Advertisement

ಕೂಡಲೇ ಶ್ವೇತಪತ್ರ ಹೊರಡಿಸಿ: ಸಚಿವ ಸುನಿಲ್ ಕುಮಾರ್ ರಿಗೆ ಸಿದ್ದರಾಮಯ್ಯ ಸವಾಲು

02:38 PM Sep 07, 2022 | Team Udayavani |

ಬೆಂಗಳೂರು: ಇಂಧನ ಸಚಿವರು ಹಿಂದಿನ ನಮ್ಮ ಸರ್ಕಾರದ ಬಗ್ಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ ಕೂಡಲೆ ಶ್ವೇತಪತ್ರ ಹೊರಡಿಸಬೇಕು ಹಾಗೂ ರೈತರ ಪಂಪ್ ಸೆಟ್ಟುಗಳಿಗೆ ಮೀಟರ್ ಅಳವಡಿಸುವ ಕೇಂದ್ರದ ವಿದ್ಯುತ್ ಮಸೂದೆಯನ್ನು ತಿರಸ್ಕರಿಸಲು ಮುಂದಿನ ಅಧಿವೇಶನದಲ್ಲಿ ನಿರ್ಣಯ ಮಂಡಿಸಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

Advertisement

ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆ ನೀಡಿದ್ದು, ಸುನಿಲ್‍ಕುಮಾರ್ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಪ್ರಕಾರ, ನಮ್ಮ ಸರ್ಕಾರದ ಅವಧಿಯಲ್ಲಿ ರೈತರ ಪಂಪ್ ಸೆಟ್ಟುಗಳಿಗೆ ಮೀಟರ್ ಅಳವಡಿಸಲು ಹುನ್ನಾರ ನಡೆದಿತ್ತು, ರಾಜ್ಯದ ಮೇಲೆ ಮತ್ತು ಇಂಧನ ಇಲಾಖೆ ಮೇಲೆ ಸಾಲ ಹೊರಿಸಿದ್ದರು. ಸೋಲಾರ್ ವಿದ್ಯುತ್ ಅನ್ನು ಅವಾಸ್ತವಿಕ ಮೊತ್ತಕ್ಕೆ ಖರೀದಿಸಿದ್ದರು. ಆದರೆ ಈಗ ಸೌರ ವಿದ್ಯುತ್ ಮಾರಾಟದಿಂದ ರಾಜ್ಯಕ್ಕೆ ಲಾಭ ಬಂದಿದೆ. ತಮ್ಮ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಹೇಳಿಕೆ ಕೊಟ್ಟ ಮೇಲೆ ಉತ್ತರ ನೀಡಬೇಕಾಗುತ್ತದೆ. ನಾನು ಅವರಿಂದ ಉತ್ತರವನ್ನು ಶ್ವೇತಪತ್ರದ ಮೂಲಕ ಬಯಸುತ್ತಿದ್ದೇನೆ ಎಂದಿದ್ದಾರೆ.

ರೈತರ ಪಂಪುಸೆಟ್ಟುಗಳಿಗೆ ಮೀಟರ್ ಅಳವಡಿಸುವ ಹುನ್ನಾರ ಮಾಡಿದ್ದರು ಅಂದರೆ ಏನು ಅರ್ಥ? ಅಳವಡಿಸಿದ್ದೆವು ಎಂದೆ? ಎಲ್ಲಿ ಅಳವಡಿಸಿದ್ದೇವೆ? ಮಿಟರ್ ಅಳವಡಿಸಲು ಟೆಂಡರ್ ಕರೆದಿದ್ದೇವೆವೆ? ಯಾವ ಕಂಪೆನಿಗೆ ಆದೇಶ ಕೊಟ್ಟಿದ್ದೆವು? ನಮ್ಮ ಸರ್ಕಾರ ಮೀಟರ್ ಅಳವಡಿಸಲು ಕ್ಯಾಬಿನೆಟ್‍ನಲ್ಲಿ ತೀರ್ಮಾನ ಮಾಡಿದ್ದರೆ ಅದರ ಪ್ರತಿಗಳೆಲ್ಲಿವೆ? ಯಾವ ರೈತರಿಗೆ ತೊಂದರೆ ಕೊಟ್ಟಿದ್ದೇವೆ? ದಾಖಲೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮೋದಿ ಸರ್ಕಾರ ಹೊಸ ವಿದ್ಯುತ್ ಕಾಯ್ದೆಯನ್ನು ಜಾರಿಗೊಳಿಸಲು, ರೈತರ ಪಂಪ್ ಸೆಟ್ಟುಗಳಿಗೆ ಮೀಟರ್ ಅಳವಡಿಸಲು ಹುನ್ನಾರ ನಡೆಸುತ್ತಿದೆ. ಹೊಸ ವಿದ್ಯುತ್ ಬಿಲ್ಲನ್ನು ಈಗಾಗಲೆ ಪಾರ್ಲಿಮೆಂಟಿನಲ್ಲಿ ಮಂಡಿಸಿದೆ. ಕರಾಳ ಕೊರೋನದ ಕರ್ಫ್ಯೂ ಇದ್ದಾಗಲೆ ಕರಡನ್ನು ಸಿದ್ಧಪಡಿಸಿ ನೆಪಮಾತ್ರಕ್ಕೆ ಚರ್ಚೆಗೆ ಬಿಟ್ಟಂತೆ ಮಾಡಿದ್ದರು. ನಮ್ಮ ಸರ್ಕಾರ ಇದ್ದಾಗ ಈ ರೀತಿಯ ರೈತ ದ್ರೋಹದ ಕಾನೂನನ್ನು ಜಾರಿಗೆ ತಂದಿದ್ದರೆ ಅದರ ದಾಖಲೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ.

ಮೋದಿ ಸರ್ಕಾರ ತರಲು ಹೊರಟಿರುವ ವಿದ್ಯುತ್ ಬಿಲ್‍ನ ವಿರುದ್ಧ ಮುಂದಿನ ಅಧಿವೇಶನದಲ್ಲಿ ನೀವೇ ನಿರ್ಣಯವನ್ನು ಮಂಡಿಸಿ, ನೀವು ತರುವ ನಿರ್ಣಯದ ಪರವಾಗಿ ನಾವೆಲ್ಲರೂ ಒಮ್ಮತದಿಂದ ಒಪ್ಪಿಗೆ ಸೂಚಿಸುತ್ತೇವೆ. ಯಾವ ಕಾರಣಕ್ಕೂ ಕರ್ನಾಟಕದ ರೈತರ ಮೇಲೆ ಹಾಗೂ ಉಳಿದೆಲ್ಲ ಜನ ವರ್ಗಗಳ ಮೇಲೆ ಈ ಕರಾಳ ಕಾನೂನನ್ನು ಜಾರಿಗೊಳಿಸಲು ಅವಕಾಶ ನೀಡುವುದಿಲ್ಲವೆಂದು ಒಮ್ಮತದ ನಿರ್ಣಯವನ್ನು ಅಂಗೀಕರಿಸಿ ಕಳಿಸೋಣ ಎಂದಿದ್ದಾರೆ.

Advertisement

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ವಿದ್ಯುತ್ ಇಲಾಖೆಯ ಮೇಲೆ ದೊಡ್ಡ ಮೊತ್ತದ ಸಾಲ ಇತ್ತು. ಮುಖ್ಯಮಂತ್ರಿ ಹುದ್ದೆಯ ಜತೆಗೆ ಹಣಕಾಸಿನ ಇಲಾಖೆಯನ್ನು ನೋಡಿಕೊಳ್ಳುತ್ತಿದ್ದ ನಾನು ಈ ಸಾಲವನ್ನು ಹೀಗೇ ಬಿಟ್ಟರೆ, ವಿದ್ಯುತ್ ಇಲಾಖೆಯು ಮುಳುಗಿ ಹೋಗುತ್ತದೆ ಎಂಬ ಕಾರಣಕ್ಕಾಗಿ ಎಸ್ಕಾಂಗಳ ಬಾಕಿಗಳನ್ನು ತೀರಿಸಲು ಸಾಲ ಮಾಡಿದ್ದೆವು. ಅಗತ್ಯ ಇರುವ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದನ್ನು ನಷ್ಟ ಎನ್ನುವುದಿಲ್ಲ. ಬದಲಾಗಿ ಬಂಡವಾಳ ಹೂಡಿಕೆ ಎನ್ನುತ್ತಾರೆ ಎಂಬ ಅರ್ಥ ಶಾಸ್ತ್ರದ ತತ್ವಗಳನ್ನು ಸಚಿವರು ಅರ್ಥ ಮಾಡಿಕೊಳ್ಳಬೇಕು ಎಂದು ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ 2014-15 ರಲ್ಲಿ ಒಟ್ಟು ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದ್ದ ವಿದ್ಯುತ್ 14825 ಮೆ.ವ್ಯಾ ಮಾತ್ರ. ಅದರಲ್ಲಿ ಸೋಲಾರ್ ಮೂಲದಿಂದ 118 ಮತ್ತು ಗಾಳಿ ಮೂಲದಿಂದ 2655 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ಆದರೆ 2018 ರ ವೇಳೆಗೆ ಸೋಲಾರ್ ಮೂಲದಿಂದ 6157 ಮೆ.ವ್ಯಾ. ಮತ್ತು ಗಾಳಿ ಮೂಲದಿಂದ 4730 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸ್ಥಿತಿಗೆ ರಾಜ್ಯವು ತಲುಪಿತು ಎಂದು ವಿವರಗಳನ್ನು ನೀಡಿದ್ದಾರೆ.

ಕಲ್ಲಿದ್ದಲು ಮೂಲದ ಉಷ್ಣ ವಿದ್ಯುತ್ ಕೂಡಾ 2014-15 ರಲ್ಲಿ 6197 ಮೆಗಾವ್ಯಾಟ್ ಇದ್ದದ್ದು, 2018 ರ ವೇಳೆಗೆ 11366 ಮೆಗಾವ್ಯಾಟ್ ಉತ್ಪಾದನೆ ಮಾಡುವ ಹಂತಕ್ಕೆ ತಲುಪಿತ್ತು. ಒಂದು ಕಾಲದಲ್ಲಿ ಕೇವಲ 2-3 ಗಂಟೆ ವಿದ್ಯುತ್ ಒದಗಿಸಲು ಸಂಕಷ್ಟ ಪಡುತ್ತಿದ್ದ ರಾಜ್ಯವು 2018 ರ ವೇಳೆಗೆ 28741 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಹಂತಕ್ಕೆ ರಾಜ್ಯವು ತಲುಪಿತು. ನಮ್ಮ 5 ವರ್ಷಗಳ ಆಡಳಿತದ ಅವಧಿಯಲ್ಲಿ 13175 ಮೆಗಾವ್ಯಾಟ್ ವಿದ್ಯುತ್ ಅನ್ನು ಹೆಚ್ಚಾಗಿ ಉತ್ಪಾದನೆ ಮಾಡಲಾರಂಭಿಸಿದೆವು.2014-15 ರಲ್ಲಿ ನವೀಕರಿಸಬಹುದಾದ ಇಂಧನ ಮೂಲದಿಂದ ಒಟ್ಟು ಉತ್ಪಾದನೆಯಾಗುತ್ತಿದ್ದ ವಿದ್ಯುತ್ ಪ್ರಮಾಣ 4855 ಮೆಗಾ ವ್ಯಾಟ್ ಗಳಷ್ಟಿತ್ತು. 2018 ರ ವೇಳೆಗೆ ಅದು 13500 ಕ್ಕೂ ಹೆಚ್ಚು ಮೆಗಾ ವ್ಯಾಟ್ ಗಳನ್ನು ಉತ್ಪಾದನೆ ಮಾಡುವ ಹಂತಕ್ಕೆ ತಲುಪಿದೆವು.ಇದು ಕಾಂಗ್ರೆಸ್ ಸರ್ಕಾರದ ಶ್ರಮದಿಂದ ಆದದ್ದು. ನಾವು ಮಾಡಿದ್ದ ಕೆಲಸದಿಂದ ನೀವು ಹಣಗಳಿಸುತ್ತಿದ್ದರೆ, ಕೆಲಸದ ಕ್ರೆಡಿಟ್ಟು ಯಾರಿಗೆ ಸಲ್ಲಬೇಕು? ಬಿಜೆಪಿ ಸರ್ಕಾರ ಮಾರುತ್ತಿರುವ ವಿದ್ಯುತ್ ಅನ್ನು ಉತ್ಪಾದಿಸಲು ಕ್ರಮ ಕೈಗೊಂಡವರು ಯಾರು? ನಿಮ್ಮ ಸರ್ಕಾರ ಬಂದಾದ ಮೇಲೆ ಎಷ್ಟು ವಿದ್ಯುತ್ ಉತ್ಪಾದನೆಯನ್ನು ಹೊಸದಾಗಿ ಮಾಡಿದ್ದೀರಿ? ವಿದ್ಯುತ್ ಉತ್ಪಾದನೆಗಾಗಿ ಎಷ್ಟು ಬಂಡವಾಳ ಹೂಡಿದ್ದೀರಿ? ಹಾಗೂ ನಾವು ಉತ್ಪಾದನೆ ಮಾಡಲು ಪ್ರಾರಂಭಿಸಿದ ವಿದ್ಯುತ್ ಅನ್ನು ಎಷ್ಟು ಮಾರಾಟ ಮಾಡುತ್ತಿದ್ದೀರಿ? ಎಂಬ ದಾಖಲೆಗಳನ್ನು ಕೂಡಲೆ ಬಿಡುಗಡೆ ಮಾಡಿ ಎಂದು ಸವಾಲು ಹಾಕಿದ್ದಾರೆ.

ರಾಜ್ಯದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ಬೇಸಿಗೆಯಲ್ಲಿ ಸುಮಾರು 11 ರಿಂದ 13000 ಮೆಗಾ ವ್ಯಾಟ್‍ಗಳಷ್ಟು ಇದೆ. ಮಳೆಗಾಲದಲ್ಲಿ 8 ರಿಂದ 9000 ಮೆಗಾ ವ್ಯಾಟ್‍ಗಳಿಗೆ ಮಾತ್ರ ಬೇಡಿಕೆಯಿರುತ್ತದೆ. ಇನ್ನು ಉಳಿಕೆಯಾಗುವ ಸುಮಾರು 18 ರಿಂದ 20 ಸಾವಿರ ಮೆಗಾ ವ್ಯಾಟ್‍ಗಳನ್ನು ಮಾರಬೇಕಲ್ಲ, ಅದನ್ನು ಮಾರಾಟ ಮಾಡಲು ಯಾವ ಕ್ರಮ ಕೈಗೊಂಡಿದ್ದೀರಿ ಎಂಬುದನ್ನು ಶ್ವೇತ ಪತ್ರದ ಮೂಲಕ ರಾಜ್ಯದ ಜನತೆಗೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next