ಕೋಲಾರ: ಕೋಲಾರದಲ್ಲಿ ಕಣಕ್ಕಿಳಿಯುವುದಾಗಿ ಘೋಷಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಾಯ ಅಂತ್ಯ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಟಾಂಗ್ ನೀಡಿದರು.
ಕೋಗಿಲಹಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅಹಿಂದ ಎಂದು ಹೇಳಿಕೊಂಡು ಎಲ್ಲರನ್ನೂ ಮುಗಿಸುತ್ತಿದ್ದಾರೆ, ಕಲಬುರಗಿಯಲ್ಲಿ ಖರ್ಗೆ, ಮೈಸೂರಿನಲ್ಲಿ ಶ್ರೀನಿವಾಸ ಪ್ರಸಾದರನ್ನು ಸೋಲಿಸಿದ್ದು, ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್, ಸುರೇಶ್ ಪತ್ನಿ ಪದ್ಮಾವತಿಯನ್ನು ಸೋಲಿಸಿ ಅಹಿಂದ ಮುಖಂಡರನ್ನು ಮುಗಿಸುವ ಅವರ ಪ್ರಯತ್ನ ಕೋಲಾರದಲ್ಲಿ ಫಲಿಸದು ಎಂದು ತಿಳಿಸಿದರು.
ಕೆ.ಎಚ್.ಮುನಿಯಪ್ಪ ಮೈಯಲ್ಲಿ ರಕ್ತ ಹರಿಯುತ್ತಿದ್ದರೆ ಅವರು ಇಂದು ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಬರಬಾರದಾಗಿತ್ತು. ಸೋಲಿಸಿದ್ದು ಮಾತ್ರವಲ್ಲ, ತಮ್ಮ ಬೆಂಬಲಿಗರಿಂದ ದರಿದ್ರ ಎಂದೆಲ್ಲಾ ಬೈಸಿದ ರಮೇಶ್‌ಕುಮಾರ್ ಜೊತೆ ಹೇಗೆ ವೇದಿಕೆ ಹಂಚಿಕೊಂಡರು ಎಂದು ಪ್ರಶ್ನಿಸಿದರು.
ಇನ್ನು ಮುಂದೆ ಕಾಂಗ್ರೆಸ್‌ನಲ್ಲಿ ರಮೇಶ್‌ಕುಮಾರ್ ಡಾನ್ ಇದ್ದಂತೆ. ಘಟಬಂಧನ್ ಮೂಲಕ ಸಂಸತ್ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪರನ್ನು ಸೋಲಿಸಿದರು, ಇದೀಗ ಡಿ.ಕೆ.ಶಿವಕುಮಾರ್ ಜತೆ ಒಳ ಒಪ್ಪಂದ ಮಾಡಿಕೊಂಡು ಸಿದ್ದರಾಮಯ್ಯರನ್ನು ಮುಗಿಸಲು ತಂತ್ರಗಾರಿಕೆ ರೂಪಿಸಿದ್ದಾರೆ ಎಂದರು.