ಸಿಂಧನೂರು: ಹಿಂದುಳಿದ ವರ್ಗದ ಜನರಿಗಾಗಿ ಯಾವುದೇ ಅಭಿವೃದ್ದಿ ಕೆಲಸ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಬೋಗಸ್ ನಾಯಕರಾಗಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಮಾ.10ರಂದು ಕೂಡಲಸಂಗಮದಲ್ಲಿ ನಡೆಯಲಿರುವ ಹಿಂದುಳಿದ ವರ್ಗಗಳ ಸಮಾವೇಶ ಪ್ರಯುಕ್ತ ಬುಧವಾರ ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಹಿಂದುಳಿದ ವರ್ಗಗಳ ಪೂರ್ವಭಾವಿ ಸಭೆಯಲ್ಲಿ ಅವರು
ಮಾತನಾಡಿದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಿಂದುಳಿದ ವರ್ಗದ ಜನರಿಗಾಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಕಡೆಗಣಿಸಿದ್ದರಿಂಧ ಹಿಂದುಳಿದ ವರ್ಗದವರು ಕಾಂಗ್ರೆಸ್ ಪಕ್ಷದಿಂದ ದೂರ ಸರಿದು ಬಿಜೆಪಿ ಕಡೆ ವಾಲುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಬಗ್ಗೆ ಹಿಂದುಳಿದ ವರ್ಗ ಭ್ರಮನಿರಸನಗೊಂಡಿದೆ ಎಂದರು.
ಜೈಲಿನಲ್ಲಿರುವ ಶಶಿಕಲಾಗೆ ಸಕಲ ಸೌಲಭ್ಯ ಒದಗಿಸುವಂತೆ ರಾಜ್ಯ ಸರ್ಕಾರ ಪತ್ರ ಬರೆದಿದ್ದು ನೋಡಿದರೆ ಜೈಲಿಗೆ ಹೋಗಿ ಬಂದವರ ರೌಡಿಗಳ ಪಕ್ಷವಾಗಿದೆ. ಮುಂದಿನ ದಿನಮಾನಗಳಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋಗುವ ಕಾಲ ದೂರವಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ಮುಸ್ಲಿಮರ
ಮಧ್ಯೆ ಜಗಳ ಹಚ್ಚುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಮಾ.10ರಂದು ಕೂಡಲಸಂಗಮದಲ್ಲಿ ನಡೆಯುವ ಹಿಂದುಳಿದ ವರ್ಗದ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಹಿಂದುಳಿದ ವರ್ಗದ ಶಕ್ತಿ ಸಾಮರ್ಥ್ಯವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ಅವರಿಗೆ ತೋರಿಸಬೇಕು ಎಂದರು.
ಶಾಸಕ ತಿಪ್ಪರಾಜ ಹವಾಲ್ದಾರ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಗೌಡ ಜಾಡಲದಿನ್ನಿ, ಮಾಜಿ ಶಾಸಕರಾದ ಮಾನಪ್ಪ ವಜ್ಜಲ್, ಡಾ| ಶಿವರಾಜ ಪಾಟೀಲ್, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ರಘುನಾಥ ಮಲ್ಕಾಪುರ, ಕೋಟಾ ಶ್ರೀನಿವಾಸ ಪೂಜಾರ, ಎನ್.ಶಂಕ್ರಪ್ಪ, ರಾಜಶೇಖರ ಪಾಟೀಲ್, ಕೊಲ್ಲಾ ಶೇಷಗಿರಿರಾವ್, ಪಾಪಾರೆಡ್ಡಿ, ಮಹಾದೇವಪ್ಪಗೌಡ ಮಸ್ಕಿ, ಆರ್.ಬಸನಗೌಡ, ಎಂ.ದೊಡ್ಡಬಸವರಾಜ, ಅಮರೇಗೌಡ ವಿರೂಪಾಪುರ, ಗಂಗಾಧರ ನಾಯಕ, ಎನ್.ಸ್ವಾಮಿ, ಹನುಮನಗೌಡ ಬೆಳಗುರ್ಕಿ ಮತ್ತಿತರರು ಇದ್ದರು.