ಪ್ರತಿಯೊಬ್ಬನು ಇಲ್ಲಿನ ನಾಗರಿಕರು. ಹೀಗಾಗೇ ಎಲ್ಲರನ್ನ ಸಮಾನರನ್ನಾಗಿ ಕಾಣೋರು ನಾವು. ಬಾಂಬ್ ಹಾಕೋರಿಗೆ ಕಾಂಗ್ರೆಸ್ ಬಿರ್ಯಾನಿ ಕೊಡ್ತಾರೆ ಎನ್ನುವ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ಬಿರ್ಯಾನಿ ಕೊಟ್ಟಿದ್ದಾರೆ ಯಾರಿಗೆ ಕೊಟ್ಟಿದ್ದಾರೆ ಎನ್ನುವುದನ್ನು ಸಿ.ಟಿ.ರವಿ ಹೇಳಬೇಕು. ದುಷ್ಕೃತ್ಯ ಮಾಡೋರು ಭಾರತದಲ್ಲಿ ಮಾತ್ರ ಇಲ್ಲ. ಜಗತ್ತಿನೆಲ್ಲಡೆ ಇದ್ದಾರೆ. ಮೊದಲಿನಿಂದಲೂ ಇದ್ದಾರೆ. ಒಬ್ಬಿಬ್ಬರು ಮಾಡೋದರಿಂದ ಎಲ್ಲರನ್ನು ಒಂದೇ ದೃಷ್ಠಿಯಿಂದ ನೋಡಬಾರದು ಎಂದರು.
ಮಹಾರಾಷ್ಟ್ರ ಗಡಿ ತಂಟೆ ವಿಷಯವಾಗಿ ಮಹಾಜನ ವರದಿ ಅಂತಿಮವಾಗಿದೆ. ಸೌಹಾರ್ದಯುತವಾಗಿ ಬಿಟ್ಟುಕೊಡುವುದು. ನಮ್ಮ ತಂಟೆ ಅವರು ಬರಬಾರದು. ಗಡಿ ವಿವಾದ ಈಗ ಎರಡು ತಿಂಗಳಿನಿಂದ ಮುನ್ನಲೆಗೆ ಬಂದಿದೆ. ಮಾಧ್ಯಮದವರು ಸಹ ಯಾವುದು ಸರಿ, ತಪ್ಪು ಎಂಬುವುದು ತೋರಿಸಬೇಕು ಎಂದರು.
Related Articles
ಹೃದಯ ಪೂರ್ವಕ ಸ್ವಾಗತ
ಸಿದ್ದರಾಮಯ್ಯ ಅವರು ಕುಷ್ಟಗಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಅವರಿಗೆ ಹೃದಯ ಪೂರ್ವಕ ಸ್ವಾಗತ ಕೋರುವೆ. ಅಭೂತ ಪೂರ್ವ ಮತಗಳಿಂದ ಅವರನ್ನು ಗೆಲ್ಲಿಸಿ ಕಳಿಸಲಿದ್ದೇವೆ ಎಂದರಲ್ಲದೇ, ಕುಷ್ಟಗಿ ವಿಧಾನ ಸಭೆಗೆ ಹೆಚ್ಚು ಜನ ಟಿಕೆಟ್ ಕೇಳಬಹುದು. ಟಿಕೆಟ್ ನೀಡುವುದು ಹೈಕಮಾಂಡಿಗೆ ಬಿಟ್ಟ ವಿಚಾರ ಹಾಲಿ, ಮಾಜಿ ಶಾಸಕರಿಗೆ ಟಿಕೆಟ್ ನೀಡುವ ಕುರಿತು ಸಿದ್ದರಾಮಯ್ಯ ಹೇಳಿದ್ದಾರೆ. ಕೊಪ್ಪಳದಲ್ಲಿ ಐವರು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿರುವ ಸಿದ್ದರಾಮಯ್ಯರ ಹೇಳಿಕೆಯು ಸತ್ಯಕ್ಕೆ ಹತ್ತಿರದಲ್ಲಿದೆ. ಕುಷ್ಟಗಿ ಕ್ಷೇತ್ರಕ್ಕೆ ನನಗೆ ಟಿಕೆಟ್ ನೀಡುತ್ತಾರೆ ಎಂಬ ವಿಶ್ವಾಸವಿದೆ. ಕುಷ್ಟಗಿಯಲ್ಲಿ ಒಮ್ಮೆ ಗೆದ್ದವರು ಮತ್ತೊಮ್ಮೆ ಗೆದ್ದಿಲ್ಲ ಎಂಬ ವದಂತಿಯಿದೆ. ಆ ಇತಿಹಾಸ ಮುರಿಯಲು, ಅದನ್ನು ಸುಳ್ಳು ಮಾಡೋದಕ್ಕಾಗಿಯೇ ಚುನಾವಣೆಗೆ ನಿಲ್ಲುತ್ತೇನೆ ಎಂದರು.