ಬೆಂಗಳೂರು: “ರಂಭಾಪುರಿ ಸ್ವಾಮೀಜಿಗೆ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನಡೆದ ಗೊಂದಲದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿವರಿಸಿದ್ದಾರೆಯೇ ಹೊರತು, ಯಾವುದೇ ಪಶ್ಚಾತ್ತಾಪದ ಬಗ್ಗೆ ಮಾತನಾಡಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಈ ಹಿಂದೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವನಾಗಿ¨ªಾಗ ವೀರಶೈವ-ಲಿಂಗಾಯತ ಧರ್ಮದ ಬಗ್ಗೆ ನಾವು ಕೇಳಿದ್ದೆವು. ಪ್ರತ್ಯೇಕ ಧರ್ಮ ಬೇಡ ಎಂದು ಹೇಳಿದ್ದೆವು. ಆದರೆ, ಕೆಲವರ ಪ್ರತ್ಯೇಕ ಧರ್ಮದ ನಿಲುವುನಿಂದ ಗೊಂದಲ ಉಂಟಾಗಿತ್ತು. ಈಗ ಸ್ವಾಮೀಜಿ ಬಳಿ ಆ ಗೊಂದಲ ನಿವಾರಣೆ ಮಾತುಗಳನ್ನಾಡಿದ್ದಾರಷ್ಟೇ. ಯಾವುದೇ ಪಶ್ಚತ್ತಾಪದ ಬಗ್ಗೆ ಮಾತಾಡಿಲ್ಲ. ಅಷ್ಟಕ್ಕೂ ಈಗಾಗಲೇ ಇದಕ್ಕೆಲ್ಲ ತೆರೆ ಎಳೆಯುವ ಸಂದರ್ಭ ಬಂದಿದೆ. ಹೀಗಿರುವಾಗ, ಮತ್ತೆ ಇದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ’ ಎಂದರು.
“ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬೇರೆ ಬೇರೆ ಅಭಿಪ್ರಾಯಗಳಿವೆ. ನನ್ನ ಅಭಿಪ್ರಾಯವಂತೂ ಸಚಿವನಾಗಿದ್ದಾಗಲೂ ಹೇಳಿದ್ದೇನೆ. ಹಿಂದಿನ ನಿಲುವು ಮುಂದುವರಿಯುತ್ತದೆ. ಮಹಾಸಭಾ ನಿಲುವು ಕೂಡ ಅದೇ ಆಗಿತ್ತು. ನನ್ನ ಅಭಿಪ್ರಾಯಕ್ಕೆ ಬದ್ಧನಾಗಿದ್ದೇನೆ’ ಎಂದ ಈಶ್ವರ ಖಂಡ್ರೆ, “ಎಲ್ಲ ಸ್ವಾಮೀಜಿಗಳ ಜತೆ ಕುಳಿತು ಮಾತನಾಡುವ ಕುರಿತು ಮಾಜಿ ಸಚಿವ ಎಂಬಿ ಪಾಟೀಲ್ ಅವರನ್ನೇ ಕೇಳಬೇಕು’ ಎಂದರು.
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಖಂಡ್ರೆ, “ಸಮಾಜಘಾತುಕ ಶಕ್ತಿಗಳು ಈ ನೀಚ ಕೆಲಸ ಮಾಡಿವೆ. ಆಡಳಿತಾರೂಢ ಶಾಸಕರ ಕೈವಾಡ ಇದರಲ್ಲಿದೆ. ಪ್ರತಿಪಕ್ಷದ ಧ್ವನಿ ಹತ್ತಿಕ್ಕಬೇಕು ಅಂತ ಸರ್ಕಾರದ ಪ್ರಾಯೋಜಿತ ಘಟನೆ ಅದು. ಸಿದ್ದರಾಮಯ್ಯ ರಾಜಕೀಯ ಮಾಡುವುದಕ್ಕೆ ಕೊಡಗಿಗೆ ಹೋಗಿರಲಿಲ್ಲ. ಜನರಿಗೆ ನ್ಯಾಯ ಕೊಡಿಸಲು ಹೋಗಿದ್ದರು. ವಾಮಮಾರ್ಗದಿಂದ ಸುಮ್ಮನೆ ಕೂರಿಸಬೇಕು ಅಂತ ಹೊರಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಡಿಕೇರಿ ಚಲೋ ತಡೆಯಲು ಸರ್ಕಾರದಿಂದ ಕಾನೂನು ಅಸ್ತ್ರ ಬಳಕೆ ಬಗ್ಗೆ ಪ್ರತಿಕ್ರಿಯಿಸಿ, “ಬಿಜೆಪಿಯವರು ಏನು ಬೇಕಾದರೂ ಮಾಡಲಿ. ಅದಕ್ಕೆ ಪ್ರತಿಯಾಗಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಈಗಾಗಲೇ ಮೇಕೆದಾಟು ಪಾದಯಾತ್ರೆ ತಡೆಯಲು ಪ್ರಯತ್ನ ಮಾಡಿದ್ದರು. ಆದರೂ ನಮ್ಮ ಹೋರಾಟ ಅವತ್ತು ಯಶಸ್ವಿಯಾಯಿತು. ಪಾದಯಾತ್ರೆಗೆ ಬಂದವರ ವಿರುದ್ಧ ಕೇಸು ಕೂಡ ಹಾಕಿದ್ದಾರೆ. ಈಗ ಮಡಿಕೇರಿ ಚಲೋ ಮಾಡಿದಾಗಲೂ ಕಾನೂನು ಕ್ರಮ ತೆಗೆದುಕೊಳ್ಳಲಿ. ಅದನ್ನು ಯಾವ ರೀತಿ ಎದುರಿಸಬೇಕು, ಏನು ಮಾಡಬೇಕು ಎಂದು ಪಕ್ಷದ ನಾಯಕರೆಲ್ಲ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ’ ಎಂದರು.