Advertisement

ಸಿದ್ದಾಪುರ: ಐತಿಹಾಸಿಕ ಕಾಶಿಕಲ್ಲು ಕೆರೆ ಪುನಶ್ಚೇತನ

11:31 PM May 22, 2019 | sudhir |

ಸಿದ್ದಾಪುರ: ಶತಮಾನದ ಇತಿಹಾಸ ಹೊಂದಿರುವ ಇಲ್ಲಿನ ಕಾಶಿಕಲ್ಲು ಕೆರೆ ಪುನಃಶ್ಚೇತನ ನಡೆಯುತ್ತಿದ್ದು, ಸ್ಥಳೀಯವಾಗಿ ಅಂತರ್ಜಲ ವೃದ್ಧಿಯ ಆಶಾವಾದ ಮೊಳಕೆಯೊಡೆದಿದೆ.

Advertisement

ಕೆರೆಯ ಹೂಳೆತ್ತುವುದರೊಂದಿಗೆ ಶ್ರಮದಾನದ ಮೂಲಕ ಸ್ವತ್ಛತಾ ಕಾರ್ಯ ನಡೆಸಲು ಗ್ರಾಮ ವಿಕಾಸ ಸಮಿತಿ, ಜಲಭಾರತಿ ಕರ್ನಾಟಕ ಮತ್ತು ವಿವಿಧ ಸಂಘ ಸಂಸ್ಥೆಗಳು ಮುಂದೆ ಬಂದಿವೆ.

ಬಸವಪ್ಪ ನಾಯಕನ ಕೆರೆ
ಕ್ರಿ.ಶ. 1740-1755ರ ಸಮಯ ಸಿದ್ದಾಪುರ ಬಸವಪ್ಪ ನಾಯಕನ ಆಡಳಿತಕ್ಕೆ ಒಳಪಟ್ಟಿದ್ದು ಈವೇಳೆ ಕಾಶಿಕಲ್ಲು ಕೆರೆ ಸೇರಿದಂತೆ ಮುಸುರೆ ಕೆರೆ, ಬ್ರಹ್ಮನ ಕೆರೆ, ಛತ್ರದ ಕೆರೆ, ಬೀದಿಕೆರೆ, ನಾಗತೀರ್ಥ ಕೆರೆ ಹೀಗೆ ಆರು ಕೆರೆಗಳು ಮತ್ತು 600ಕ್ಕೂ ಹೆಚ್ಚು ಚಿಕ್ಕ ಚಿಕ್ಕ ಬಾವಿಗಳು ನಿರ್ಮಾಣಗೊಂಡಿದ್ದವು. 6 ಕೆರೆಗಳಲ್ಲಿ ಒಂದಾದ ಬೀದಿಕರೆಯ ಹೂಳನ್ನು ಕಳೆದ ವರ್ಷ ಮೇಲೆತ್ತಲಾಗಿತ್ತು. ಈಗ ಕಾಶಿಕಲ್ಲು ಕೆರೆ ಕೆಲಸ ನಡೆಯುತ್ತಿದ್ದು, ಉಳಿದ‌ 4 ಕೆರೆಗಳ ಪುನಶ್ಚೇತನ ಮಾಡಿದರೆ ಸಿದ್ದಾಪುರಕ್ಕೆ ಸಾಕಷ್ಟು ನೀರು ಉಣಿಸಬಹುದಾಗಿದೆ.

ಅವಗಣನೆಗೆ ತುತ್ತಾಗಿತ್ತು
ಕಾಶಿಕಲ್ಲು ಕೆರೆ ಸುಮಾರು ಒಂದು ಎಕರೆ ವಿಸ್ತೀರ್ಣ ಹೊಂದಿದ್ದು, ಕೆರೆಯ ಆಳದಿಂದ ಮೇಲ್ಮಟ್ಟದ ತನಕ ಸುಮಾರು 2 ಅಡಿ ಅಗಲದ ಶಿಲೆಕಲ್ಲು ಚಪ್ಪಡಿ ಹಾಸಲಾಗಿದೆ. ಮೇಲ್ಭಾಗದಲ್ಲಿ ಕೆಂಪು ಮುರಕಲ್ಲಿನ ಪ್ರಾಕಾರವಿದೆ. ಆದರೆ ಈ ಕೆರೆ ಬಹುಕಾಲದಿಂದ ಆಡಳಿತದ ನಿರ್ಲಕ್ಷ್ಯದ ಪರಿಣಾಮ ಸುಧಾರಣೆ ಕಂಡಿರಲಿಲ್ಲ. ಇಲ್ಲಿ ಹೂಳು ತುಂಬಿ ಅಂತರ್ಜಲಕ್ಕೂ ಕುತ್ತು ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಹೂಳೆತ್ತಲು ಮುಂದಾಗಿದ್ದವು.

ಮಾದರಿಯಾಗಬೇಕು
ಅಂತರ್ಜಲ ವೃದ್ಧಿಗೆ ಕೆರೆ ಅಭಿವೃದ್ಧಿಗೆ ಮುಂದಾಗಿರುವುದು ಉತ್ತಮ ಕೆಲಸ. ಇದಕ್ಕಾಗಿ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿದ್ದು, ಇದು ಉಳಿದವರಿಗೂ ಮಾದರಿಯಾಗಬೇಕು. ನೀರಿಲ್ಲದ ಈ ದಿನಗಳಲ್ಲಿ ಗ್ರಾಮದಲ್ಲಿರುವ ಪ್ರತಿಯೊಂದು ಕೆರೆಗಳ ಹೂಳೆತ್ತುವ ಕಾರ್ಯ ನಡೆಯಬೇಕು.
-ಡಾ| ನಾರಾಯಣ ಶೆಣೈ, ಉಡುಪಿ ಜಿಲ್ಲಾ ಜಲಭಾರತಿ ಪ್ರಮುಖ

Advertisement

ಮೂಲ ಸ್ವರೂಪ ಉಳಿವು
ಇಲ್ಲಿ ನೀರಿನ ಸಮಸ್ಯೆ ಇದೆ. ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿಯ ಕಾರ್ಯಕ್ಕೆ ಮುಂದಾಗಿದ್ದೇವೆ. ಪುರಾತನ ಕೆರೆಯಾದುದರಿಂದ ಮೂಲ ಸ್ವರೂಪವನ್ನು ಉಳಿಸುವ ಬಗ್ಗೆಯೂ ಕೆಲಸ ಮಾಡುತ್ತೇವೆ.
-ಚಂದ್ರಾನಂದ ಶೆಟ್ಟಿ, ಉಸ್ತುವಾರಿ, ಶ್ರಮದಾನ ಸಮಿತಿ

– ಸತೀಶ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next