Advertisement

ಸಿದ್ದರಾಮಯ್ಯ-ಡಿಕೆಶಿ ಪ್ರತಿಷ್ಠೆ: ಹೈಕಮಾಂಡ್‌ಗೂ ತಲೆಬಿಸಿ

01:36 AM May 25, 2022 | Team Udayavani |

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರತಿಷ್ಠೆಗೆ ಬಿದ್ದ ವಿಚಾರ ಪಕ್ಷದ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ, ಪ್ರಮುಖ ಸ್ಥಾನಮಾನ ಹಂಚಿಕೆ, ಪರಿಷತ್‌ಗೆ ಟಿಕೆಟ್‌ ಹೀಗೆ ಪ್ರತಿ ಹಂತದಲ್ಲೂ ಇಬ್ಬರ ನಡುವೆ ಸಮನ್ವಯತೆ ಮೂಡಿಸುವುದು ಹೈಕಮಾಂಡ್‌ಗೂ ತಲೆಬಿಸಿಯಾಗಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರನ್ನು ಸಮಾಧಾನಪಡಿಸುವುದೇ ಹರಸಾಹಸವಾಗಿದ್ದು, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌. ಮುನಿಯಪ್ಪ ಸೇರಿದಂತೆ ಹಿರಿಯ ನಾಯಕರ ಶಿಫಾರಸಿಗೂ ಬೆಲೆಯೇ ಇಲ್ಲದಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪರಿಷತ್‌ ಟಿಕೆಟ್‌ ವಿಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಶಿಫಾರಸು ಮಾಡಿದ್ದ ಹಿಂದುಳಿದ ಕೋಲಿ ಸಮಾಜದ ಅಭ್ಯರ್ಥಿಗೂ ಅವಕಾಶ ಸಿಕ್ಕಿಲ್ಲ, ಕೆ.ಎಚ್‌. ಮುನಿಯಪ್ಪ ಸೇರಿ ದಲಿತ ಎಡಗೈ ಸಮುದಾಯದ ನಾಯಕರ ಮನವಿಗೂ ಪುರಸ್ಕಾರ ದೊರೆತಿಲ್ಲ ಎಂಬ ಅಸಮಾಧಾನ ಉಂಟಾಗಿದೆ. ಪರಿಷತ್‌ನ ಎರಡು ಸ್ಥಾನಗಳಿಗೆ ಇಬ್ಬರ ನಡುವಿನ ಬಣ ರಾಜಕೀಯ ಮೇಲಾಟ ನಡೆದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಎಷ್ಟರ ಮಟ್ಟಿಗೆ ಜಟಾಪಟಿ ನಡೆಯಬಹುದು ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ.

ಹಠಕ್ಕೆ ಬಿದ್ದರು
ಟಿಕೆಟ್‌ ವಿಚಾರದಲ್ಲಿ ತಾವು ಹೇಳಿದ್ದೇ ನಡೆಯಬೇಕು ಎಂದು ಇಬ್ಬರೂ ನಾಯಕರು ಪ್ರತಿ ಬಾರಿಯು ಹಠಕ್ಕೆ ಬೀಳುವಂತಾಗಿದೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಇಬ್ಬರನ್ನೂ ಕರೆಸಿ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲಾ ಸಮಾಲೋಚನೆ ನಡೆಸಿದರೂ ಒಮ್ಮತ ಮೂಡಿರಲಿಲ್ಲ. ಒಂದು ಹಂತದಲ್ಲಿ ಸಿದ್ದರಾಮಯ್ಯ ಹಿಂದುಳಿದ, ಮುಸ್ಲಿಂ ಅಥವಾ ಕ್ರಿಶ್ಚಿಯನ್‌ ಅಭ್ಯರ್ಥಿ ಆಯ್ಕೆಗೆ ಒಪ್ಪಿ, ದಲಿತ ಸಮುದಾಯಕ್ಕೆ ಕೊಡುವುದಾದರೆ ತಮ್ಮ ಆಪ್ತ ವಿ.ಎಸ್‌. ಉಗ್ರಪ್ಪ ಹೆಸರು ಸೂಚಿಸಿದ್ದರು. ಡಿ.ಕೆ. ಶಿವಕುಮಾರ್‌ ಅಬ್ದುಲ್‌ ಜಬ್ಟಾರ್‌, ರೆಹಮಾನ್‌ ಖಾನ್‌ ಪುತ್ರ ಮನ್ಸೂರ್‌ ಅಲಿಖಾನ್‌ ಸೇರಿ ಹಿಂದುಳಿದ ವರ್ಗದ ಹತ್ತು ಮಂದಿಯ ಹೆಸರು ಕೊಟ್ಟಿದ್ದರು. ಇದರಲ್ಲಿ ಇಬ್ಬರನ್ನು ಆಯ್ಕೆ ಮಾಡುವುದು ಹೈಕಮಾಂಡ್‌ಗೆ ಮತ್ತಷ್ಟು ತಲೆನೋವಿನ ವಿಷಯವಾಯಿತು.

ಅಂತಿಮವಾಗಿ ಸಮ್ಮತಿ
ಹಿಂ.ವರ್ಗ ಆದರೆ ಎಂ.ಡಿ. ಲಕ್ಷ್ಮಿನಾರಾ ಯಣ, ಎಂ.ಆರ್‌. ಸೀತಾರಾಂ ಹೆಸರಿಗೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಎಂ.ಸಿ. ವೇಣುಗೋಪಾಲ್‌ ಹೆಸರು ಡಿ.ಕೆ. ಶಿವಕುಮಾರ್‌ ಪ್ರಸ್ತಾವಿಸಿದ್ದರು. ಇದಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಹಿಂದುಳಿದ ವರ್ಗದ ನಾಗರಾಜ್‌ ಯಾದವ್‌ಗೆ ಸಿದ್ದರಾಮಯ್ಯ ಸಮ್ಮತಿ ಸೂಚಿಸಿ, ಡಿ.ಕೆ. ಶಿವಕುಮಾರ್‌ ಹೇಳಿದ ಅಬ್ದುಲ್‌ ಜಬ್ಟಾರ್‌ ಹೆಸರಿಗೂ ಒಪ್ಪಿಕೊಳ್ಳುವಂತಾಯಿತು. ಇದರೊಂದಿಗೆ ಪ್ರಾರಂಭದಲ್ಲಿ ಕೇಳಿಬಂದಿದ್ದ ಬಿ.ಎಲ್‌. ಶಂಕರ್‌, ಪುಷ್ಪ ಅಮರನಾಥ್‌, ಹುಸೇನ್‌ ಹೆಸರುಗಳು ಪಕ್ಕಕ್ಕೆ ಸರಿಯಿತು ಎಂದು ಮೂಲಗಳು ತಿಳಿಸಿವೆ.

Advertisement

-ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next