ಹಾಸನ: ಬಿಜೆಪಿಯವರಿಗೆ ಆಡಿದ ಮಾತಿನ ಮೇಲೆ ನಿಗಾ ಇಲ್ಲ, ಅವರಿಗೆ ನಾಲಿಗೆನೇ ಇಲ್ಲ, ಮಾನಗೆಟ್ಟವರು, ಲಜ್ಜೆಗೆಟ್ಟವರು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಾಗ್ಧಾಳಿ ನಡೆಸಿದರು.
ನಗರದ ತಣ್ಣೀರು ಹಳ್ಳದ ದೊಡ್ಡಮಂಡಿಗನಹಳ್ಳಿ ಸಮೀಪ ಏರ್ಪಡಿಸಿದ್ದ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನೆ ಹಾಳಾಗಲಿ ಎಂದು ಶಪಿಸಿದರು. ಬಿಜೆಪಿಯವರು ಕಳೆದ ಚುನಾವಣೆಯಲ್ಲಿ 600 ಭರವಸೆಗಳನ್ನು ನೀಡಿದ್ದರು. ಆದರೆ ಅದರಲ್ಲಿ ಈಡೇರಿಸಿದ್ದು, 50 ರಿಂದ 60 ಭರವಸೆಗಳನ್ನಷ್ಟೆ. ಆದರೆ ನಾನು ಮುಖ್ಯಮಂತ್ರಿಯಾಗುವ ಮುನ್ನ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆ. ನುಡಿದಂತೆ ನಡೆಯುವುದು ಕಾಂಗ್ರೆಸ್, ನುಡಿದದ್ದನ್ನೂ ನೆನಪಿಸಕೊಳ್ಳದ ಪಕ್ಷ ಬಿಜೆಪಿ ಎಂದು ಟೀಕಿಸಿದರು.
ಬಿಜೆಪಿಯವರ ಪಾಪದ ಪುರಾಣ ಬಹಿರಂಗ:
ಪ್ರಜಾಧ್ವನಿ ಯಾತ್ರೆ ಮೂಲಕ ಬಿಜೆಪಿಯವರ ಪಾಪದ ಪುರಾಣವನ್ನು ಬಹಿರಂಗ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಲಂಚ ನಿರ್ಮೂಲನೆ, ಭ್ರಷ್ಟಾಚಾರ ರಹಿತ ಜನಪರ ಆಡಳಿತ ಕೊಡುವ ವಾಗ್ಧಾನ ಮಾಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಕಳಂಕಿತ ಸರ್ಕಾರ ಕೊರೊನಾ ನಿಯಂತ್ರಣ ಕಾರ್ಯಕ್ರಮದಲ್ಲಿಯೂ ಲೂಟಿ ಮಾಡಿತು. ಸರ್ಕಾರಿ ನೌಕರರ ನೇಮಕಾತಿಯಲ್ಲಿ ಲಂಚ, ನೌಕರರ ವರ್ಗಾವಣೆಯಲ್ಲಿ ಲಂಚ ವಸೂಲಿ ಮಾಡಿ ಕರ್ನಾಟಕ್ಕೆ ಕಳಂಕ ಹಚ್ಚಿದೆ ಎಂದು ದೂರಿದರು.
Related Articles
ಜೆಡಿಎಸ್, ಬಿಜೆಪಿಗೆ ಅವಕಾಶ ಕೊಟ್ಟಾಗಿದೆ. ನನ್ನ ಮತ್ತು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಒಮ್ಮೆ ಸರ್ಕಾರ ರಚನೆಯ ಅವಕಾಶ ಕೊಟ್ಟರೆ ಕಳಂಕ ರಹಿತ ಆಡಳಿತ ಕೊಡುತ್ತೇವೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತು. ಆದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್‌ಗೆ ಅಧಿಕಾರ ನಡೆಸಲು ಕಾಂಗ್ರೆಸ್ ತ್ಯಾಗ ಮಾಡಿತು. ಆದರೆ ಅವರು 14 ತಿಂಗಳು ಸರ್ಕಾರ ನಡೆಸುವಷ್ಟರಲ್ಲಿಯೇ ವಿಫಲರಾದರು. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಮೆಚ್ಚುಗೆ ವ್ಯಕ್ತಪಡಿಸಿದ ಕೈ ಮುಖಂಡರು
ಜೆಡಿಎಸ್ ಭದ್ರಕೋಟೆ ಹಾಸನ ಜಿಲ್ಲೆಗೆ ಶನಿವಾರ ಆಗಮಿಸಿದ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಗೆ ಕಾಂಗ್ರೆಸ್ ಕಾರ್ಯಕರ್ತರು ಅಭೂತ ಪೂರ್ವ ಸ್ವಾಗತ ನೀಡಿದರು. ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ , ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ ಕಂಡು ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.