ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೈಕಮಾಂಡ್ ಹೇಳಿದ ಕಡೆ ನಿಲ್ಲುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋಲಾರ, ಕೊಪ್ಪಳ, ಚಾಮರಾಜಪೇಟೆ, ಚಿಕ್ಕನಾಯಕನಹಳ್ಳಿ, ಅರಕಲಗೂಡು, ಹುಣಸೂರು ಕ್ಷೇತ್ರದವರು ನಮ್ಮಲ್ಲೇ ಸ್ಪರ್ಧೆ ಮಾಡಿ ಎಂದು ಆಹ್ವಾನ ನೀಡಿದ್ದಾರೆ. ಹಾಗೆಂದು ಎಲ್ಲ ಕಡೆಯಿಂದ ಕಣಕ್ಕಿಳಿಯಲು ಆಗುವುದಿಲ್ಲ ಎಂದರು.
ನನಗೆ ಚಾಮರಾಜಪೇಟೆ ಬಗ್ಗೆ ಒಲವೂ ಇಲ್ಲ, ವಿರೋಧವೂ ಇಲ್ಲ.ನಾನು ಆಗಾಗ ಚಾಮರಾಜಪೇಟೆಗೆ ಬರುತ್ತಿರುತ್ತೇನೆ ಎಂಬ ಕಾರಣಕ್ಕೆ ಇಲ್ಲಿಂದಲೇ ಸ್ಪರ್ಧಿಸುತ್ತೇನೆ ಎಂದು ಭಾವಿಸುವುದು ಸರಿಯಲ್ಲ. ನಾನು ಬಾದಾಮಿ ಕ್ಷೇತ್ರ ಶಾಸಕನಾಗಿದ್ದೇನೆ. ಮುಂದಿನ ಚುನಾವಣೆಯಲ್ಲಿ ನನ್ನ ಆಸಕ್ತಿ ಯಾವ ಕ್ಷೇತ್ರದ ಮೇಲೆ ಎಂದು ಚುನಾವಣೆ ಸಮಯದಲ್ಲಿ ಹೇಳುತ್ತೇನೆ ಎಂದು ಹೇಳಿದರು.
ಚಿಮ್ಮನಕಟ್ಟಿ ಹೇಳಿಕೆ ಹಿಂದೆ ಕಾಂಗ್ರೆಸ್‌ನವರೇ ಇದ್ದಾರೆ ಎಂಬ ಸಿ.ಟಿ. ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ಬಗ್ಗೆ ಮಾತನಾಡಲು ಅವರು ಯಾರು ಎಂದು ಪ್ರಶ್ನಿಸಿದರು.
ಚಿಮ್ಮನಕಟ್ಟಿಗೆ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ ಎಂಬ ಬೇಸರವಿತ್ತೇ ಎಂಬ ಪ್ರಶ್ನೆಗೆ, ಎಲ್ಲರಿಗೂ ಟಿಕೆಟ್ ಕೊಡಲು ಆಗುವುದಿಲ್ಲ. ಹಾಗೆಂದು ಟಿಕೆಟ್ ಕೊಡುವವನು ನಾನಲ್ಲ. ಹೈಕಮಾಂಡ್ ಎಂದರು.
ಹೆಬ್ಟಾಳಕ್ಕೆ ಆಹ್ವಾನ :
ಈ ಮಧ್ಯೆ, ಸಿದ್ದರಾಮಯ್ಯ ಅವರು ಹೆಬ್ಟಾಳ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಶಾಸಕ ಬೈರತಿ ಸುರೇಶ್ ಆಹ್ವಾನ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕ್ಷೇತ್ರಕ್ಕೆ ಸೀಮಿತವಾದ ನಾಯಕರಲ್ಲ. ಹೆಬ್ಟಾಳ ಸಹಿತ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆದ್ದು ಬರುವ ವರ್ಚಸ್ಸು ಅವರಿಗಿದೆ ಎಂದು ಹೇಳಿದ್ದಾರೆ.