Advertisement

ಸಿದ್ದರಾಮಯ್ಯಬಚ್ಚಾ: ಬಿಎಸ್‌ವೈ

09:39 AM Dec 04, 2017 | Team Udayavani |

ಅಫಜಲಪುರ: ವಿಶ್ವದ ಬಹುತೇಕ ನಾಯಕರು ಮೋದಿಜಿ ಅವರನ್ನು ಒಪ್ಪಿಕೊಂಡಿದ್ದಾರೆ, ಆದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ನನಗೆ ಹೆದರುತ್ತಾರೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ಒಬ್ಬ ಬಚ್ಚಾ , ಪ್ರಧಾನಿ ಮೋದಿ ಅವರಿಗೆ ಹೆದರಬೇಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ ಹೇಳಿದರು.

Advertisement

ಪಟ್ಟಣದ ಮಹಾಂತೇಶ್ವರ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ನವ ಕರ್ನಾಟಕ ಪರಿವರ್ತನಾ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ, ದಲಿತ ವರ್ಗದವರು ರಾಷ್ಟ್ರಪತಿಯಾಗಿದ್ದಾರೆ, ಚಹಾ ಮಾರುವವರು ದೇಶದ ಪ್ರಧಾನಿಯಾಗಿದ್ದಾರೆ, ದೇಶದ ಬಹುಭಾಗದ ರಾಜ್ಯಗಳಲ್ಲಿ
ಬಿಜೆಪಿ ಗೆಲುವು ಸಾಧಿಸಿದ್ದು ಕಾಂಗ್ರೆಸ್‌ ಧೂಳಿಪಟವಾಗಿದೆ. ಈಗ ರಾಜ್ಯದಲ್ಲೂ ಬಿಜೆಪಿ 150 ಕ್ಕೂ ಹೆಚ್ಚು ಸ್ಥಾನ ಗೆದ್ದು
ಇತಿಹಾಸ ನಿರ್ಮಿಸಲಿದ್ದೇವೆ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ರಾಜ್ಯವನ್ನು ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲಿಸಿದ್ದಾರೆ, ಉತ್ತರ ಕರ್ನಾಟಕಕ್ಕೆ ನೀರಾವರಿಯಲ್ಲಿ ದ್ರೋಹ ಮಾಡಿದ್ದಾರೆ, ಪಿಡಬ್ಲ್ಯುಡಿ ಇಲಾಖೆಯಲ್ಲಿ ಹಗಲು ದರೋಡೆ ನಡೆದಿದೆ. ಇದೆಲ್ಲವು
ಗೊತ್ತಿದ್ದರೂ ಮುಖ್ಯಮಂತ್ರಿ ಸುಮ್ಮನಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಮಲೇಶಿಯಾದಿಂದ ಮರಳು ಆಮದು ಮಾಡಿಕೊಳ್ಳಲು ಚಿಂತನೆ ನಡೆಸಿದೆ. ನಾನು ವಿದೇಶದಿಂದ ಮರಳು ತರಿಸಲು ಬಿಡುವುದಿಲ್ಲ. ರಾಜ್ಯದಲ್ಲೆ ಸಾಕಷ್ಟು ಮರಳಿದೆ, ಅದನ್ನು ಸರಿಯಾಗಿ ಸದುಪಯೋಗ ಪಡೆಸಿಕೊಳ್ಳುತ್ತಿಲ್ಲ ಎಂದು
ದೂರಿದರು. ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಿದೆ. ದಲಿತ ವ್ಯಕ್ತಿ ರಾಷ್ಟ್ರಪತಿಯಾಗಿದ್ದಾರೆ. ಚಹಾ ಮಾರುವವರು ದೇಶದ ಪ್ರಧಾನಿಯಾಗಿದ್ದಾರೆ. ಕಾಂಗ್ರೆಸ್‌ ಧೂಳಿಪಟವಾಗಿದೆ, ಹೀಗಾಗಿ ರಾಜ್ಯದಲ್ಲೂ ಕಾಂಗ್ರೆಸ್‌ ಧೂಳಿಪಟವಾಗಲಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಭ್ರಷ್ಟಾಚಾರದಲ್ಲಿ ರಾಜ್ಯವನ್ನು ಮೊದಲ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. ಕಾನೂನು ವ್ಯವಸ್ಥೆ ಹದಗೆಟ್ಟಿದೆ, ಅಭಿವೃದ್ಧಿ ಸ್ಥಗಿತಗೊಂಡಿದೆ. ಹೀಗಾಗಿ ನಾನು ಮುಖ್ಯಮಂತ್ರಿಯಾದ ತಕ್ಷಣ ಪ್ರಧಾನಿ ಮೋದಿ ಅವರ ಕಾಲು ಹಿಡಿದಾದರೂ ರಾಜ್ಯದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಕೆಲಸ ಮಾಡುತ್ತೇನೆ
ಎಂದರು.

Advertisement

ಉತ್ತರ ಕರ್ನಾಟಕ ಭಾಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನೀರಾವರಿ ಸಚಿವ ಎಂ.ಬಿ. ಪಾಟೀಲ ನೀರಾವರಿ ಕ್ಷೇತ್ರದಲ್ಲಿ ಭಾರಿ ಮೋಸ ಮಾಡಿದ್ದಾರೆ. ನಾನು ಕೇವಲ ಭರವಸೆ ನೀಡುವ ವ್ಯಕ್ತಿಯಲ್ಲ, ಹೇಳಿದ್ದನ್ನು ಮಾಡಿ ತೋರಿಸುತ್ತೇನೆ. ನನಗೆ ಅವಕಾಶ ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸಚಿವರು, ಸಚಿವರ ಸಂಬಂಧಿಗಳು, ಮಕ್ಕಳು ಸೇರಿದಂತೆ ಅವರ ಸಹಚರರು ಸೇರಿಕೊಂಡು ರಾಜ್ಯದ ಲೂಟಿ ಮಾಡುತ್ತಿದ್ದಾರೆ, ಇದರ ಬಗ್ಗೆ ನಾನು ಹೇಳಿಲ್ಲ, ಸುದ್ದಿ ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಬ್ರಹ್ಮಾಂಡ ಭ್ರಷ್ಟಾಚಾರ, ಕೋಟ್ಯಂತರ ಅವ್ಯವಹಾರ, ದಲಿತರ, ದೀನರ, ಹಿಂದುಳಿದವರ, ಅಲ್ಪಸಂಖ್ಯಾತರ  ಹೆಸರಲ್ಲಿ ಮೋಸದ ರಾಜಕೀಯ ಮಾಡುತ್ತಿರುವ ಮುಖ್ಯಮಂತ್ರಿಗಳು ರಾಜ್ಯದಲ್ಲಿ ತುಘಲಕ್‌ ದರ್ಬಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಮಾಜಿ ಶಾಸಕ ಎಂ.ವೈ. ಪಾಟೀಲ ಮಾತನಾಡಿ, ಪಕ್ಷದ ಒಳ ಜಗಳದಿಂದ ರಾಜ್ಯದಲ್ಲಿ ಕಾಂಗ್ರೇಸ್‌ ಮುಕ್ತ ಕರ್ನಾಟಕವಾಗಿಲ್ಲ, ಈಗ ನಾವೆಲ್ಲ ಒಂದಾಗಿದ್ದೇವೆ, ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಆಗುತ್ತಾರೆ ಎಂದು ಹೇಳಿದರು. 

ಶಾಸಕ ಮಾಲೀಕಯ್ಯ ಗುತ್ತೇದಾರ ಮತ್ತವರ ಸಹೋದರರು ಅಕ್ರಮ ಮರಳು ಧಂದೆ ಮತ್ತು ಸರಾಯಿ ಧಂದೆ ಮಾಡುತ್ತಾ ತಾಲೂಕಿನ ಅಭಿವೃದ್ಧಿ ಕಡೆಗಣಿಸಿದ್ದಾರೆ. ಕಳೆದ 25 ವರ್ಷಗಳಿಂದ ಅಫಜಲಪುರ ಮತಕ್ಷೇತ್ರ ಮಾಲೀಕಯ್ಯ ಗುತ್ತೇದಾರ ಕೈಯಲ್ಲಿ ಸಿಕ್ಕು ಶಾಪಗ್ರಸ್ಥವಾಗಿದೆ. ತಾಲೂಕಿನ ಶಾಪ ಹೋಗಲಾಡಿಸಬೇಕಾದರೆ ಬಿಜೆಪಿಗೆ ನಿಮ್ಮ ಮತ
ನೀಡಿ ಎಂದು ಮನವಿ ಮಾಡಿದರು.

ಸಂಸದ ಶ್ರೀರಾಮಲು, ಶಾಸಕರಾದ ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ ಮಾತನಾಡಿ, ಪರಿವರ್ತನಾ ಯಾತ್ರೆಯಿಂದ ಉಳಿದ ಪಕ್ಷಗಳ ಪಾಳಯದಲ್ಲಿ ನಡುಕ ಹುಟ್ಟಿಸಿದೆ, ರಾಜ್ಯ ಕಾಂಗ್ರೆಸ್‌ ಸರ್ಕಾರ ಕೊಲೆಗಡುಕ ಸರ್ಕಾರವಾಗಿದೆ, ಕಾಂಗ್ರೆಸ್‌ ದೇಶಕ್ಕೆ ವರಗಾಗಲಿಲ್ಲ ಶಾಪವಾಗಿದೆ ಎಂದು ಹೇಳಿದರು.

ಸಂಸದರಾದ ಭಗವಂತ ಖೂಬಾ, ಎಂಎಲ್‌ ಸಿಗಳಾದ ಬಿ.ಜಿ. ಪಾಟೀಲ, ರಘುನಾಥ ಮಲ್ಕಾಪುರೆ, ಅರುಣ ಶಹಾಪೂರ, ಅಮರನಾಥ ಪಾಟೀಲ, ಶಾಸಕ ರಮೇಶ ಭೂಸನೂರ, ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ, ಕೆ.ಬಿ ಶ್ರೀನಿವಾಸ,
ಬಾಬುರಾವ್‌ ಚವ್ಹಾಣ, ವಾಲ್ಮೀಕಿ ನಾಯಕ, ರವಿ ಬಿರಾದಾರ, ರಾಜುಕುಮಾರ ತೇಲ್ಕೂರ, ತಾಲೂಕು ಅಧ್ಯಕ್ಷ ಸೂರ್ಯಕಾಂತ ನಾಕೇದಾರ, ಜಿ.ಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಶಿರಸಗಿ, ರೇವುನಾಯಕ ಬೆಳಮಗಿ, ರಾಜೇಂದ್ರ ಪಾಟೀಲ, ಪ್ರಕಾಶ ಜಮಾದಾರ, ಅವ್ವಣ್ಣ ಮ್ಯಾಕೇರಿ, ಶರಣು ಕುಂಬಾರ, ಅರುಣಗೌಡ ಪಾಟೀಲ ಹಾಗೂ ಇತರರು ಇದ್ದರು.

ಅಭ್ಯರ್ಥಿ ಆಯ್ಕೆಗೆ ಜನಾಭಿಪ್ರಾಯ ಸಂಗ್ರಹ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಆಗಲಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಗಲಿ ಟಿಕೆಟ್‌ ಅಂತಿಮಗೊಳಿಸುವುದಿಲ್ಲ, ಅಫಜಲಪುರ ಮತಕ್ಷೇತ್ರದಲ್ಲಿ ಬಿಜೆಪಿಯಿಂದ ಯಾರು ಅಭ್ಯರ್ಥಿ ಎಂದು ಇನ್ನೂ ಘೋಷಣೆ ಮಾಡಿಲ್ಲ, ಜನಾಭಿಪ್ರಾಯ ಸಂಗ್ರಹಿಸಿ ನಂತರ ಯಾರಿಗೆ ಹೆಚ್ಚಿನ ಜನರ ಬೆಂಬಲವಿದೆ
ಅವರಿಗೆ ಟಿಕೆಟ್‌ ನೀಡಲಾಗುತ್ತದೆ ಎಂದು ಯಡಿಯೂರಪ್ಪ ಹೇಳಿದರು. ಈ ಹೇಳಿಕೆ ಕೇಳಿದ ನಂತರ ನೆರೆದಿದ್ದ ಜನರು ಎಂ.ವೈ. ಪಾಟೀಲ ಕೀ ಜೈ ಎಂದರೆ, ಆರ್‌.ವಿ. ಪಾಟೀಲ ರೇವೂರ ಬೆಂಬಲಿಗರು ರಾಜೇಂದ್ರ ಪಾಟೀಲ ಕೀ ಜೈ ಎಂದು ಕೂಗುತ್ತಿದ್ದರು. ಇದರಿಂದ ಅಫಜಲಪುರದಲ್ಲಿ ಟಿಕೆಟ್‌ಗಾಗಿ ಬಹಳಷ್ಟು ಗೊಂದಲವಿದೆ ಎನ್ನುವುದು ರಾಜ್ಯ ನಾಯಕರ
ಗಮನಕ್ಕೆ ಬಂತು.

Advertisement

Udayavani is now on Telegram. Click here to join our channel and stay updated with the latest news.

Next