Advertisement

ಸಿದ್ದು ಹೊಗಳಿಕೆ ಜತೆಗೇ ನಾಯಕರಿಂದ ಸಾಮೂಹಿಕ ನಾಯಕತ್ವ ಜಪ

11:05 PM Aug 03, 2022 | Team Udayavani |

ದಾವಣಗೆರೆ: ಬಹುನಿರೀಕ್ಷಿತ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಸಮಾವೇಶದಲ್ಲಿ ಕಾಂಗ್ರೆಸ್‌ ನಾಯಕರು ಸಿದ್ದರಾಮಯ್ಯ ಗುಣಗಾನ ಮಾಡಿದರೂ ಸಾಮೂಹಿಕ ನಾಯಕತ್ವ ಜಪ ಮಾಡಿ ಜಾಣ್ಮೆ ನಡೆ ಅನುಸರಿಸಿದರು.

Advertisement

ಸಿದ್ದರಾಮಯ್ಯರನ್ನು ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವುದೇ ಸಮಾವೇಶದ ಉದ್ದೇಶ ಎಂಬ ಮಾತು ಕೇಳಿಬಂದಿತ್ತು.

ಸಮಾವೇಶವು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ನಡುವೆ ಬಿರುಕು ಮೂಡಿಸಿ ಪಕ್ಷದಲ್ಲಿ ಬಣ ರಾಜಕೀಯ ಜೋರಾಗಲಿದೆ ಎಂಬ ಆತಂಕವು ನಾಯಕರ ಒಗ್ಗಟ್ಟು ಪ್ರದರ್ಶನದಿಂದ ದೂರವಾದಂತಾಗಿದೆ.

ಖುದ್ದು ರಾಹುಲ್‌ ಗಾಂಧಿ ಅವರು ಸಿದ್ದರಾಮಯ್ಯ ಎಂದರೆ ನನಗೆ ಇಷ್ಟ. ಅವರ ವಿಚಾರಧಾರೆ, ಬಡವರು ಹಾಗೂ ದುರ್ಬಲರ ಪರ ಅವರ ಬದ್ಧತೆ ಮುಖ್ಯಮಂತ್ರಿಯಾಗಿ ಅವರು ರೂಪಿಸಿದ ಕಾರ್ಯಕ್ರಮಗಳು ಇಷ್ಟ .
ಅವರೊಬ್ಬ ಮಾಸ್‌ ಲೀಡರ್‌ ಎಂದು ಹೇಳಿದರಾದರೂ, ಡಿ.ಕೆ.ಶಿವಕುಮಾರ್‌ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೊಗಳಿದರು.

ಸಾಮೂಹಿಕ ನಾಯಕತ್ವದಡಿ ಬಿಜೆಪಿ -ಆರೆಸ್ಸೆಸ್‌ ವಿರುದ್ಧ ಹೋರಾಟ ಮಾಡಿ ಕರ್ನಾಟಕದಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ತನ್ನಿ ಎಂದು ಬಹಿರಂಗ ವಾಗಿಯೇ ಹೇಳುವ ಮೂಲಕ ಡಿ.ಕೆ.ಶಿವಕುಮಾರ್‌ ಸೇರಿ ಹಲವರಲ್ಲಿದ್ದ ಆತಂಕವನ್ನೂ ದೂರ ಮಾಡಿದರು.

Advertisement

ಸಿದ್ದರಾಮಯ್ಯ ಅವರು ಕೂಡ, “ನನ್ನ ಹಾಗೂ ಡಿ.ಕೆ.ಶಿವಕುಮಾರ್‌ ನಡುವೆ ಭಿನ್ನಾಭಿಪ್ರಾಯವಿದೆ. ಸಮಾವೇಶಕ್ಕೆ ಅವರ ವಿರೋಧವಿತ್ತು ಎಂಬುದೆಲ್ಲ ಬಿಜೆಪಿ ಸೃಷ್ಟಿ. ನಮ್ಮಲ್ಲಿ ಯಾವುದೇ ಬಿರುಕು ಇಲ್ಲ. ನಮ್ಮ ಗುರಿ ಪಕ್ಷ ಅಧಿಕಾರಕ್ಕೆ ತರುವುದು’ ಎಂದು ಹೇಳಿದ್ದು, ಇದೇ ವೇದಿಕೆಯಲ್ಲಿ ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯ ಅವರಿಗೆ ರೇಷ್ಮೆ ಶಾಲು ಹೊದಿಸಿ, ಇಂದಿರಾಗಾಂಧಿಯ ಭಾವಚಿತ್ರ ಸ್ಮರಣಿಕೆ ಕೊಟ್ಟು ಆಲಿಂಗಿಸಿ ಕೊಂಡಿದ್ದು ಕಾರ್ಯಕರ್ತರಲ್ಲಿದ್ದ ಗೊಂದಲ ನಿವಾರಿಸುವ ಪ್ರಯತ್ನ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಇಬ್ಬರ ಅಪ್ಪುಗೆ ನೋಡಿ ನನಗೆ ಸಂತಸವಾಗಿದೆ ಎಂದು ರಾಹುಲ್‌ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್‌ ಡೈನಮಿಕ್‌ ಅಧ್ಯಕ್ಷರು ಎಂದು ಕೆ.ಸಿ. ವೇಣುಗೋಪಾಲ್‌ ಶಹಬ್ಟಾಸ್‌ಗಿರಿ ನೀಡುವ ಹೇಳುವ ಮೂಲಕ ವೇದಿಕೆಯಲ್ಲೇ “ಇಬ್ಬರೂ ಪಕ್ಷಕ್ಕೆ ಶಕ್ತಿ’ ಎಂಬ ಸಂದೇಶ ರವಾನೆಯಾಗು ವಂತೆ ನೋಡಿಕೊಂಡರು ಎಂದೇ ಹೇಳಲಾಗುತ್ತಿದೆ.

ಬಿ.ಕೆ.ಹರಿಪ್ರಸಾದ್‌, ಡಾ| ಜಿ.ಪರಮೇಶ್ವರ್‌, ಎಂ.ಬಿ. ಪಾಟೀಲ್‌ ಮಾತನಾಡುವ ಸಂದರ್ಭದಲ್ಲೂ ಸಿದ್ದರಾಮಯ್ಯ ಅವರ ಅವಧಿಯ ಯೋಜನೆಗಳು ಹಾಗೂ ಅದರಿಂದ ಆದ ಅನುಕೂಲದ ಬಗ್ಗೆ ಹೇಳುತ್ತಾ, ಅವರ ಮಾರ್ಗದರ್ಶನದಲ್ಲಿ ಮತ್ತೆ ಪಕ್ಷ ಅಧಿಕಾರಕ್ಕೆ ತರೋಣ ಎಂದು ಪ್ರತಿಪಾದಿಸಿದರು.

ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಪದೇಪದೆ ಹೇಳುತ್ತಿದ್ದ ಮಾಜಿ ಸಚಿವ ಜಮೀರ್‌ ಅಹಮದ್‌ ಅವರು ಅಪ್ಪಿ ತಪ್ಪಿಯೂ ಭಾಷಣದ ವೇಳೆ ಆ ವಿಚಾರ ಪ್ರಸ್ತಾವಿಸಲಿಲ್ಲ. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಶಕ್ತಿ, 10 ಲಕ್ಷ ಜನ ಇಲ್ಲಿ ಬಂದಿರುವುದೇ ಅವರ ಜನಪ್ರಿಯತೆ ಸಾಕ್ಷಿ ಎಂದಷ್ಟೇ ಹೇಳಿದರು. ಇದು ಹೈಕಮಾಂಡ್‌ನ‌ ತಾಕೀತಿನ ಎಫೆಕ್ಟ್ ಎಂದೂ ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಪ್ರತಿ ಹಂತದಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು ಎಂದೇ ಹೇಳಿದ್ದು ಕೂಡ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದು ಕೊಟ್ಟಿದೆ. ಒಟ್ಟಾರೆ, ನಮ್ಮ ನಿರೀಕ್ಷೆಯಂತೆ ಸಿದ್ದರಾಮಯ್ಯ ಕಾರ್ಯಕ್ರಮ ಕಾಂಗ್ರೆಸ್‌ಗೆ ರಾಜಕೀಯವಾಗಿ ಲಾಭ ತಂದುಕೊಡುವ ಸಮಾವೇಶವಾಯಿತು ಎಂದು ಹಿರಿಯ ನಾಯಕರೊಬ್ಬರು ಹೇಳುತ್ತಾರೆ.

ಸಮಾವೇಶದ ಮತ್ತೊಂದು ಪ್ರಮುಖ ಅಂಶ ಎಂದರೆ, ದೈಹಿಕವಾಗಿ ಮಾನಸಿಕವಾಗಿ ಸದೃಢವಾಗಿ ಇರುವವರೆಗೂ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ. ಬಿಜೆಪಿ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆ ಕೊನೆಯದಾದರೂ ಸಕ್ರಿಯ ರಾಜಕಾರಣದಿಂದ ದೂರವಾಗಲ್ಲ ಎಂಬ ಸಂದೇಶ ರವಾನಿಸಿದರು.

ಜನಸ್ತೋಮ ಕಂಡು ಸಂತಸ
ಸಮಾವೇಶದ ಬಗ್ಗೆ ದೂರುಗಳು ಹೈಕಮಾಂಡ್‌ವರೆಗೂ ತಲುಪಿದ್ದರಿಂದ ವರಿಷ್ಠರಿಗೂ ಚುನಾವಣೆ ಹೊಸ್ತಿಲಲ್ಲಿ ಏನಾಗುವುದೋ ಎಂಬ ಆತಂಕ ಇತ್ತಾದರೂ ಜನಸ್ತೋಮ ಕಂಡು ರಾಹುಲ್‌ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ್‌ ಸಂತಸಗೊಂಡಿದ್ದಾರೆ. ವೇದಿಕೆಯಲ್ಲಿ ಮುಖಂಡರ ಭಾಷಣದ ವೇಳೆಯೂ ರಾಹುಲ್‌ ಹಾಗೂ ಕೆ.ಸಿ.ವೇಣುಗೋಪಾಲ್‌ ಅವರು ಕೃಷ್ಣ ಬೈರೇ ಗೌಡ, ಸತೀಶ ಜಾರಕಿಹೊಳಿ, ಎಸ್‌.ಎಸ್‌. ಮಲ್ಲಿ ಕಾರ್ಜುನ ಅವರಿಂದ ಕೆಲವು ಮಾಹಿತಿ ಪಡೆದುಕೊಂಡರು. ಎಲ್ಲರೂ ಸಾಮೂಹಿಕ ನಾಯಕತ್ವದಡಿ ಚುನಾವಣೆಗೆ ಹೋದರೆ ಪಕ್ಷಕ್ಕೆ ಲಾಭ ಎಂದೇ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

– ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next