ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವಿಎಂ ಯಂತ್ರಗಳ ಬಗ್ಗೆ ಮತ್ತೂಮ್ಮೆ ಸಂಶಯ ವ್ಯಕ್ತಪಡಿಸಿದ್ದು, ಇತ್ತೀಚೆಗೆ ಪ್ರಕಟವಾದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಇವಿಎಂ ಮೇಲಿನ ಅನುಮಾನವನ್ನು ಪುಷ್ಠಿàಕರಿಸಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಲೀಡ್ ಸಿಕ್ಕಿರುವ ಕಡೆಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲೀಡ್ ಬಂದಿದೆ. ಇದರಿಂದ ಬಿಜೆಪಿಯವರು ಇವಿಎಂಗಳನ್ನು ಮ್ಯಾನುಪ್ಲೇಟ್ ಮಾಡ್ತಾರೆ ಅನ್ನುವ ಅನುಮಾನ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ಪ್ರತಿ ಬಾರಿ ಚುನಾವಣೆಗಳಲ್ಲಿ ಜನರು ಸ್ಥಳೀಯ ವಿಚಾರಗಳ ಮೇಲೆ ಮತ ಹಾಕುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ದೇಶದ ಬಗ್ಗೆ ಗಮನ ಇಟ್ಟುಕೊಂಡು ಮತ ಹಾಕಿದ್ದರೂ, ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಸ್ಥಳೀಯ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಕೊಟ್ಟಿದ್ದಾರೆ.
ಪ್ರತಿ ಚುನಾವಣೆಗಳಲ್ಲೂ ಫಲಿತಾಂಶದಲ್ಲಿ ವ್ಯತ್ಯಾಸ ಇರುತ್ತದೆ. ಲೋಕಸಭಾ, ವಿಧಾನಸಭಾ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ವ್ಯತ್ಯಾಸ ಇರುತ್ತದೆ ಎಂದರು. ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಸಂಪುಟ ವಿಸ್ತರಣೆಯನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು. ತ್ರಿಭಾಷಾ ಶಿಕ್ಷಣ ನೀತಿ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,
ನಾವೇನಾದರೂ ಹಿಂದಿ ಭಾಷೆ ಬೇಕೆಂದು ಕೇಳಿದ್ದೇವೆಯೆ ಎಂದು ಪ್ರಶ್ನಿಸಿದರಲ್ಲದೆ, ಕೇಂದ್ರ ಸರ್ಕಾರ ಏಕಮುಖೀ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಆರೋಪಿಸಿದರು. ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಿ ಇಲ್ಲ. ಬಲವಂತವಾಗಿ ಯೋಜನೆ ಜಾರಿಗೆ ಮುಂದಾದರೆ ನಾವು ತಮಿಳುನಾಡು ಮಾದರಿಯಲ್ಲಿ ಹೋರಾಟ ಮಾಡಲು ಸಿದ್ಧ ಎಂದರು.