ಸಿದ್ದಾಪುರ: ತಾಲೂಕಿನಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಂಗಗಳು ಸಾವನ್ನಪ್ಪುತ್ತಿರುವ ಮತ್ತು ಮಂಗನ ಕಾಯಿಲೆ ಶಂಕಿತರಾದ ಇಬ್ಬರು ರೋಗಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಸಂಜೆ ತಾಪಂ ಸಭಾಭವನದಲ್ಲಿ ವಿಶೇಷ ಸಭೆ ನಡೆಸಿದರು.
ತಾಲೂಕು ವೈದ್ಯಾಧಿಕಾರಿ ಡಾ| ಲಕ್ಷ್ಮಿಕಾಂತ ನಾಯ್ಕ ಮಾಹಿತಿ ನೀಡಿ ತಾಲೂಕಿನಲ್ಲಿ 22 ಮಂಗಗಳು ಸತ್ತಿರುವ ಮಾಹಿತಿ ದೊರಕಿದ್ದು ಅವುಗಳ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಅವುಗಳಲ್ಲಿ 2ರಲ್ಲಿ ಕೆಎಫ್‌ಡಿ ರೋಗ ಲಕ್ಷಣಗಳು ಕಂಡುಬಂದ ವರದಿ ಬಂದಿದೆ. ಈವರೆಗೆ 9 ರೋಗಿಗಳು ಶಂಕಿತರೆಂದು ಗುರುತಿಸಲಾಗಿದ್ದು ತೀರಿಕೊಂಡ ಸಾವಿತ್ರಿ ಎನ್ನುವವರಿಗೆ ಮಂಗನ ಕಾಯಿಲೆ ಲಕ್ಷಣಗಳಿದ್ದರೂ ಅಧಿಕೃತ ವರದಿ ಬಂದಿಲ್ಲ. ಮುಂದೆ ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಆರೋಗ್ಯ ಮತ್ತು ಅರಣ್ಯ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿ ಉಳಿದ ಇಲಾಖೆಗಳ ಸಹಕಾರ ಪಡೆದುಕೊಳ್ಳಬೇಕು. ಈಗಾಗಲೇ ಸಾಕಷ್ಟು ಮುತುವರ್ಜಿ ವಹಿಸಿದ್ದು ಇನ್ನೂ ಹೆಚ್ಚಿನ ಕ್ರಮ ತೆಗೆದುಕೊಳ್ಳಬೇಕಿದೆ. ಅಧಿಕಾರಿಗಳು ಗಂಭೀರ ವಾಗಿ ಕಾರ್ಯನಿರ್ವಹಿಸಬೇಕು. ಇಲ್ಲವಾದರೆ ಕಠಿಣಕ್ರಮದ ಸಾಧ್ಯತೆಗಳಿವೆ. ಈಗಾಗಲೇ ಆರೋಗ್ಯ ಆಯುಕ್ತರ ಬಳಿ ಮಾತನಾಡಿದ್ದು ಸೂಕ್ತವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ. ಶಂಕಿತ ರೋಗಿಗಳು ಅವರು ಮಣಿಪಾಲ ಹಾಗೂ ಇನ್ನಿತರ ಆಸ್ಪತ್ರೆಗೆ ಪರೀಕ್ಷೆಗೆ ಹೋಗಲು ಅವಕಾಶ ಮಾಡಿಕೊಡಿ. ಆಡಳಿತಾತ್ಮಕ ತಾಂತ್ರಿಕ ತೊಂದರೆ ಇದ್ದರೆ ತಿಳಿಸಿ. ಅದನ್ನು ಸರಿಪಡಿಸಲು ಹಿರಿಯ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೃಷಿಕರಿಗೆ ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಿ ಎಂದರು.
ಸಾರ್ವಜನಿಕರ ಆಕ್ರೋಶ: ಇಬ್ಬರು ಶಂಕಿತ ಕಾಯಿಲೆಯಿಂದ ಮೃತಪಟ್ಟ ಬಾಳಗೋಡ ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳ ಕಾರ್ಯವೈಖರಿ ಕುರಿತು ಆಕ್ರೋಶ ವ್ಯಕ್ತಪಡಿಸಿದರು. 15-20 ದಿನದಿಂದ ಮಂಗಗಳು ಸಾಯುತ್ತಿದ್ದರೂ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಅರಣ್ಯ ಇಲಾಖೆ ಸ್ಥಳೀಯ ಸಿಬ್ಬಂದಿ ನಿರ್ಲಕ್ಷ ಕಾಣುತ್ತಿದೆ. ಅತ್ತಿಸಾಲು ಎನ್ನುವಲ್ಲಿ ಮಂಗ ಸತ್ತಿರುವ ಬಗ್ಗೆ ತಿಳಿಸಿದರೂ ಅರಣ್ಯ ಇಲಾಖೆ ಸಿಬ್ಬಂದಿ ಗಮನವನ್ನೇ ಕೊಟ್ಟಿಲ್ಲ. ಅರಣ್ಯದ ನಿಗಾ ವಹಿಸಬೇಕಾದ ಸಿಬ್ಬಂದಿಗೆ ಮಂಗ ಸತ್ತಿದ್ದು ಮೊದಲು ಗೊತ್ತಾಗಬೇಕು. ಆದರೆ ಸಾರ್ವಜನಿಕರೆ ಅವರಿಗೆ ತಿಳಿಸಬೇಕಿದೆ. ಅವರು ರಸ್ತೆಯಲ್ಲಿ ಓಡಾಡುತ್ತಾರೆಯೇ ಹೊರತು ಕಾಡಿನೊಳಗೆ ಹೋಗುತ್ತಿಲ್ಲ. ಕ್ಯಾದಗಿ ಗ್ರಾಪಂ ಅಧ್ಯಕ್ಷರು 100ಕ್ಕೂ ಹೆಚ್ಚು ಮಂಗಗಳು ಸತ್ತಿರಬಹುದು ಅನ್ನುವ ಶಂಕೆ ವ್ಯಕ್ತಪಡಿಸುತ್ತಾರೆ. ಆದರೆ ಅರಣ್ಯ ಇಲಾಖೆ ಕೇವಲ 22 ಸತ್ತ ಮಂಗಗಳನ್ನ ಗುರುತಿಸಿದೆ. ಅಧಿಕಾರಿಗಳು ಸಂಚರಿಸುವ ರಸ್ತೆಗೆ ಮಾತ್ರ ನಿರೋಧಕ ಔಷಧ ಸಿಂಪಡಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಕೆ.ಎಫ್‌ಡಿ ಕೇಂದ್ರ ಶಿವಮೊಗ್ಗದಲ್ಲಿ ಮಾತ್ರ ತಜ್ಞರು ಅಲ್ಲಿರುತ್ತಾರೆ. ಇಲ್ಲಿ ವ್ಯಾಪಕವಾಗಿ ಮಂಗನ ಕಾಯಿಲೆ ರೋಗ ಲಕ್ಷಣಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಗೆ ಅದರಲ್ಲೂ ಸಿದ್ದಾಪುರದಲ್ಲಿ ಸಂಶೋಧನಾ ಪ್ರಯೋಗಾಲಯ ಸ್ಥಾಪಿಸಲು ಸರಕಾರವನ್ನು ಆಗ್ರಹಿಸಿತ್ತೇನೆ ಎಂದು ವಿಶ್ವೇಶ್ವರ ಹೆಗಡೆ ಸಭೆಯಲ್ಲಿ ತಿಳಿಸಿ ಎಲ್ಲ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಾಯಿಲೆ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ತಿಳಿಸಿದರು.
ತಹಶೀಲ್ದಾರ್ ಪಟ್ಟರಾಜ ಗೌಡ, ಜಿಪಂ ಸದಸ್ಯ ನಾಗರಾಜ ನಾಯ್ಕ, ಪಪಂ ಅಧ್ಯಕ್ಷೆ ಸುಮನಾ ಕಾಮತ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಮುಂತಾದವರಿದ್ದರು.