Advertisement

ಬಾದಾಮಿ ಬೇಸರ: ಸಿದ್ದು ಮುಂದಿನ ನಡೆ ಏನು?

01:39 PM Dec 08, 2021 | Team Udayavani |

ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಕಳೆದ ಬಾರಿ ಸ್ಪರ್ಧಿಸಿದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರದ್ದೇ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಹೇಳಿಕೆಗೆ ಮೈಸೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿಯೇ ಸಿದ್ದರಾಮಯ್ಯ 2023ರ ಅಸೆಂಬ್ಲಿ ಚುನಾವಣೆಯಲ್ಲಿ ಎಲ್ಲಿ ಕಣಕ್ಕೆ ಇಳಿಯುತ್ತಾರೆ ಎಂಬ ಕುತೂಹಲ ಕೆರಳಿಸಿದೆ.

Advertisement

ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಮೇರು ನಾಯಕರು. ಅವರು ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲೂ ಸ್ಪರ್ಧಿಸಬಹುದು. ಅಲ್ಲದೇ, ಅವರನ್ನು ಅನೇಕ ಕ್ಷೇತ್ರಗಳಲ್ಲಿ ಅಲ್ಲಿನ ಕಾರ್ಯಕರ್ತರು ಸ್ಪರ್ಧಿಸುವಂತೆ ಆಹ್ವಾನಿಸುತ್ತಿದ್ದಾರೆ. ಹೀಗಿರುವಾಗ ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಕುಂದು ತರುವ ರೀತಿ ಚಿಮ್ಮನಕಟ್ಟಿ ಅವರು ಮಾತಾಡಿರುವುದು ಸರಿಯಲ್ಲ ಎಂಬುದು ಮೈಸೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆಯೇ ಸಿದ್ದರಾಮಯ್ಯ ಮತ್ತೆ ವರುಣಾದಿಂದಲೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.

ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರವಲ್ಲದೇ ಬಾದಾಮಿಯಲ್ಲಿಯೂ ಸಿದ್ದರಾಮಯ್ಯ ಸ್ಪರ್ಧಿಸಬೇಕೆಂಬುದು ಹೈಕಮಾಂಡ್‌ ನಿರ್ಧಾರವಾಗಿತ್ತು. ಚಿಮ್ಮನಕಟ್ಟಿ ನೇತೃತ್ವದಲ್ಲೇ ಅಲ್ಲಿನ ಕಾಂಗ್ರೆಸ್ಸಿಗರು ಸಿದ್ದರಾಮಯ್ಯರನ್ನು ಬರಮಾಡಿ ಕೊಂಡರು. ಹೀಗಿರುವಾಗ, ಈಗೇಕೆ ಚಿಮ್ಮನಕಟ್ಟಿ ಆಕ್ಷೇಪಿಸಬೇಕು? ಅಷ್ಟಕ್ಕೂ ಸಿದ್ದರಾಮಯ್ಯ ಅವರಂತಹ ಮೇರು ನಾಯಕರನ್ನು ಒಂದೆರಡು ಕ್ಷೇತ್ರಗಳಿಗೆ ಸೀಮಿತಗೊಳಿಸಿ ಇಲ್ಲಿಂದಲೇ ಸ್ಪರ್ಧಿಸಬೇಕು, ಅವರು ತವರು ಕ್ಷೇತ್ರವಲ್ಲದೇ ಬೇರೆ ಕ್ಷೇತ್ರಗಳಿಂದ ಕಣಕ್ಕೆ ಇಳಿಯಬಾರದೆಂದು ಹೇಳುವುದು ಸರಿಯೇ? ಎಂಬುದು ಸಿದ್ದರಾಮಯ್ಯ ಆಪ್ತರ ಪ್ರಶ್ನೆ.

ಬಾದಾಮಿ ಕ್ಷೇತ್ರದ ಈ ಬೆಳವಣಿಗೆ ಸಿದ್ದರಾಮಯ್ಯ ಅವರ ಆಪ್ತರು ಅವರನ್ನು ಮತ್ತೆ ವರುಣಾಕ್ಕೆ ಬರುವಂತೆ ಒತ್ತಡ ಹೇರುವಂತಾಗಿದೆ. ಆದರೆ, ಸಿದ್ದರಾಮಯ್ಯ ಬೆಂಬಲಿಗರಿಗೆ ಇಲ್ಲೊಂದು ಇಕ್ಕಟ್ಟು ಇದೆ. ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಈಗಾಗಲೇ ಇಲ್ಲಿ ಶಾಸಕರಾಗಿದ್ದಾರೆ. ಡಾ.ಯತೀಂದ್ರ ಅವರನ್ನು ಬಿಟ್ಟು ಸಿದ್ದರಾಮಯ್ಯ ಅವರನ್ನು ಮತ್ತೆ ಇಲ್ಲಿ ಸ್ಪರ್ಧಿಸುವಂತೆ ಕೇಳುವುದಾದರೂ ಹೇಗೆ? ಈ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಯತೀಂದ್ರ ಅವರೇ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂಬುದು ಸಿದ್ದರಾಮಯ್ಯ ಅವರ ನಿಕಟವರ್ತಿಗಳ ಅಂಬೋಣ.

2018ರ ವಿಧಾನಸಭೆ ಚುನಾವಣೆ ನಡೆದಾಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. 5 ವರ್ಷ ಆಡಳಿತ ನಡೆಸಿದ್ದರು. ವರುಣಾ ಕ್ಷೇತ್ರವನ್ನು ತಮ್ಮ ಪುತ್ರ ಡಾ.ಯತೀಂದ್ರಗೆ ಬಿಟ್ಟುಕೊಟ್ಟು ಈ ಕ್ಷೇತ್ರಕ್ಕೆ ಹೊಂದಿಕೊಂಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಣಕ್ಕೆ ಇಳಿದರು.

Advertisement

ಚಾಮುಂಡೇಶ್ವರಿಯಲ್ಲಿ ಪರಿಸ್ಥಿತಿ ತಮಗೆ ಅನುಕೂಲಕರವಾಗಿಲ್ಲ ಎಂದು ಅರಿತು ಕೊನೆ ಘಳಿಗೆಯಲ್ಲಿ ಬಾದಾಮಿಯಿಂದಲೂ ನಾಮಪತ್ರ ಸಲ್ಲಿಸಿ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದರು. ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡ ವಿರುದ್ಧ ಸುಮಾರು 36 ಸಾವಿರ ಮತಗಳಿಂದ ಹೀನಾಯವಾಗಿ ಪರಾಭವಗೊಂಡರು. ಬಾದಾಮಿಯಲ್ಲಿ ಕಡಿಮೆ ಮತಗಳ ಅಂತರದಿಂದ ಬಿಜೆಪಿಯ ಬಿ.ಶ್ರೀರಾಮುಲು ವಿರುದ್ಧ ಗೆಲುವಿನ ನಗೆ ಬೀರಿದರು.

ಸಿದ್ದು ಸ್ಪರ್ಧೆ ಎಲ್ಲಿಂದ? :

ಸಿದ್ದರಾಮಯ್ಯ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಎಲ್ಲಿಂದ ಕಣಕ್ಕೆ ಧುಮುಕುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಸಿದ್ದರಾಮಯ್ಯ ಅವರಿಗೆ ವರುಣಾ, ಬೆಂಗಳೂರಿನ ಚಾಮರಾಜ ಪೇಟೆ, ಶಾಂತಿನಗರ ಹೀಗೆ ಕೆಲವು ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರಿಂದ ಆಹ್ವಾನವಿದೆ. ಬಾದಾಮಿಯಲ್ಲಿ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅವರ ಅಸಮಾಧಾನದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಮುಂದಿನ ನಡೆ ಕುತೂಹಲಕಾರಿಯಾಗಿದೆ.

ಹೈಕಮಾಂಡ್‌ ಆದೇಶ ಹಾಗೂ ಬಾದಾಮಿ ಕಾರ್ಯಕರ್ತರ ಆಹ್ವಾನದ ಮೇರೆಗೆ ಸಿದ್ದರಾಮಯ್ಯ ಬಾದಾಮಿಯಲ್ಲಿ 2018ರ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆಗಲೂ ಸಿದ್ದರಾಮಯ್ಯ ಅವರಿಗೆ 10-12 ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಆಹ್ವಾನವಿತ್ತು. ಸಿದ್ದರಾಮಯ್ಯ ಅವರನ್ನು ಒಂದೆರಡು ಕ್ಷೇತ್ರಕ್ಕೆ ಸೀಮಿತಗೊಳಿಸಿ ಅಭ್ಯರ್ಥಿಯನ್ನಾಗಿ ನೋಡುವುದೇ ಸರಿಯಲ್ಲ. ಸಿದ್ದರಾಮಯ್ಯ ಮೇರು ನಾಯಕರು. ಮಾಸ್‌ ಲೀಡರ್‌. ಬಾದಾಮಿಗೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ ಚುನಾವಣೆಯ ಮೊದಲ ಸಭೆಯನ್ನು ನಡೆಸಿದ್ದೇ ಹಿರಿಯ ನಾಯಕರಾದ ಚಿಮ್ಮನಕಟ್ಟಿ. ಈಗೇಕೆ ಹೀಗೆ ಮಾತಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಡಾ.ಬಿ.ಜೆ.ವಿಜಯಕುಮಾರ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ವರುಣಾದಿಂದ ಸಿದ್ದರಾಮಯ್ಯ ಮತ್ತೆ ಸ್ಪರ್ಧಿಸಬೇಕೆಂಬುದು ನಮ್ಮೆಲ್ಲರ ಬಯಕೆ. ಆದರೆ, ಈ ಕ್ಷೇತ್ರದಲ್ಲಿ ಈಗ ಅವರ ಪುತ್ರ ಡಾ.ಯತೀಂದ್ರ ಶಾಸಕರಾಗಿದ್ದಾರೆ. ಡಾ.ಯತೀಂದ್ರ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ವರುಣಾದಲ್ಲಿ ಸಿದ್ದರಾಮಯ್ಯ ಅಥವಾ ಅವರ ಪುತ್ರ ಡಾ.ಯತೀಂದ್ರ ಯಾರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಅವರಿಬ್ಬರೇ ಚರ್ಚಿಸಿನಿರ್ಧರಿಸಬೇಕು. ಸಿದ್ದರಾಮಯ್ಯಗೆ ಇನ್ನೂ ಅನೇಕ ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಆಹ್ವಾನವಿದೆ. ಮುಂದಿನ ಚುನಾವಣೆಯಲ್ಲಿ ಅವರು ಎಲ್ಲಿಂದ ಸ್ಪರ್ಧಿಸಬೇಕೆಂಬುದು ಅವರಿಗೇ ಬಿಟ್ಟ ವಿಚಾರ.ಕೆ.ಮುದ್ದೇಗೌಡ, ವರುಣಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ 

ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next