ಮಾನ್ವಿ: ಸಮಾಜದ ಒಳತಿಗಾಗಿ ತಮ್ಮ ಕಾಯಕ ತತ್ವಗಳು ಹಾಗೂ ವಚನಗಳ ಮೂಲಕ ಉತ್ತಮ ಸಂದೇಶಗಳನ್ನು ನೀಡಿದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಎಸ್. ತಿಮ್ಮಾರೆಡ್ಡಿ ಭೋಗಾವತಿ ಹೇಳಿದರು.
ತಾಲೂಕು ಆಡಳಿತದಿಂದ ಪಟ್ಟಣದ ಟಿಎಪಿಸಿಎಂಎಸ್ ಅವರಣದಲ್ಲಿ ಏರ್ಪಡಿಸಿದ್ದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ 847ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿವಯೋಗಿ ಸಿದ್ಧರಾಮೇಶ್ವರರು ಸೊಲ್ಲಾಪುರದಲ್ಲಿ ಅನೇಕ ದೇವಾಲಯಗಳನ್ನು ಹಾಗೂ ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಅನೇಕ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನಂತರ ಅನುಭವ ಮಂಟಪ ಸೇರಿ 12 ಸಾವಿರಕ್ಕೂ ಹೆಚ್ಚು ವಚನಗಳನ್ನು ನೀಡಿರುವುದು ಮತ್ತು ಧರ್ಮ, ಧ್ಯಾನದ ಮೂಲಕ ಸಮಾಜದ ಏಳ್ಗೆಗೆ ಪರಿಶ್ರಮಿಸಿದ ಮಹಾನ್ ಪುರುಷರು ಎಂದರು.
ಸಮಾಜಕ್ಕೆ ಮೌಲ್ಯಾಧಾರಿತ ವಿಚಾರಗಳನ್ನು ನೀಡಿರುವ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಕುಲಬಾಂಧವರಾದ ಭೋವಿ ಸಮಾಜದವರು ಇಂದಿಗೂ ಕಷ್ಟಕಾರ್ಪಣ್ಯಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಸಮಾಜದವರು ಉತ್ತಮ ಶಿಕ್ಷಣ ಪಡೆದು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಪ್ರಗತಿ ಸಾಧಿಸಬೇಕು ಎಂದರು.
ಶಿರಸ್ತೇದಾರ ಷಣ್ಮುಖಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಗೋಪಾಲ ನಾಯಕ ಜೂಕೂರು ಅವರು ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಆದರ್ಶಗಳು ಹಾಗೂ ಚಿಂತನೆಗಳ ಕುರಿತು ಉಪನ್ಯಾಸ ನೀಡಿದರು. ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮೀ ಪ್ರಾಸ್ತಾವಿಕ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಿಹಾಳ, ಪಿಎಸ್‌ಐ ರಂಗಪ್ಪ ಎಚ್.ದೂಡ್ಡಮನಿ, ಜೆಡಿಎಸ್ ಮುಖಂಡ ರಾಜಾ ರಾಮಚಂದ್ರ ನಾಯಕ, ಪುರಸಭೆ ಸದಸ್ಯ ಶರಣಪ್ಪ ಮೇಧಾ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಿಹಾಳ, ಪಿಎಸ್‌ಐ ರಂಗಪ್ಪ ಎಚ್.ದೂಡ್ಡಮನಿ, ಮುಖಂಡರಾದ ಎಸ್.ಎಂ. ಪಾಟೀಲ, ಖಲೀಲ್ ಖುರೇಶಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಡಾ| ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಟಿಎಪಿಸಿಎಂಎಸ್‌ವರೆಗೆ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.