Advertisement

ಕೈ ಬಣ ರಾಜಕೀಯಕ್ಕೆ ಸಿದ್ದರಾಮಯ್ಯ ಅತಂತ್ರ?

12:07 AM Mar 19, 2023 | Team Udayavani |

ಕೋಲಾರ: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲು ಹೈಕಮಾಂಡ್‌ ಒಪ್ಪುತ್ತಿಲ್ಲವೆಂಬ ವಿಚಾರ ಜಿಲ್ಲೆಯ ರಾಜಕಾರಣದ ಕೆಲವರಿಗೆ ನಿರಾಸೆಯಾದರೆ, ಕೆಲವರು ನಿರಾಳವಾದಂತೆ ಕಂಡು ಬರುತ್ತಿದ್ದಾರೆ. ಮತ್ತೆ ಕೆಲವರು “ಪ್ರಯತ್ನ ಫ‌ಲಿಸಿದ’ ಸಂತಸದಲ್ಲಿ ಮುಳುಗಿದ್ದಾರೆ.

Advertisement

ಕಳೆದ ಒಂದು ವರ್ಷದ ಹಿಂದಿನಿಂದಲೂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುತ್ತಾರೆಂದು ಹೇಳಿಕೊಳ್ಳುತ್ತಲೇ ಬಂದಿದ್ದ ಕಾಂಗ್ರೆಸ್‌ನ ಒಂದು ಗುಂಪಿಗೆ ತೀವ್ರ ನಿರಾಸೆಯಾದರೆ, ಸಿದ್ದರಾಮಯ್ಯ ಸ್ಪರ್ಧೆಯಿಂದ ವಿಶೇಷ ತಯಾರಿಯನ್ನು ಮಾಡಿಕೊಳ್ಳುತ್ತಿದ್ದ ವಿರೋಧಿ ಪಕ್ಷಗಳು ಕೊಂಚ ನಿರಾಳವಾದಂತೆ ಕಂಡು ಬಂದಿತು. ಹಾಗೆಯೇ ಸಿದ್ದರಾಮಯ್ಯ ಸ್ಪರ್ಧೆಯನ್ನು ವಿರೋಧಿಸುತ್ತಿದ್ದ ಕಾಂಗ್ರೆಸ್‌ನ ಮತ್ತೊಂದು ಗುಂಪಿಗೆ ಪ್ರಯತ್ನ ಫ‌ಲಿಸಿತು ಎಂಬ ನೆಮ್ಮದಿ ಸಿಕ್ಕಂತಾಯಿತು.

ಕೋಲಾರ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಪ್ರತಿ ಚುನಾವಣೆಗೆ ಒಂದೊಂದು ನಿಲುವು ತೆಗೆದುಕೊಂಡು ಜೆಡಿಎಸ್‌ ಮತ್ತು ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದರು. ಇದರಿಂದ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದು ಇಪ್ಪತ್ತು ವರ್ಷವಾಗಿತ್ತು. ಬೇರು ಮಟ್ಟದಿಂದ ಕ್ರಮೇಣ ಮಾಯವಾಗುತ್ತಲೂ ಇತ್ತು. ಇಂಥ ಸನ್ನಿವೇಶದಲ್ಲಿ ಪ್ರಭಾವಿ ನಾಯಕ ಸಿದ್ದರಾಮಯ್ಯರನ್ನು ಕೋಲಾರದಿಂದ ಸ್ಪರ್ಧಿಸುವಂತೆ ಮಾಡಿದರೆ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಗೆಲ್ಲಿಸಬಹುದೆಂದು ಕೆಲವರ ಲೆಕ್ಕಾಚಾರವಾಗಿತ್ತು. ಆದರೆ, ಅದಕ್ಕೆ ಸ್ಥಳೀಯ ಮುಖಂಡರ ಸ್ವಪ್ರತಿಷ್ಠೆಯೇ ಅಡ್ಡಿಯಾಗಿತ್ತು.

ಸಿದ್ದರಾಮಯ್ಯ ಕಣಕ್ಕಿಳಿಯುತ್ತಾರೆಂದು ಬಹಿರಂಗವಾದ ಮೇಲೂ ಇಲ್ಲಿ ಹಾವು ಮುಂಗುಸಿಯಂತಿರುವ ರಮೇಶ್‌ಕುಮಾರ್‌ ಮತ್ತು ಕೆ.ಎಚ್‌.ಮುನಿಯಪ್ಪ ಬಣಗಳು ಒಗ್ಗೂಡಲೇ ಇಲ್ಲ. ಬಣ ರಾಜಕೀಯದ ನಡುವೆಯೇ ಸಿದ್ದರಾಮಯ್ಯ 2022 ನವೆಂಬರ್‌ 13ರಿಂದ ಈವರೆಗೂ ನಾಲ್ಕು ಬಾರಿ ಕೋಲಾರಕ್ಕೆ ಬಂದು ಹೋಗಿದ್ದರೂ ಇಲ್ಲಿನ ಮುಖಂಡರು ಮಾತ್ರ ಪರಸ್ಪರ ಮುಖ ತಿರುಗಿಸಿಕೊಂಡೇ ಓಡಾಡಿಕೊಂಡಿದ್ದರು.

ಗೋವಿಂದಗೌಡರ ಪ್ರವೇಶ:
ಇದೇ ವೇಳೆಗೆ ರಮೇಶ್‌ಕುಮಾರ್‌ ಮತ್ತು ಕೆ.ಎಚ್‌.ಮುನಿಯಪ್ಪ ಬಣಗಳಿಂದ ಸಮಾನ ಅಂತರ ಕಾಪಾಡಿಕೊಂಡಿದ್ದ ಕೋಲಾರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಶಿಡ್ಲಘಟ್ಟ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ಸಿದ್ದರಾಮಯ್ಯರಿಗೆ ಆಪ್ತರಾದರು. ವೇಮಗಲ್‌ನಲ್ಲಿ ಸಿದ್ದರಾಮಯ್ಯ ಪರ ಬೃಹತ್‌ ಮಹಿಳಾ ಸಮಾವೇಶ ಆಯೋಜಿಸಿದ್ದರು. ಇದಾದ ನಂತರ ಗೋವಿಂದಗೌಡರೇ ಬಹುತೇಕ ಸಿದ್ದರಾಮಯ್ಯ ಪ್ರಚಾರದ ನೇತೃತ್ವವನ್ನು ಪರೋಕ್ಷವಾಗಿ ಹೊತ್ತುಕೊಂಡಿದ್ದರು. ಇದು ಕೂಡ ರಮೇಶ್‌ಕುಮಾರ್‌ ಮತ್ತು ಕೆ.ಎಚ್‌.ಮುನಿಯಪ್ಪ ತಂಡಕ್ಕೆ ನುಂಗಲಾರದ ತುತ್ತಾಗಿತ್ತು.

Advertisement

ಇಷ್ಟೆಲ್ಲಾ ಗೊಂದಲ ಗೋಜಲುಗಳ ನಡುವೆಯೇ ಮತಗಟ್ಟೆ ಸಮಿತಿ ರಚಿಸುವ ಕಾರ್ಯಕ್ಕೆ ಮುಖಂಡರು ಮುಂದಾಗಿದ್ದರು. ಇಲ್ಲೂ ಕೂಡ ಬಣ ರಾಜಕೀಯ ಗೋಚರಿಸಿತು. ಒಂದು ಬಣವಂತೂ ಸಿದ್ದರಾಮಯ್ಯ ಇಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೊಂಡೇ ಇತ್ತು.

ಕಾಣದ ಕೈಗಳ ಹುನ್ನಾರ:
ಇವೆಲ್ಲದರ ನಡುವೆ ಕಾಂಗ್ರೆಸ್‌ ಪಕ್ಷದ ಕಾಣದ ಕೈಗಳೇ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುವುದನ್ನು ತಪ್ಪಿಸಿದ್ದಾರೆಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುವಂತಾಯಿತು. ಇದಕ್ಕೆ ತಕ್ಕಂತೆ ಕಾಂಗ್ರೆಸ್‌ ಪಕ್ಷದ ಒಂದು ಗುಂಪಿನಲ್ಲಿ ಸಿದ್ದರಾಮಯ್ಯ ಸ್ಪರ್ಧೆ ನಿರಾಕರಣೆಯ ಈ ವಿಚಾರ ಪ್ರಯತ್ನ ಫ‌ಲಿಸಿತೆಂಬ ಭಾವನೆ ಮೂಡಿಸಿದ್ದು, ಈ ಗುಂಪಿನ ಮುಖಂಡರ ಮಾತುಗಳಿಂದಲೂ ವ್ಯಕ್ತವಾಯಿತು.

ಮನವೊಲಿಕೆಗೆ ನಿರ್ಧಾರ
ಕಾಂಗ್ರೆಸ್‌ ತಂಡವೊಂದು ಮಧ್ಯಾಹ್ನದ ವೇಳೆಗೆ ಬೆಂಗಳೂರು ತಲುಪಿ ಸಿದ್ದರಾಮಯ್ಯರ ಮನವೊಲಿಸುವ ಪ್ರಯತ್ನ ನಡೆಸಿದರು. ಇದರ ಜೊತೆಗೆ ರಾಜ್ಯಕ್ಕೆ ಆಗಮಿಸಲಿರುವ ರಾಹುಲ್‌ಗಾಂಧಿಗೆ ಕೋಲಾರದಿಂದ ಸಿದ್ದು ಗೆಲುವು ಸುಲಭ ಎಂಬುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುವುದಾಗಿ ನಿರ್ಧರಿಸಿದರು. ಸೋಮವಾರ ರಾಜ್ಯಕ್ಕೆ ಆಗಮಿಸಲಿರುವ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಿ ಕೋಲಾರದಿಂದ ಸಿದ್ದರಾಮಯ್ಯ ಗೆಲುವು ಸುಲಭ ಎಂಬುದನ್ನು ಮನದಟ್ಟು ಮಾಡಿಸಿ, ಕೋಲಾರದಿಂದಲೇ ಅವರು ಸ್ಪರ್ಧಿಸಲು ಅವಕಾಶಕಲ್ಪಿಸಬೇಕೆಂಬ ಬೇಡಿಕೆ ಇಡುತ್ತೇವೆಂದು ಜಿಲ್ಲಾ ಕಾಂಗ್ರೆಸ್‌ ಉಸ್ತುವಾರಿ ಎಂ.ಆರ್‌.ಸೀತಾರಾಮ್‌ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅಲ್ಲದಿದ್ದರೆ ಇನ್ಯಾರು?
ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಮತ್ಯಾರು ಎಂಬ ಪ್ರಶ್ನೆ ದಿಢೀರ್‌ನೆà ಉದ್ಭವವಾಗಿದೆ. ಸಿದ್ದರಾಮಯ್ಯ ಸ್ಪರ್ಧೆಗೆ ಹೈಕಮಾಂಡ್‌ ಒಪ್ಪಿಗೆ ನೀಡದೇ ಇರುವುದರಿಂದ ಹಲವರು ಟಿಕೆಟ್‌ಗೆ ಪ್ರಯತ್ನಿಸಿದ್ದು ಮುನ್ನೆಲೆಗೆ ಬಂದಂತಾಗಿದೆ.

ಕೋಲಾರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಎಲ್‌.ಎ.ಮಂಜುನಾಥ್‌, ಊರುಬಾಗಿಲು ಶ್ರೀನಿವಾಸ್‌, ಎ.ಶ್ರೀನಿವಾಸ್‌, ಸಿ.ಆರ್‌.ಮನೋಹರ್‌, ಬಿ.ಎಂ.ಮುಬಾರಕ್‌ ಇತರರು ಈಗಾಗಲೇ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದರು.

ಅದರಲ್ಲೂ ಎ.ಶ್ರೀನಿವಾಸ್‌ ಈಗಲೂ ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸದಿದ್ದರೇ ನಾನೇ ಅಭ್ಯರ್ಥಿ ಎಂದು ಓಡಾಡುತ್ತಿದ್ದಾರೆ.

ರಮೇಶ್‌ಕುಮಾರ್‌ ತಂಡವು ಕೊತ್ತೂರು ಮಂಜುನಾಥ್‌ರನ್ನು ಅಭ್ಯರ್ಥಿಯಾಗಿಸಲು ಹಿಂದೆ ಪ್ರಯತ್ನಿಸಿತ್ತು. ಇದೀಗ ಈ ವಿಚಾರಕ್ಕೆ ಮತ್ತೆ ಜೀವ ಬರಬಹುದು. ಕೇಂದ್ರ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಒಂದಷ್ಟು ಮಂದಿಗೆ ಈಗಾಗಲೇ ಭರವಸೆ ನೀಡಿದ್ದಾರೆ. ಆದ್ದರಿಂದ ಸಿದ್ದರಾಮಯ್ಯರಲ್ಲದೆ ರಮೇಶ್‌ಕುಮಾರ್‌ ಅಥವಾ ಕೆ.ಎಚ್‌.ಮುನಿಯಪ್ಪ ಬೆಂಬಲಿತ ಯಾರು ಅಭ್ಯರ್ಥಿಯಾಗಬಹುದು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

-ಕೆ.ಎಸ್‌.ಗಣೇಶ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next