ಸಿದ್ದಾಪುರ: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದಿಂದ ಕರೆ ಮಾಡುವುದಾಗಿ ತಿಳಿಸಿ ನಿಮ್ಮ ಮೊಬೈಲ್ ನಂಬರ್ನಿಂದ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದು, 17 ಪ್ರಕರಣಗಳಿವೆ ಎಂದು ಬೆದರಿಸಿ ಸಿದ್ದಾಪುರ ಗ್ರಾಮದ ವೃದ್ಧರೊಬ್ಬರಿಂದ 10.39 ಲಕ್ಷ ರೂ. ಪಡೆದು ವಂಚಿಸಿದ ಕುರಿತಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದಾಪುರ ಗ್ರಾಮದ ಮಂಜು ಕೆ. (75) ವಂಚನೆಗೊಳಗಾದವರು. ಡಿ. 9ರ ಬೆಳಗ್ಗೆ ಕರೆ ಬಂದಿದ್ದು, 30 ನಿಮಿಷಗಳಲ್ಲಿ ನಿಮ್ಮ ಮೊಬೈಲ್ ನಂಬರ್ ಸ್ಥಗಿತವಾಗಲಿದೆ. ನಿಮ್ಮಲ್ಲಿ ಇನ್ನೊಂದು ನಂಬರ್ ಇದೆ. ಅದನ್ನು ನೀವು ಮುಂಬಯಿ ತಿಲಕ್ ನಗರ ವ್ಯಾಪ್ತಿಯ ಏರ್ಟೆಲ್ನಿಂದ ಪಡೆದಿದ್ದೀರಿ. ಈ ನಂಬರ್ನ ಮೇಲೆ ಕ್ರೈಂಬ್ರಾಂಚ್ ತಿಲಕ್ ನಗರ ಠಾಣೆ ಪೊಲೀಸರು 17 ಪ್ರಕರಣ ದಾಖಲಿಸಿದ್ದಾರೆ. ನೀವು ಕೂಡಲೇ ಠಾಣೆಗೆ ಹೋಗಿ ಶರಣಾಗಬೇಕು, ಇದು ಜಾಮೀನು ರಹಿತ ಪ್ರಕರಣ ಎಂದರು.
ಮಂಜು ಅವರು ಸಾಧ್ಯವಿಲ್ಲ ಎಂದಾಗ, ಕರೆಯನ್ನು ನಾವು ತಿಲಕ್ ನಗರ ಠಾಣೆಗೆ ವರ್ಗಾಯಿಸುತ್ತೇವೆ. ನೀವು ಅವರಲ್ಲಿ ಕೇಳಿಕೊಳ್ಳಿ ಎಂದು ತಿಲಕ್ ನಗರ ಪೊಲೀಸ್ ಠಾಣೆ ಎನ್ನುವ ಹೆಸರಿನ ನಂಬರ್ಗೆ ವರ್ಗಾಯಿಸಿದ್ದರು. ಆ ನಂಬರ್ನಿಂದ ಮತ್ತೆ ವಾಟ್ಸ್ ಆ್ಯಪ್ ಮೂಲಕ ವೀಡಿಯೋ ಕರೆ ಮಾಡಿ, ನಿಮ್ಮ ಮೇಲೆ ಮನಿ ಲ್ಯಾಂಡರಿಂಗ್ ಮೊಕದ್ದಮ್ಮೆಯಿದೆ. ಕೂಡಲೇ ಶರಣಾಗಬೇಕಿದೆ. ಹಿರಿಯ ನಾಗರಿಕರಾಗಿರುವುದರಿಂದ ನಿಮ್ಮನ್ನು ಹೌಸ್ ಅರೆಸ್ಟ್ ಮಾಡಲು ತೀರ್ಮಾನಿಸಿದ್ದೇವೆ.
ಮನೆಯಿಂದಲೇ ತನಿಖೆ ಮಾಡುತ್ತೇವೆ. ಹೊರ ಹೋಗುವಂತಿಲ್ಲ ಎಂದು ಬೆದರಿಸಿದ ಆರೋಪಿಗಳು, ನಿಮ್ಮ ಬ್ಯಾಂಕ್ ಖಾತೆಯ ಹಣ ಮತ್ತು ಷೇರು, ಮ್ಯೂಚುವಲ್ ಫಂಡ್, ಎಫ್ಡಿ, ಬ್ಯಾಂಕ್ ಲಾಕರ್ಗಳೆಲ್ಲ ಬಂದ್ ಮಾಡಿ, ಗೂಗಲ್ ಪೇ, ನೆಟ್ ಬ್ಯಾಂಕಿಂಗ್ನಿಂದ ಆರ್ಬಿಐಗೆ ಹಣ ವರ್ಗಾಯಿಸಬೇಕಾಗಿದೆ. ಇದು ದೊಡ್ಡ ಅಪರಾಧ. ಯಾರಲ್ಲಿಯೂ ಹೇಳಬೇಡಿ, ನೀವು ಕಳುಹಿಸಿದ್ದು ಸೆಕ್ಯೂರಿಟಿ ಹಣವಾಗಿರುತ್ತದೆ. ಶೀಘ್ರ ತನಿಖೆಯಾಗುತ್ತದೆ. ಅದಾದ ಬಳಿಕ ನಿಮ್ಮ ಹಣ ವಾಪಸು ಸಿಗುತ್ತದೆ ಎಂದು ಹೇಳಿ ನಂಬಿಸಿದರು. ಬಳಿಕ ಗೂಗಲ್ ಪೇ ಮೂಲಕ ಆರೋಪಿಗಳ ಖಾತೆಗೆ ಡಿ. 9ರಿಂದ 17ರ ವರೆಗೆ ಹಂತ- ಹಂತವಾಗಿ 10.39 ಲಕ್ಷ ರೂ.ಗಳನ್ನು ಮಂಜು ಪಾವತಿಸಿದ್ದರು.
ಆರೋಪಿಗಳು ನನ್ನನ್ನು ಹೆದರಿಸಿ, ಹಣ ಪಡೆದು, ಬಳಿಕ ವಾಪಸು ನೀಡದೆ ಮೋಸ ಮಾಡಿದ್ದಾರೆ ಎಂದು ಮಂಜು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.