Advertisement

ಜೋಡೋ ಬಳಿಕ ಸಿದ್ದು -ಡಿಕೆಶಿ ಜೋಡಿ ಯಾತ್ರೆ; “ಕೈ’ತಪ್ಪಿರುವ ಮತಬ್ಯಾಂಕ್‌ ಸೆಳೆಯಲು “ಟಾಸ್ಕ್’

12:56 AM Oct 06, 2022 | Team Udayavani |

ಬೆಂಗಳೂರು: “ಭಾರತ್‌ ಜೋಡೋ’ ಯಾತ್ರೆ ಮುಗಿಯುತ್ತಿದ್ದಂತೆಯೇ, ಮುಂದಿನ ವಿಧಾನಸಭೆ ಚುನಾವಣೆಗೆ ಸಜ್ಜಾಗುವ ನಿಟ್ಟಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಎರಡು ತಂಡಗಳ ರಥಯಾತ್ರೆ ಆರಂಭವಾಗಲಿದೆ.

Advertisement

ಈ ಹಿಂದೆ ಸಿದ್ದರಾಮಯ್ಯ ಪ್ರತ್ಯೇಕ ಪ್ರವಾಸ ಕೈಗೊ ಳ್ಳುವ ಯೋಜನೆ ಇತ್ತಾದರೂ ಅದರಿಂದ ಬೇರೆ ಸಂದೇಶ ರವಾನೆಯಾಗಬಹುದು ಎಂಬ ಕಾರಣಕ್ಕೆ ಇಬ್ಬರೂ ತಂಡಗಳಲ್ಲಿ ಪ್ರವಾಸ ಮಾಡುವಂತೆ ಹೈಕಮಾಂಡ್‌ ಸಲಹೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಎರಡು ತಂಡಗಳ ಯಾತ್ರೆ 224 ವಿಧಾನ ಸಭೆ ಕ್ಷೇತ್ರ ಗಳಲ್ಲಿ ಸಂಚರಿಸಲಿದೆ. ಪರಿಷತ್‌ ವಿಪಕ್ಷ ನಾಯಕ ಹರಿಪ್ರಸಾದ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರು, ರಾಜಕೀಯ ವ್ಯವಹಾರಗಳ ಸಮಿತಿ ಸದಸ್ಯರು ಜತೆಗಿರಲಿದ್ದಾರೆ.

ಕೆಲವೆಡೆ ಸಿದ್ದರಾಮಯ್ಯ ಜತೆ ಶಿವ ಕುಮಾರ್‌, ಎಂ. ಬಿ. ಪಾಟೀಲ್‌, ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಳ್ಳಲಿ ದ್ದಾರೆ. ಇದರ ನಡುವೆ “ಕೃಷ್ಣೆಗಾಗಿ ನಡಿಗೆ’ಯನ್ನೂ ಆಯೋಜಿಸಲು ಚಿಂತನೆ ನಡೆದಿದೆ. ಮೇಕೆದಾಟು ಪಾದಯಾತ್ರೆ, ದಾವಣಗೆರೆ ಸಿದ್ದರಾಮಯ್ಯ ಹುಟ್ಟು ಹಬ್ಬ ಸಮಾವೇಶ, ತಿರಂಗಾ ನಡಿಗೆ, ಭಾರತ್‌ ಜೋಡೋ ಯಾತ್ರೆಯಿಂದಾಗಿ ಕಾರ್ಯ ಕರ್ತರು ಹಾಗೂ ಮುಖಂ ಡರು ಉತ್ಸಾಹದಿಂದಿದ್ದು, ಇದನ್ನು ಚುನಾವಣೆ ವರೆಗೂ ಕಾಯ್ದಿಟ್ಟುಕೊಳ್ಳಲು ನಿರ್ಧರಿಸಲಾಗಿದೆ.

ಮತಬ್ಯಾಂಕ್‌ ಸೆಳೆಯಲು “ಟಾಸ್ಕ್’
ಈ ಮಧ್ಯೆ, ಕಾಂಗ್ರೆಸ್‌ನಿಂದ ದೂರವಾಗಿರುವ ಮತ ಬ್ಯಾಂಕನ್ನು ಮತ್ತೆ ಸೆಳೆಯಲು ಕಾರ್ಯತಂತ್ರ ರೂಪಿಸು ವಂತೆ ರಾಜ್ಯ ನಾಯಕರಿಗೆ ರಾಹುಲ್‌ ಗಾಂಧಿ ಸೂಚನೆ ನೀಡಿದ್ದಾರೆ. 2013 ಹಾಗೂ 2018ರ ವಿಧಾನಸಭೆ, 2014 ಮತ್ತು 2019ರ ಲೋಕಸಭೆ ಚುನಾವಣೆಯ ಮತ ಗಳಿಕೆ ಪ್ರಮಾಣದ ಆಧಾರದಲ್ಲಿ ದಲಿತರು ಹಾಗೂ ಹಿಂದುಳಿದ ವರ್ಗ ಕಾಂಗ್ರೆಸ್‌ನಿಂದ ದೂರವಾಗಿದ್ದು, ಪಕ್ಷ ಹೆಚ್ಚು ಸ್ಥಾನ ಗೆಲ್ಲದಿರಲು ಇದು ಕಾರಣ ಎನ್ನಲಾಗಿದೆ.

Advertisement

ಹೀಗಾಗಿ ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕನ್ನು ಮತ್ತೆ ಸೆಳೆಯಲು ಮಲ್ಲಿಕಾರ್ಜುನ ಖರ್ಗೆ ಮಾರ್ಗ ದರ್ಶನದಲ್ಲಿ ಕಾರ್ಯಕ್ರಮ ರೂಪಿಸಲು ರಾಹುಲ್‌ “ಟಾಸ್ಕ್’ ನೀಡಿದ್ದಾರೆ ಎಂದು ಹೇಳಲಾಗಿದೆ. ಆಯಾ ಸಮುದಾಯದ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿ ಪ್ರಮುಖರಿಗೆ ಆಹ್ವಾನ ನೀಡಿ ಸಂವಾದ ನಡೆಸಿ, ಕಾಂಗ್ರೆಸ್‌ ಮೇಲೆ ವಿಶ್ವಾಸ, ಭರವಸೆ ಮೂಡುವಂತೆ ಮಾಡಿ. ಏನಾ ದರೂ ತಪ್ಪಾಗಿದ್ದರೆ ಸರಿಪಡಿಸಿಕೊಳ್ಳಿ. ಆದರೆ ವೈಯಕ್ತಿಕ ಪ್ರತಿಷ್ಠೆಯಿಂದ ಪಕ್ಷಕ್ಕೆ ಹಾನಿ ಆಗುವಂತೆ ಮಾಡಬೇಡಿ ಎಂದು ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.

ರಾಹುಲ್‌ ಖುಷ್‌
ಕರ್ನಾಟಕದಲ್ಲಿ ಭಾರತ್‌ ಜೋಡೋ ಯಾತ್ರೆಗೆ ಸಿಗುತ್ತಿರುವ ಸ್ಪಂದನೆಯಿಂದ ರಾಹುಲ್‌ ಖುಷಿಯಾಗಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಬಣ ರಾಜಕೀಯಕ್ಕೆ ಅವಕಾಶ ನೀಡಬಾರದು. ಚುನಾವಣೆ ಸಮಯದಲ್ಲಿ ಇದು ಬಿಜೆಪಿ ಹಾಗೂ ಜೆಡಿಎಸ್‌ಗೆ ಆಹಾರವಾಗುತ್ತದೆ. ಇದರಿಂದ ಪಕ್ಷಕ್ಕೆ ಹಾನಿ ಆಗಲಿದ್ದು, ಚುನಾವಣೆ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ತಮ್ಮ ಬೆಂಬಲಿಗರು ಅನವಶ್ಯಕ ಹಾಗೂ ವಿವಾದಾತ್ಮಕ ಹೇಳಿಕೆ ನೀಡದಂತೆ ಎಚ್ಚರಿಕೆ ವಹಿಸಬೇಕು ಎಂದು ರಾಜ್ಯ ನಾಯಕರಿಗೆ ತಾಕೀತು ಮಾಡಿದ್ದಾರೆ ಎಂದು ಹೇಳಲಾಗಿದೆ.

- ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next