Advertisement

ಯಾರಿಗೆ ಅಮೃತ ಸಂದೇಶ? ಇಂದು ದಾವಣಗೆರೆಯಲ್ಲಿ ಸಿದ್ದರಾಮಯ್ಯ ಜನ್ಮದಿನ ಸಮಾವೇಶ

12:17 AM Aug 03, 2022 | Team Udayavani |

ದಾವಣಗೆರೆ: ಬಹುಚರ್ಚಿತ”ಸಿದ್ದರಾಮಯ್ಯ ಹುಟ್ಟುಹಬ್ಬ’ ಸಮಾವೇಶ ರಾಜಕೀಯವಾಗಿ ಯಾವ ಸಂದೇಶ ರವಾನಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

Advertisement

ಚುನಾವಣೆ ಹೊಸ್ತಿಲಲ್ಲಿ ನಡೆಯು ತ್ತಿರುವ ಈ ಸಮಾವೇಶ ಮತ್ತು ಇದರಲ್ಲಿ ರಾಹುಲ್‌ ಗಾಂಧಿಯವರ ಉಪಸ್ಥಿತಿಯ ಹಿಂದಿನ ಲೆಕ್ಕಾ ಚಾರಗಳೂ ರಾಜಕೀಯ ಲಾಭದ ನಿರೀಕ್ಷೆಯದ್ದೇ ಆಗಿವೆ. ರಾಹುಲ್‌ ಗಾಂಧಿಯವರು ಮಂಗಳವಾರವೇ  ರಾಜ್ಯಕ್ಕೆ ಆಗಮಿಸಿದ್ದಾರೆ.

ವ್ಯಕ್ತಿಪೂಜೆಯಲ್ಲ, ಪಕ್ಷ ಪೂಜೆ ಮಾಡಿ ಎನ್ನುತ್ತಿರುವ ಹೊತ್ತಿನಲ್ಲೇ ಈ “ಅಮೃತ ಮಹೋತ್ಸವ’ ನಾನಾ ರಾಜಕೀಯ ವ್ಯಾಖ್ಯಾನ ಗಳಿಗೆ ಎಡೆ ಮಾಡಿಕೊಟ್ಟಿದೆ.

ಚುನಾವಣೆ ಹತ್ತಿರ ಇರುವುದರಿಂದ ಈ ಸಮಾವೇಶ ಕಾಂಗ್ರೆಸ್‌ಗೆ ಲಾಭ ತಂದುಕೊಡಲಿದೆ ಎನ್ನುವ ನಿರೀಕ್ಷೆ ಪಕ್ಷದ ಹೈಕಮಾಂಡ್‌ಗೂ ಇದೆ. ಇದೇ ಕಾರಣದಿಂದ ರಾಹುಲ್‌ ಗಾಂಧಿ ಕಾರ್ಯಕ್ರಮಕ್ಕೆ ಬರಲು ಒಪ್ಪಿರುವುದು.

ಲಾಭದ ಲೆಕ್ಕಾಚಾರ
ಅಮೃತ ಮಹೋತ್ಸವ ಸಮಾವೇಶ ಒಂದು ರೀತಿಯಲ್ಲಿ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನ ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಇದರ ರಾಜಕೀಯ ಲಾಭ ಯಾರಿಗೆ ಎಂಬ ಪ್ರಶ್ನೆಯೂ ಮೂಡಿದೆ. ಸಿದ್ದರಾಮಯ್ಯ ಅವರು ಈ ಸಮಾವೇಶದಿಂದ ಕಾಂಗ್ರೆಸ್‌ಗೆ ಶಕ್ತಿ ಬರಲಿದೆ, ಚುನಾವಣೆ ಹತ್ತಿರ ಇರುವಾಗ ಇದು ಸಂಘಟನೆಗೆ ನೆರವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ. ಇದು ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರಿಗೆ ಬಲ ತುಂಬಲಿದೆ.

Advertisement

ಜೆಡಿಎಸ್‌ ಮತ್ತು ಬಿಜೆಪಿಯ ಕೆಲವು ಶಾಸಕರು, ನಾಯಕರು ಪರೋಕ್ಷ ಸಹಕಾರ ನೀಡುತ್ತಿರುವುದು ಗುಟ್ಟೇನಲ್ಲ. ಕಾಂಗ್ರೆಸ್‌ನ ಬಹುತೇಕ ಶಾಸಕರು, ಮಾಜಿ ಶಾಸಕರು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಹಿಂದುಳಿದ ಸಮುದಾಯದ ಮುಖಂಡರು ಸಮಾವೇಶದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಚುನಾವಣೆ ಸಂದರ್ಭ ಟಿಕೆಟ್‌ ಪಡೆಯಲು ಇದನ್ನೇ ಮುಂದಿಟ್ಟು ಒತ್ತಡ ಹೇರಬಹುದು. ರಾಜ್ಯ ರಾಜಕೀಯ ವಲಯದಲ್ಲಿ ಸಿದ್ದರಾಮಯ್ಯ ಹುಟ್ಟುಹಬ್ಬ ವಿಚಾರದಲ್ಲಿ ಚರ್ಚೆಯಾದಷ್ಟು ಬೇರೆ ಯಾವುದೇ ನಾಯಕರ ಹುಟ್ಟುಹಬ್ಬ ಆಚರಣೆ ಬಗ್ಗೆ ಆಗಿಲ್ಲ. ಹೀಗಾಗಿ ದಾವಣಗೆರೆಯ ಸಮಾವೇಶ ರಾಜ್ಯ ರಾಜಕಾರಣದಲ್ಲಿ ಯಾವ ಧ್ರುವೀಕರಣಕ್ಕೆ ಕಾರಣವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

“ಅಹಿಂದ’ ಸಮಾವೇಶ, “ಬಳ್ಳಾರಿ’ ಪಾದಯಾತ್ರೆ ಅನಂತರದ ಶಕ್ತಿ ಪ್ರದರ್ಶನ
ಸಿದ್ದರಾಮಯ್ಯ ಜೆಡಿಎಸ್‌ ತೊರೆದ ಅನಂತರ ರಾಜ ಕೀಯ ವಾಗಿ ಬಲ ಪ್ರದರ್ಶನಕ್ಕೆ ಕೈಗೊಂಡ “ಅಹಿಂದ ಸಮಾವೇಶ’, ಕಾಂಗ್ರೆಸ್‌ ಸೇರಿದ ಬಳಿಕ ವಿಪಕ್ಷ ನಾಯಕನಾಗಿ ಗಣಿ ಅಕ್ರಮ ವಿರುದ್ಧ ಕೈಗೊಂಡ “ಬಳ್ಳಾರಿ ಪಾದಯಾತ್ರೆ’ ಐತಿ ಹಾಸಿಕ. ಇವೆರಡೂ ಅವರಿಗೆ ರಾಜ ಕೀಯ ವಾಗಿ ಬಲ ತುಂಬಿವೆ. ಈಗ ದಾವಣಗೆರೆ ಸಮಾವೇಶವೂ ಅವರ ರಾಜಕೀಯ ಜೀವನದ ಮಹತ್ವದ ಘಟ್ಟ ಎಂದೇ ಬಿಂಬಿತ ವಾಗಿದೆ. ಇಲ್ಲಿಂದ ಅವರ ರಾಜಕೀಯ ನಡೆ ಬದ ಲಾಗುವ ಲಕ್ಷಣಗಳೂ ಕಂಡು ಬರುತ್ತಿವೆ.

ಕಾರ್ಯಕ್ರಮಕ್ಕೆ ಸಿದ್ಧತೆ ಪೂರ್ಣ
ದಾವಣಗೆರೆ: ಅಮೃತ ಮಹೋತ್ಸವ ಕಾರ್ಯಕ್ರಮದ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ನಗರದ ಹೊರವಲಯದಲ್ಲಿರುವ ಶಾಮನೂರು ಅರಮನೆ ಮೈದಾನದಲ್ಲಿ ಸುಂದರ ಭವ್ಯ ವೇದಿಕೆ ನಿರ್ಮಾಣಗೊಂಡಿದೆ. ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ. ಮೂರು ವೇದಿಕೆಗಳನ್ನು ನಿರ್ಮಿಸಲಾಗಿದೆ. ಮಧ್ಯದ ವೇದಿಕೆಯಲ್ಲಿ ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಮತ್ತಿತರ ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.

-ಎಸ್‌. ಲಕ್ಷ್ಮೀನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next