Advertisement
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಈ ಮೂವರು ನಾಯಕರ ನಾಯಕತ್ವದಲ್ಲೇ ಲೋಕಸಭೆ ಚುನಾವಣೆ ಎದುರಿಸುವುದು ಬಹುತೇಕ ಖಚಿತವಾಗಿದೆ. ಈ ಬಾರಿಯ ಚುನಾವಣೆ ರಾಜ್ಯದ ಮಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಹಾಗೂ ಬಿಜೆಪಿ ಅಜೆಂಡಾ “ಅಸ್ತ್ರ’ದಡಿ ನಡೆಯುತ್ತದೆಯೋ ಅಥವಾ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜಾತಿ ಸಮೀಕರಣ ಕೆಲಸ ಮಾಡುತ್ತದೆಯೋ ಎಂಬುದು ಕುತೂಹಲ ಮೂಡಿಸಿದೆ.
Related Articles
Advertisement
ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಬ್ರೇಕ್ ಬಿದ್ದಿರುವ ಈ ಸಂದರ್ಭದಲ್ಲಿ ಯಾವ ರೀತಿ ಜಾತಿ ಸಮೀಕರಣವಾಗಲಿದೆ ಎಂಬುದೇ ಮಿಲಿಯನ್ ಡಾಲರ ಪ್ರಶ್ನೆ ಸಹ ಆಗಲಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಹಾಗೂ ಜೆಡಿಎಸ್ ರಾಷ್ಟ್ರೀಯಅಧ್ಯಕ್ಷ ಎಚ್.ಡಿ. ದೇವೇಗೌಡರ ಮಟ್ಟದಲ್ಲೇ ಪಕ್ಕಾ ಆಗಿದೆ. ಆರಂಭದಲ್ಲಿ ಇದಕ್ಕೆ ಅಪಸ್ವರ ಎತ್ತಿದ್ದ ಹಾಗೂ ವಿರೋಧಿಸುತ್ತಿದ್ದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ನವರು ರಾಹುಲ್‌ಗಾಂಧಿ ಭೇಟಿ ನಂತರ ವರಸೆ ಬದಲಾಯಿಸಿ ಇಬ್ಬರೂ ಮೈತ್ರಿಮಾಡಿಕೊಂಡೇ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದಾರೆ.
ಕೆಪಿಸಿಸಿಯ ಹೊಸ ಅಧ್ಯಕ್ಷ-ಕಾರ್ಯಾಧ್ಯಕ್ಷರು ಚುರುಕಾಗಿ ಕೆಲಸ ಮಾಡುತ್ತಿದ್ದಾರೆ. ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಸರ್ಕಾರದಲ್ಲಿ ನಂಬರ್‌ಟೂ ಆಗಿರುವುದು, ಸಿದ್ದರಾಮಯ್ಯ ಸಮನ್ವಯ ಸಮಿತಿ ಹಾಗೂ ಶಾಸಕಾಂಗ ಪಕ್ಷದ ಅಧ್ಯಕ್ಷರಾಗಿರುವುದು, ಜತೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನವೂ ಸಿಕ್ಕಿರುವುದು, ಡಿ.ಕೆ.ಶಿವಕುಮಾರ್ ಅವರೂ ಪ್ರಬಲ ಖಾತೆ ಹೊಂದಿರುವುದು, ಒಟ್ಟಾರೆ,ಕಾಂಗ್ರೆಸ್ ಒಂದು ಹಂತದಲ್ಲಿ ಬಲಿಷ್ಠವಾಗಿದೆ. ಈ ಬಲಿಷ್ಠ ಕಾಂಬಿನೇಷನ್‌ಗೆ ಜೆಡಿಎಸ್ ಕಡೆಯಿಂದ ಎಚ್.ಡಿ.ದೇವೇಗೌಡ-ಕುಮಾರಸ್ವಾಮಿ ವರ್ಚಸ್ಸು, ಜಾತಿ ಬೆಂಬಲ ಎಷ್ಟರ ಮಟ್ಟಿಗೆ ಲಾಭ ತಂದುಕೊಡಲಿದೆ ಎಂಬ ಲೆಕ್ಕಾಚಾರಗಳು ಈಗಾಗಲೇ ಪ್ರಾರಂಭವಾಗಿವೆ.
ಬಿಜೆಪಿ ಲೆಕ್ಕಾಚಾರ: ಬಿಜೆಪಿಯಲ್ಲಿ ವಿಧಾನಸಭೆ ಚುನಾವಣೆಯಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಂಡು ಬೂತ್‌ಮಟ್ಟದಲ್ಲಿ ಪಕ್ಷವನ್ನು ಸಜ್ಜುಗೊಳಿಸಲಾಗುತ್ತಿದೆ.”ಒನ್ ಬೂತ್ ಟ್ವೆಂಟಿ ಯೂಥ್’ ಎಂಬ ಘೋಷಣೆ ಯಡಿ ಯುವಕರನ್ನು ನೇಮಿಸಲಾಗುತ್ತಿದೆ.
104 ಸ್ಥಾನ ಗಳಿಸಿದರೂ ಬಿಜೆಪಿ ಅಧಿಕಾರಕ್ಕೆ ಬರಲು ಆಗಲಿಲ್ಲ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಯಾಗಲು ಸಾಧ್ಯವಾಗಲಿಲ್ಲ ಎಂಬ ಆಕ್ರೋಶ ಲಿಂಗಾಯತ ಸಮುದಾಯ ಹಾಗೂ ಕಾಂಗ್ರೆಸ್-ಜೆಡಿಎಸ್ ವಿರೋಧಿಸುವ ವರ್ಗದಲ್ಲಿದೆ. ನಾಯಕ ಸಮುದಾಯದ ಶ್ರೀರಾಮುಲು ಬಿಜೆಪಿಯಲ್ಲಿ ಯಡಿಯೂರಪ್ಪ ನಂತರದ ಸ್ಥಾನ ಪಡೆದಿದ್ದು, ಸಮುದಾಯದ ಮತಗಳನ್ನು ಬಿಜೆಪಿಯತ್ತ ಕ್ರೋಢೀಕರಿಸುವಲ್ಲಿ ನಿರತರಾಗಿದ್ದಾರೆ. ಇದು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ವರವಾಗಲಿದೆ ಎಂಬ ಲೆಕ್ಕಾಚಾರವಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಎರಡೂ ಪಕ್ಷಗಳಲ್ಲಿ ಸ್ಥಳೀಯವಾಗಿ ವಿರೋಧ ಇರುವುದು. ಕೆಲವು ನಾಯಕರು ಇದೇ ಕಾರಣಕ್ಕೆ ಪಕ್ಷ ಬಿಡುವ ಎಚ್ಚರಿಕೆ ನೀಡಿರುವುದು ಬಿಜೆಪಿಗೆ ಪ್ಲಸ್ ಆಗಲಿದೆ. ಚುನಾವಣೆ ಸಂದರ್ಭದಲ್ಲಿ ಕೆಲವು ನಾಯಕರು ಬಿಜೆಪಿಗೂ ಸೇರಲಿದ್ದು ಪಕ್ಷ ಬಲಿಷ್ಠವಾಗಲಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆಯಿಂದಾಗಿ ಮತ ವಿಭಜನೆಯಾಗಿ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಒಂದೇ ಅಭ್ಯರ್ಥಿ ಹಾಕುವುದರಿಂದ ಬಿಜೆಪಿಗೆಲಾಭವಾಗಬಹುದು. ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಿದರೆ ಈಗಿರುವುದಕ್ಕಿಂತ ಐದಾರು ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲಬಹುದು.ಕೋಲಾರ,
ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಚಿಕ್ಕೋಡಿ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಸಾಧ್ಯತೆಯಿದೆ. ಮಂಡ್ಯ,ಹಾಸನ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಶಕ್ತಿ ಹೆಚ್ಚಿಸಿಕೊಳ್ಳಲು ಅವಕಾಶವಿದೆ ಎಂಬ ಸಮೀಕ್ಷಾ ವರದಿಯನ್ನು ಬಿಜೆಪಿ ಹೈಕಮಾಂಡ್‌ಗೆ ಕಳುಹಿಸಿದೆ ಎಂದು ಹೇಳಲಾಗಿದೆ. ಇದೇ ಲಾಭ-ನಷ್ಟದ ಲೆಕ್ಕಾಚಾರ ಕಾಂಗ್ರೆಸ್-ಜೆಡಿಎಸ್‌ನಲ್ಲೂ ಇದೆ. ಹಾಸನ, ಮಂಡ್ಯ ಜೆಡಿಎಸ್ ಮರಳಿ ಗೆಲ್ಲುವುದರ ಜತೆಗೆ ಚಿಕ್ಕಬಳ್ಳಾಪುರ,ಮೈಸೂರು, ತುಮಕೂರು ಕ್ಷೇತ್ರ ಮೈತ್ರಿಯಡಿ ಬಿಟ್ಟು ಕೊಡುವಂತೆ ಬೇಡಿಕೆಯಿಟ್ಟು ಸಂಖ್ಯಾಬಲವನ್ನು ಐದಕ್ಕೆ ಹೆಚ್ಚಿಸಿಕೊಳ್ಳಲು ಜೆಡಿಎಸ್ ರಣತಂತ್ರ ರೂಪಿಸಿದೆ. ಕಾಂಗ್ರೆಸ್‌ಗೆ 15ಕ್ಕೆ ಹೆಚ್ಚಿಸಿಕೊಳ್ಳುವ ತವಕ: ಕಾಂಗ್ರೆಸ್‌ಗೆ ಜೆಡಿಎಸ್ ಜತೆ ಮೈತ್ರಿಯಾಗಿ ಹಾಲಿ ಸಂಸದರು ಆಯಾ ಪಕ್ಷದಿಂದಲೇ ಸ್ಪರ್ಧಿಸಿ ಬಿಜೆಪಿ ಗೆಲುವು ಸಾಧಿಸಿರುವ ಕ್ಷೇತ್ರಗಳಲ್ಲಿ ಮೈತ್ರಿ ಮಾಡಿ ಕೊಂಡರೆ 15 ಸ್ಥಾನ ಗೆಲ್ಲಬಹುದು. ಬೆಂಗಳೂರು ಕೇಂದ್ರ,
ಬೆಂಗಳೂರು ಉತ್ತರ, ವಿಜಯಪುರ, ಬಾಗಲಕೋಟೆ, ಬಳ್ಳಾರಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಅವಕಾಶವಿದೆ ಎಂಬ ಲೆಕ್ಕಾಚಾರ ಹಾಕಲಾಗಿದೆ. ಒಟ್ಟಾರೆ, ಲೋಕಸಭೆ ಚುನಾವಣೆಗೆ ಇನ್ನೂ ಒಂಭತ್ತು ತಿಂಗಳು ಬಾಕಿ ಇರುವಾಗಲೇ ಮೂರೂಪಕ್ಷಗಳು ಒಂದೊಂದು ಲೆಕ್ಕಾಚಾರ ಹಾಕಿಕೊಂಡೇ ಅಖಾಡಕ್ಕಿಳಿಯಲು ತಂತ್ರಗಾರಿಕೆಯಲ್ಲಿ ತೊಡಗಿವೆ.ಅಂತಿಮವಾಗಿ ಯಾರ ಲೆಕ್ಕಾಚಾರ “ಫಲ’ ನೀಡಲಿದೆ, ಯಾರದು ಕೈ ಕೊಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ರಾಜಕೀಯ ಅನಿವಾರ್ಯತೆ
ವಿಧಾನಸಭೆ ಚುನಾವಣೆಯಲ್ಲಿ ಅವರಪ್ಪರಾಣೆ ಎಂದೆಲ್ಲ ಟೀಕೆ ಮಾಡಿದ್ದ ಸಿದ್ದರಾಮಯ್ಯ ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಜತೆ ಒಂದೇ ವೇದಿಕೆಯಲ್ಲಿ ಪ್ರಚಾರ ಮಾಡಬೇಕು. ಇದು ರಾಜಕೀಯ ಅನಿವಾರ್ಯತೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಂದು ಹೇಳಿದರೂ ಮತದಾರರು ಎಷ್ಟರ ಮಟ್ಟಿಗೆ ಒಪ್ಪುತ್ತಾರೆ ಎಂಬುದು ಮುಖ್ಯ. ಬಿಜೆಪಿ ಸಹ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಬಗ್ಗೆ ಮೃಧು ಧೋರಣೆ ತಾಳಿ ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರ ಬಿಟ್ಟಿತ್ತು. ಇದೀಗ ಎರಡೂ ಪಕ್ಷಗಳ ವಿರುದ್ಧ ಮುಗಿಬೀಳಬೇಕಾಗಿದೆ. ಮೋದಿ ಜನಪ್ರಿಯತೆ,ಅಮಿತ್ ತಾ ತಂತ್ರಗಾರಿಕೆಯೂ ಬಿಜೆಪಿ ನೆರವಿಗೆ ಬರುತ್ತಾ ಎಂಬ ಪ್ರಶ್ನೆಯೂ ಇದೆ. – ಎಸ್.ಲಕ್ಷ್ಮಿನಾರಾಯಣ