ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಊರ ಜಾತ್ರೆಯಲ್ಲಿ ಸ್ನೇಹಿತರೊಂದಿಗೆ ಕುಣಿದ ವಿಡಿಯೋ ಇದೀಗ ವೈರಲ್ ಆಗಿದೆ.
ಸಿದ್ದರಾಮಯ್ಯ ಅವರು ಸ್ವಗ್ರಾಮ ಮೈಸೂರು ತಾಲೂಕಿನ ಸಿದ್ದರಾಮನ ಹುಂಡಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಶ್ರೀ ಸಿದ್ದರಾಮೇಶ್ವರ ಚಿಕ್ಕಮ್ಮ ತಾಯಿ ಜಾತ್ರಾ ಮಹೋತ್ಸವದಲ್ಲಿ ಗುರುವಾರ ಭಾಗವಹಿಸಿ ಶ್ರೀ ಸಿದ್ದರಾಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.
ಊರಿನೊಂದಿಗೆ ಮೊದಲಿನಿಂದಲೂ ನಿಕಟ ಸಂಪರ್ಕ ಇರಿಸಿಕೊಂಡಿದ್ದೇನೆ. ಜಾತ್ರೆಯಲ್ಲಿ ಪಾಲ್ಗೊಳ್ಲುವುದನ್ನು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಹಿಂದೆ ಸಚಿವನಾಗಿದ್ದಾಗಲೂ ಬಂದಿದ್ದೆ, ಮುಖ್ಯಮಂತ್ರಿಯಾಗಿದ್ದಾಗಲೂ ಬಂದಿದ್ದೆ, ಈಗಲೂ ಬಂದಿದ್ದೇನೆ. ಹಿಂದೆ ಎರಡು ವರ್ಷಗಳಿಗೊಮ್ಮೆ ಜಾತ್ರೆ ನಡೆಯುತ್ತಿತ್ತು. ಬಳಿಕ ಮೂರು ವರ್ಷಗಳಿಗೊಮ್ಮೆ ಆಯ್ತು. ಕೋವಿಡ್ ಬಂದಿದ್ದ ಕಾರಣ ಕಳೆದ ವರ್ಷ ಹಬ್ಬ ಮಾಡಿರಲಿಲ್ಲ. ಈ ವರ್ಷ ಮಾಡುತ್ತಿದ್ದೇವೆ. ಜಾತ್ರೆಗೆ ಬೇರೆ ಕಡೆಯಿಂದೆಲ್ಲಾ ನೆಂಟರಿಷ್ಟರು, ಗೆಳೆಯರು ಬಂದಿರುತ್ತಾರೆ. ಊರಿಗೆ ಬಂದು ಹೋಗುವುದೇ ಖುಷಿ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ:ಯೋಗಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಜತೆಯಾಗಿ ಹೊರಟ ಬೊಮ್ಮಾಯಿ- ಸಾವಂತ್
ಮನೆಯಿಂದ ಕಾಲುನಡಿಗೆಯಲ್ಲಿಯೇ ದೇವಸ್ಥಾನಕ್ಕೆ ಆಗಮಿಸಿದ ಸಿದ್ದರಾಮಯ್ಯ ಸಿದ್ದರಾಮೇಶ್ವರನಿಗೆ ಪೂಜೆ ಸಲ್ಲಿಸಿದರು. ಜಾತ್ರಾ ಮಹೋತ್ಸವದಲ್ಲಿ ಸ್ನೇಹಿತರು, ಬೆಂಬಲಿಗರ ಜತೆ ಸುಮಾರು 40 ನಿಮಿಷ ಕುಣಿದರು.
ಅಪ್ಪನ ಕುಣಿತ ನೋಡಿ ಖುಷಿಪಟ್ಟ ಮಗ ಡಾ.ಯತೀಂದ್ರ, ‘ಅಪ್ಪ ಪ್ರತಿ ವರ್ಷ ಜಾತ್ರೆ ವೇಳೆ ವೀರನ ಕುಣಿತ ಮಾಡುವುದು ವಾಡಿಕೆ. ಆದರೆ ಈ ವಯಸ್ಸಿನಲ್ಲಿ ಅಪ್ಪ ವೀರನ ಕುಣಿತ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಡ್ಯಾನ್ಸ್ ಮಾಡಲ್ಲ ಎಂದು ಅಪ್ಪ ಮೊದಲೇ ಹೇಳಿದ್ದರು. ಆದರೆ ಜನರ ನೋಡಿ ಉತ್ಸಾಹ ಬಂದು ಅವರು ಸಹ ಹೋಗಿ ಡ್ಯಾನ್ಸ್ ಮಾಡಿದರು’ ಎಂದರು.