Advertisement

ಶಾಮರಾಯ ಗರ್ವಭಂಗ 

01:25 PM Oct 08, 2017 | |

ಪಟೇಲರ ಮನೆಯ ಗದ್ದೆಯಲ್ಲಿ ನಡೆಯುತ್ತಿದ್ದ ಬಯಲಾಟದಲ್ಲಿ ಮುಂಜಾನೆಯ ನಾಲ್ಕು ಗಂಟೆಯ ಹೊತ್ತಿಗೆ ರಾಕ್ಷಸನೊಬ್ಬ ಬಂದು ಅಬ್ಬರಿಸಿ ಕುಣಿದು, ಎಲ್ಲರ ಮೇಲೆ ನಂಜುಕಾರುತ್ತಿದ್ದಾಗ ಗದ್ದೆಯಂಚಿನ ದಿಬ್ಬದಲ್ಲಿ ನಶೆಯೇರಿಸಿಕೊಂಡು ಮಲಗಿದ್ದ ಶಾಮರಾಯನ ನಶೆ ಸ್ವಲ್ಪ ಇಳಿದು ಎಚ್ಚರಾಗಿ ಎದ್ದು ಕುಳಿತು ಪಿಳಿಪಿಳಿ ನೋಡುತ್ತಿದ್ದ. ರಾಕ್ಷಸನು ಮುಂದಿನ ದಾಳಿಗೆ ಯೋಜನೆ ಹಾಕಿ ವಾರ್‌ ಡಿಕ್ಲೇರ್‌ ಮಾಡಿ, ಸೈನ್ಯಕ್ಕೆಲ್ಲ ಕರೆಕೊಟ್ಟು ನೇಪಥ್ಯವನ್ನು ಸೇರಿಕೊಂಡ. 

Advertisement

ಅಷ್ಟರಲ್ಲಿ ಬ್ರಹ್ಮನ ಪ್ರವೇಶ. ಬ್ರಹ್ಮದೇವ ಮತ್ಯಾರೂ ಅಲ್ಲ. ಸ್ಥಳೀಯ ಲಾಂಡ್ರಿ ಮಾಲಕ ಮಂಜಣ್ಣನೇ. ಅವನು ಭಾಗವತರು ತನಗಾಗಿ ಹಾಡಿದ ಪದ್ಯಕ್ಕೆ ಕಾಲನ್ನು ಸ್ವಲ್ಪ ಹೆಚ್ಚು , ಸೊಂಟವನ್ನು ಸ್ವಲ್ಪ ಕಮ್ಮಿ ಆಡಿಸಿ ಸಿಂಹಾಸನದಲ್ಲಿ ಕುಳಿತುಬಿಟ್ಟ. ಭಾಗವತರು ಅನಿವಾರ್ಯವಾಗಿ ಪದ್ಯವನ್ನು ಬೇಗ ಮುಗಿಸಿ ಬ್ರಹ್ಮದೇವನು ಏನು ಹೇಳುವನೋ ಎಂದು ನೋಡುವ ಕುತೂಹಲದಿಂದ ಒಂದು ಬದಿಗೆ ವಾಲಿ ಕುಳಿತರು. ಅವರು ಬ್ರಹ್ಮದೇವನ ನೇರ ಹಿಂದಕ್ಕೆ ಕುಳಿತುಕೊಂಡಿದ್ದುದರಿಂದ ನೆಟ್ಟಗೆ ಕುಳಿತ್ತಿದ್ದರೆ ಮಂಜಣ್ಣನ ಬಾಯಿಯಿಂದ ಬರುವ ಮಾತುಗಳು ಕೇಳವೇನೋ ಎಂಬ ಭಯ ಅವರಿಗಿದ್ದಂತೆ ಇತ್ತು.

ಬ್ರಹ್ಮನಾದ ಮಂಜಣ್ಣನು ಪ್ರಾರಂಭಿಸಿದನು: “ಸೃಷ್ಟಿಕರ್ತನಾದ ನಾನು…’ಆಗ ಶಾಮರಾಯನಿಗೆ ಪೂರ್ತಿ ಎಚ್ಚರಾಗಿತ್ತು, ಮಾತ್ರವಲ್ಲ ಮಂಜಣ್ಣನ ಗುರುತು ಕೂಡ ಆಗಿತ್ತು. ಅಲ್ಲದೆ ತಾನು ಬ್ರಹ್ಮದೇವನ ಪಾತ್ರ ವಹಿಸಲಿರುವೆನು ಎಂದು ಮಂಜಣ್ಣನು ಊರಿಡೀ ಪ್ರಚಾರ ಮಾಡಿಬಿಟ್ಟಿದ್ದನು. ಮಂಜಣ್ಣನ ಮಾತು ಕೇಳಿ ಶಾಮರಾಯನು ಮಾರುತ್ತರ ಕೊಟ್ಟನು: “ಇಸ್ತ್ರಿ ಕರ್ತನಾದ ನಾನು!’

ಅದು ಅಲ್ಲಿ ಪಕ್ಕದಲ್ಲಿ ಕುಳಿತು ಆಟನೋಡುತ್ತಿದ್ದ ಹತ್ತಿಪ್ಪತ್ತು ಮಂದಿಗೆ ಕೇಳಿಸಿ ಅವರಲ್ಲಿ ನಗೆಯುಕ್ಕಿಸಿತು. ಬ್ರಹ್ಮದೇವನಿಗಿಂತ ಶಾಮರಾಯನೇ ಹೆಚ್ಚು ಬುದ್ಧಿವಂತನೆಂಬಂತೆ ಅವರಿಗೆ ಕಾಣಿಸಿದ್ದರಲ್ಲಿ ತಪ್ಪೇನಿಲ್ಲ. ಹಾಗಾಗಿ, ಕೆಲವರು ಆಟ ನೋಡುವುದು ಬಿಟ್ಟು ಶಾಮರಾಯನನ್ನು ನೋಡತೊಡಗಿದರು.

ಮಂಜಣ್ಣನು ಬ್ರಹ್ಮದೇವರ ಕರ್ತವ್ಯ ಇತ್ಯಾದಿಗಳನ್ನು ತನ್ನ ಅನುಭವದ ನೆಲೆಯಲ್ಲಿ, ವಿಠಲ ಭಟ್‌ ಮಾಸ್ಟರಿಂದ ಕೇಳಿ ತಿಳಿದಿದ್ದನ್ನು ಸೇರಿಸಿ ವಿಸ್ತರಿಸಿ ಹೇಳಿದನು. ಅದು ಶಾಮರಾಯನಿಗೆ ಬೋರ್‌ ಆಗಲು, ಅವನು ಎದ್ದು ಚುರುಮುರಿ ತಿನ್ನೋಣವೆಂದು ಅಂಗಡಿ ಸಾಲಿನತ್ತ ತೂರಾಡುತ್ತಾ ಹೊರಟನು. ಇನ್ನೂ ಕೆಲವರು, ಬಹುಶಃ ಈಗಾಗಲೇ ಶಾಮರಾಯನ ಅಭಿಮಾನಿಗಳಾಗಿದ್ದವರು ತಾವೂ ಎದ್ದು ಚಾ ಕುಡಿಯಲು, ದೇಹ ಬಾಧೆ ತೀರಿಸಿಕೊಳ್ಳಲು, ಚುರುಮುರಿ ತಿನ್ನಲು ಹೀಗೆ ವಿವಿಧ ಕಾರ್ಯಾರ್ಥವಾಗಿ ಹೊರಟರು.

Advertisement

ರಾಕ್ಷಸನು ಸೈನ್ಯ ಕಟ್ಟಿಕೊಂಡು ಬರುವವರೆಗೆ ಎಲ್ಲರಿಗೂ ಪುರುಸೊತ್ತು ಅನ್ನುವ ಹಾಗೆ ಪ್ರೇಕ್ಷಕರು ನಿರಾಳವಾಗತೊಡಗಿದ್ದರು. ಇತ್ತ ಚುರಮುರಿ ತಿನ್ನಲು ಆರ್ಡರ್‌ ಮಾಡಿ ದಿವಾಕರನ ಮುಂದೆ ನಿಂತಿದ್ದ ಶಾಮರಾಯನಿಗೆ ಒಂದು ಶಾಕಿಂಗ್‌ ನ್ಯೂಸ್‌ ಸಿಕ್ಕಿತು. ಅವನನ್ನು ಕಂಡು ಸಮೀಪ ಬಂದ ರಮೇಶ ಹೇಳಿದ, “”ಶಾಮರಾಯಣ್ಣನಿಗೆ ಹುಚ್ಚಂತೆ, ಪೇಪರಿನಲ್ಲಿ ಬಂದಿದೆ?”

ಶಾಮರಾಯನಿಗೆ ಅರ್ಥವಾಗಲಿಲ್ಲ. ರಮೇಶ ಮತ್ತೆ ಹೇಳಿದ, “”ನೀವು ನೋಡಲೇ ಇಲ್ವ ಶಾಮರಾಯಣ್ಣ! “ವಾಟ್ಸಾಪ್‌ ಉಡುಪಿ’ ಅಂತ ಒಂದು ಪೇಪರ್‌ ಉಂಟು ನೋಡಿ, ವಾರಕ್ಕೊಮ್ಮೆ ಬರುತ್ತದೆ. ಅದರಲ್ಲಿ ಬಂದಿದೆ”

“”ಏನಂತ ಬಂದಿದೆ?”
“”ಕುಂಟಲಬೆಟ್ಟು ಗ್ರಾಮದ ಶಾಮರಾಯ ಎನ್ನುವವರು ನಮ್ಮ ಕುಟುಂಬಕ್ಕೆ ಸೇರಿದ ಆಸ್ತಿಯನ್ನು ಅಕ್ರಮವಾಗಿ ಮಾರಲು ಹೊರಟಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಸದ್ರಿ ಶಾಮರಾಯರಿಗೆ ಮಾನಸಿಕ ಸ್ವಾಸ್ಥ್ಯ ಇಲ್ಲದ ಕಾರಣ, ಯಾರಾದರೂ ಸದ್ರಿ ಆಸ್ತಿಯನ್ನು ಖರೀದಿಸಿದಲ್ಲಿ ಅದು ಅನೂರ್ಜಿತವಾಗುವುದೆಂದು ಈ ಮೂಲಕ ತಿಳಿಯಪಡಿಸಲಾಗಿದೆ. ಅದಕ್ಕೆ ಅವರೇ ಹೊಣೆಗಾರರು, ತಿಳಿದಿರಲಿ- ಎಂದಿತ್ತು ಮಾರಾಯರೆ” ಎಂದು ರಮೇಶ ಬಾಯಿಪಾಠ ಒಪ್ಪಿಸಿದ.

ಅದು ದೇವಲೋಕದ ಮೇಲೆ ದಾಳಿಗೆ ಹೊರಟ ರಾಕ್ಷಸನ ವರ್ತನೆಗಿಂತಲೂ ಕ್ರೂರವಾದ ದಾಳಿ ಎಂದು ಶಾಮರಾಯನಿಗೆ ಅನಿಸಿತು. ಅವನು ಅಲ್ಲೇ ಕುಸಿದು ಕುಳಿತು, ತಲೆಗೆ ಕೈಯಿಟ್ಟು, “ಅಯ್ಯೋ…’ ಎಂದು ಅಳತೊಡಗಿದ. ಶರಾಬಿನ ನಶೆಯಲ್ಲದೆ ಇದ್ದರೆ ಅವನು ಹಾಗೆ ಅಳುತ್ತಿರಲಿಲ್ಲವೇನೋ. ಆದರೆ ಶರಾಬಿನ ಅಮಲಿನಲ್ಲಿ ಇಲ್ಲದಾಗ ಶಾಮರಾಯ ಹೇಗಿರುತ್ತಾನೆ ಎನ್ನುವುದನ್ನು ಕಂಡವರಿಲ್ಲ.

ಶಾಮರಾಯ ತನ್ನ ಪಾಲಿಗೆ ಬಂದಿದ್ದ ಒಂದು ಎಕರೆ ಜಾಗವನ್ನು ರಾಮಣ್ಣ ಶೆಟ್ಟರಿಗೆ ಮಾರಾಟ ಮಾಡಲು ಹೊರಟು ವ್ಯವಹಾರ ಕುದುರಿಸುತ್ತಿದ್ದುದು ಹೌದು. ಆದರೆ, ಅದು ತೀರಾ ಗುಟ್ಟಿನಲ್ಲಿದ್ದ ಸಂಗತಿ. ಇಂತಹ ಸಂದರ್ಭದಲ್ಲಿ ತನ್ನ ಸ್ವರ್ಗಕ್ಕೆ ಕೊಳ್ಳಿ ಇಡಲು ಹೊರಟವರು ಯಾರು ಎಂದು ಶಾಮರಾಯ ದಿವ್ಯದೃಷ್ಟಿಯಿಂದ ನೋಡಿದ. ಅವನ ದಿವ್ಯದೃಷ್ಟಿಗೆ ಕಂಡವರು ಅವನ ದಾಯಾದಿಗಳಾದ ಶಿವರಾಯ, ಅವನ ಮಕ್ಕಳು ಮತ್ತು ಅವರ ಅಸ್ಥಾನ ವಿದ್ವಾಂಸರಾದ ರಾಘು ಭಟ್ಟರು. ರಾಘು ಭಟ್ಟರೇ ಶಿವರಾಯನ ಪರವಾಗಿ ಎಷ್ಟು ಸಾರಿ ಬಂದಿದ್ದರು ಶಾಮರಾಯನ ಬಳಿಗೆ!

ಭಟ್ಟರದು ಒಂದೇ ರಾಗ, “”ಶಾಮರಾಯ, ನಿನ್ನ ಆಸ್ತಿಯನ್ನು ಪರಭಾರೆ ಮಾಡಬೇಡ. ನಾಲ್ಕು ಕಾಸು ಹೆಚ್ಚು ಕಡಿಮೆ, ಶಿವರಾಯನಿಗೇ ಕೊಡು. ಅವನಿಗೆ ನಾಲ್ಕು ಜನ ಮಕ್ಕಳಿದ್ದಾರೆ. ಅವರೆಲ್ಲ ಆ ಜಾಗವನ್ನು ಅಭಿವೃದ್ಧಿಪಡಿಸಿ ಬದುಕಿಕೊಳ್ಳಲಿ. ನಿನಗೆ ಯಾರಿದ್ದಾರೆ, ಹೆಂಡತಿಯಾ, ಮಕ್ಕಳಾ?”

“”ಛೆಕ್‌! ಜೀವ ಹೋದರೂ ಅವನಿಗೆ ಕೊಡುವುದಿಲ್ಲ!” ಶಾಮರಾಯನ ಕಡಕ್‌ ಉತ್ತರ.
ಓಹೋ! ರಾಘು ಭಟ್ಟರು ಈಗ ಜಾಗ ಮಾರದ ಹಾಗೆ ಮಾಡಲು ಈ ಪ್ಲಾನ್‌ ಮಾಡಿದ್ದಾರಾ? ಶಿವರಾಯನಿಗಾಗಲೀ ಅವನ ಮಕ್ಕಳಿಗಾಗಲಿ ಇಂತಹ ತಲೆ ಇರಲಿಕ್ಕಿಲ್ಲ. ಇದೆಲ್ಲ ರಾಘು ಭಟ್ಟರ ಕಿತಾಪತಿಯೇ ಇರಬೇಕು. ನಾಳೆ ಬೆಳಿಗ್ಗೆ ಸೀದಾ ಹೋಗಿ ರಾಮಣ್ಣ ಶೆಟ್ಟರನ್ನು ಭೇಟಿ ಮಾಡಬೇಕು. ಅವರನ್ನು ಬಿಟ್ಟರೆ ಬೇರೆ ಯಾರೂ ತನ್ನ ಜಾಗವನ್ನು ಕೊಳ್ಳುವವರಿಲ್ಲ. ಬಂದ ಎಲ್ಲರನ್ನೂ ಈ ಭಟ್ಟರೂ, ಶಿವರಾಯನ ಕಡೆಯವರೂ, “ಆ ಜಾಗದಲ್ಲಿ ಭೂತ ಸವಾರಿ ಉಂಟು, ನಾಗ ಬೀದಿ ಉಂಟು’ ಅಂತ ಹೆದರಿಸಿ ಓಡಿಸುತ್ತಾರೆ. ಈಗ ಈ ಪ್ಲ್ಯಾನ್‌ ಮಾಡಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆ ಮಾಡಿಕೊಂಡು ನೀವೇ ತೆಗೆದುಕೊಳ್ಳಿ ಶೆಟ್ರೇ ಎಂದು ಕೇಳಿಕೊಂಡು ಆದಷ್ಟು ಬೇಗನೆ ರಿಜಿಸ್ಟ್ರ್ ಮಾಡಿ ಕೊಟ್ಟುಬಿಡಬೇಕು- ಎಂದುಕೊಂಡ ಶಾಮರಾಯ.

ಅಷ್ಟರಲ್ಲಿ ಚುರುಮುರಿಯ ಕಾಗದದ ಕಟ್ಟು ಅವನ ಕೈಗೆ ಬಂತು. ಹತ್ತು ರೂಪಾಯಿಯನ್ನು ದಿವಾಕರನಿಗೆ ಕೊಟ್ಟು ಮತ್ತೆ ತಾನು ಕೂತಿದ್ದ ತಿಟ್ಟೆಯ ಮೇಲೆ ಬಂದು ಕುಳಿತು ಆಟ ನೋಡತೊಡಗಿದ. ಆದರೆ, ಆಟದಲ್ಲಿ ಸ್ವಾರಸ್ಯ ಉಳಿಯಲಿಲ್ಲ. ತನ್ನ ಜಾಗ ಮಾರಾಟ ಆಗದಿದ್ದರೆ ತಾನು ಬದುಕುವುದು ಹೇಗೆ ಎಂಬ ಚಿಂತೆಯೇ ಕಾಡತೊಡಗಿತು.  

ರಾಕ್ಷಸರು ಬಂದು ಬ್ರಹ್ಮದೇವರನ್ನೂ ಈಶ್ವರ ದೇವರನ್ನೂ ಅವರವರ ಲೋಕದಿಂದ ಓಡಿಸಿ ಮಹಾವಿಷ್ಣುವಿನ ವೈಕುಂಠದತ್ತ ಹೊರಟರು. ಬ್ರಹ್ಮನೂ ಈಶ್ವರನೂ ಅವರಿಗಿಂತ ಮುಂಚಿತವಾಗಿಯೇ ಮಹಾವಿಷ್ಣುವಿನ ಬಳಿಗೆ ಹೋಗಿ ಸಾವಿಲ್ಲದ ವರ ಪಡೆದು ಕೊಬ್ಬಿರುವ ಈ ರಾಕ್ಷಸನನ್ನು ವಧಿಸಲು ಏನಾದರೂ ಪ್ಲ್ಯಾನ್‌ ಮಾಡಬೇಕೆಂದು ಕೇಳಿಕೊಳ್ಳಲು ನಿರ್ಧರಿಸಿದರು. ಅವರು ಆ ಯೋಜನೆಯಲ್ಲಿ ವೈಕುಂಠಕ್ಕೆ ಬರುವಷ್ಟರಲ್ಲಿ ಶಾಮರಾಯನಿಗೆ ಆಟದಲ್ಲಿ ಆಸಕ್ತಿ ಹೊರಟುಹೋಗಿತ್ತು. ಮಹಾವಿಷ್ಣುವಿನ ವೇಷವನ್ನು ಒಂದು ಸರ್ತಿ ನೋಡಿ ಸೀದಾ ಹೊರಟೇಬಿಡುವುದು ಎಂದು ನಿರ್ಧರಿಸಿದ.

ಇತ್ತ ಅವನ ನಶೆಯೂ ಇಳಿಯತೊಡಗಿತ್ತು. ಗಡಂಗಿನ ಸುಂದರಣ್ಣ ಬೆಳಗ್ಗೆ ಐದು-ಐದೂವರೆಯವರೆಗೆ ಆಟದ ಸಲುವಾಗಿ ಗಡಂಗನ್ನು ಓಪನ್‌ ಇಡುತ್ತೇನೆಂದು ಹೇಳಿದ್ದ. ಅಲ್ಲಿ ಒಂದು ಗುಟುಕು ಗವರ್ಮೆಂಟ್‌ ಕಷಾಯ ಹಾಕದೆ ಪೂರಾ ಬ್ಯಾಟ್ರಿ ಡೌನ್‌ ಆದರೆ ಕಷ್ಟವೆಂದು ಮಹಾವಿಷ್ಣುವಿನ ದರ್ಶನವಾದ ಬಳಿಕ ಶಾಮರಾಯ ಎದ್ದು ಲುಂಗಿ ಕೊಡವಿಕೊಂಡು, ಕುಂಡೆಗೆ ಮತ್ತು ಮೈಕೈಗೆಲ್ಲ ಅಂಟಿದ್ದ ಹುಲ್ಲಿನ ಗರಿಗಳು, ಧೂಳು ಇತ್ಯಾದಿಗಳನ್ನು ನಿವಾರಿಸಿಕೊಂಡು ಗಡಂಗಿನ ಕಡೆಗೆ ಹೆಜ್ಜೆ ಹಾಕಿದ. ಅವನ ಹೆಜ್ಜೆಗೆ ಸರಿಯಾಗಿ “ಡಣಕ್‌ ಡಣಕ್‌’ ಎಂಬ ವ್ಯಂಗ್ಯವಾದ ಚೆಂಡೆಯ ಪೆಟ್ಟುಗಳು ರಂಗಸ್ಥಳದಿಂದ ಕೇಳಿಸುತ್ತಿದ್ದುದು ಪರಿಸ್ಥಿತಿಯ ವ್ಯಂಗ್ಯವೆನ್ನಬಹುದು. ಅಂತಹ ಚೆಂಡೆಯ ಪೆಟ್ಟುಗಳು ಯಾವುದಾದರೂ ಪಾತ್ರಗಳು ಗುಟ್ಟಿನಲ್ಲಿ ಕಳ್ಳಹೆಜ್ಜೆಯಲ್ಲಿ ಎಂಟ್ರಿ ಕೊಡುವಾಗ ಬಡಿಯುವ ಪೆಟ್ಟುಗಳು!
.
.
ರಾಮಣ್ಣ ಶೆಟ್ಟರದ್ದು ಒಂದೇ ಮಾತು. “ನನಗೆ ಆ ಜಾಗ ಬೇಡ!’
ಶಾಮರಾಯನ ನಶೆಯೆಲ್ಲ ಇಳಿದುಹೋಯಿತು. ಪುನಃ ಹಿಂದಿನ ರಾತ್ರಿ ಚುರುಮುರಿ ಅಂಗಡಿಯ ಮುಂದೆ ಕುಸಿದು ಕುಳಿತು ತಲೆಗೆ ಕೈಯಿಟ್ಟು ಗೋಳಾಡಿದ ಸೀನನ್ನು ಪುನರಾವರ್ತಿಸಿದ. 
“”ಸ್ವಾಮೀ, ನೀವೂ ಆ ದರವೇಸಿಗಳ ಬೆದರಿಕೆಗೆ ಹೆದರುತ್ತೀರಾ? ನಿಮ್ಮಂಥ ಧಣಿಗಳ ಕೂದಲು ಕೊಂಕಿಸುವ ಯೋಗ್ಯತೆ ಉಂಟಾ ಅವರಿಗೆ? ನಿಮ್ಮ ರೋಮದ ಬೆಲೆ ಉಂಟಾ ಅವರಿಗೆ?” ಎಂದೆÇÉಾ ರಾಮಣ್ಣ ಶೆಟ್ಟರನ್ನು ಉಬ್ಬಿಸಲು ಪ್ರಯತ್ನ ಪಟ್ಟ. ಶಾಮರಾಯನ ಪ್ರಯತ್ನಗಳೆಲ್ಲ ವ್ಯರ್ಥವಾದವು.

“”ನನಗೆ ಅವರ ಹೆದರಿಕೆ ಇಲ್ಲ ಮಾರಾಯ! ಆದರೆ ಅವರು ಒಂದು ಕೇಸ್‌ ಹಾಕಿಬಿಟ್ಟರೆ ನನಗೆ ಅದಕ್ಕೆಲ್ಲ ಓಡಾಡಲಿಕ್ಕೆ ಸಮಯ ಇಲ್ಲವಲ್ಲ ಶಾಮಣ್ಣ” ಎಂದರು ಶೆಟ್ಟರು. “”ಕೇಸ್‌ ಹಾಕುವುದು ಹೇಗೆ ಸ್ವಾಮೀ, ಜಾಗ ನನ್ನ ಹೆಸರಿನಲ್ಲಿಯೇ ಉಂಟಲ್ಲ! ನಮ್ಮ ಅಪ್ಪಂದಿರ ಕಾಲದಲ್ಲಿಯೇ ಪಾಲಾಗಿದೆ ಸ್ವಾಮೀ” ಶಾಮರಾಯ ಗೋಗರೆದ. ರಾಮಣ್ಣ ಶೆಟ್ಟರಿಗೆ ಆ ಜಾಗ ಖರೀದಿ ಮಾಡಲು ಹೆದರಿಕೆ ಏನೂ ಇರಲಿಲ್ಲ. ಜಾಗ ಶಾಮರಾಯನ ಹೆಸರಿನಲ್ಲಿಯೇ ಇದೆಯೆನ್ನುವುದೂ ಅವರಿಗೆ ತಿಳಿದಿತ್ತು. ಆದರೆ, ಎರಡು ದಿನಗಳ ಕೆಳಗೆ ರಾಘು ಭಟ್ಟರು ಶಿವರಾಯನನ್ನು ಕರೆದುಕೊಂಡು ರಾಮಣ್ಣ ಶೆಟ್ಟರ ಬಳಿಗೆ ಬಂದಿದ್ದರು. ಅವರು ಶಾಮರಾಯನ ದುರ್ಗುಣಗಳನ್ನೆಲ್ಲ ವರ್ಣಿಸಿ, ಅವನು ಪಾಪದವನಾದ ಶಿವರಾಯನಿಗೆ ನೀಡುತ್ತಿದ್ದ ಕಿರುಕುಳಗಳನ್ನು ವಿವರಿಸಿದ್ದರು. ಶಾಮರಾಯ ಸದಾ ಕುಡಿದು ಗಲಾಟೆ ಮಾಡುತ್ತ¤ ಇರುತ್ತಿದ್ದುದಲ್ಲದೆ ದಾಯಾದಿಯಾದ ಶಿವರಾಯನ ಹೆಂಡತಿಯ ಮಾನಭಂಗಕ್ಕೂ ಹಿಂದೆ ಪ್ರಯತ್ನಿಸಿದ್ದ, ಅದನ್ನು ಆಕೆ ವಿರೋಧಿಸಿ ಗಲಾಟೆ ಮಾಡಿದ್ದರಿಂದ ಅವನಿಗೆ ಅವಮಾನವಾಗಿ ಈ ಕುಟುಂಬದ ಮೇಲೆ ಅವನೀಗ ದ್ವೇಷ ಸಾಧಿಸುತ್ತ ಇ¨ªಾನೆ; ಅದಕ್ಕಾಗಿ ಅವನು ಜಾಗವನ್ನು ಶಿವರಾಯನಿಗೆ ಮಾರದೆ ನಿಮಗೆ ಮಾರಲು ಪ್ರಯತ್ನಿಸುತ್ತಿ¨ªಾನೆ ಎಂದು ಹೇಳಿ ರಾಮಣ್ಣ ಶೆಟ್ಟರ ಮನಸ್ಸನ್ನು ಶಾಮರಾಯನ ವಿರುದ್ಧವಾಗಿ ತಿರುಗಿಸಿದ್ದರು. ಶಾಮರಾಯ ಶಿವರಾಯನ ಹೆಂಡತಿಯ ಮೇಲೆ ಕಣ್ಣು ಹಾಕಿದ್ದು, ಅವಳನ್ನು ಒಮ್ಮೆ ಹಿಡಿಯಲು ಪ್ರಯತ್ನಿಸಿದ್ದು ಸತ್ಯವೂ ಆಗಿತ್ತು. 

“”ಸ್ವಾಮೀ, ಶಿವರಾಯನಿಗೆ ನಾಲ್ಕು ಮಂದಿ ಮಕ್ಕಳು. ಅಂಗೈಯಗಲದ ಜಾಗದಲ್ಲಿ ದುಡಿದು ಅವನ ದಿನ ಸಾಗಬೇಕಾಗಿದೆ. ಜತೆಗೆ ಹೆಂಡತಿಯೂ ಬೀಡಿ ಕಟ್ಟುತ್ತ¤ ಇ¨ªಾಳೆ. ಶಿವರಾಯನ ಜಾಗವೂ ಅವರಿಗೆ ಸಿಕ್ಕಿದರೆ ಎಲ್ಲರೂ ಸೇರಿ ಏನಾದರೂ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ನೀವು ದೊಡ್ಡ ಮನಸ್ಸು ಮಾಡಿ ಆ ಜಾಗವನ್ನು ಬಿಟ್ಟುಬಿಡಬೇಕು” ಎಂದು ಭಟ್ಟರು ಕೈಮುಗಿದಾಗ ರಾಮಣ್ಣ ಶೆಟ್ಟರು, “”ಶೇ ಶೇ! ಇದೆಲ್ಲ ಗೊತ್ತಿದ್ದರೆ ನಾನು ಇದಕ್ಕೆ ಕೈ ಹಾಕುತ್ತಲೇ ಇರಲಿಲ್ಲ ಭಟ್ಟರೇ. ನನಗೆ ನಿಜವಾಗಿ ಆ ಜಾಗ ಬೇಡ. ಅವನೇ ಬಂದು ಗೋಗರೆದ ಕಾರಣ ನಾನು ಆಯ್ತು ಎಂದು ಹೇಳಿದೆನಷ್ಟೆ” ಎಂದಿದ್ದರು. ಭಟ್ಟರು ಆ ಜಾಗವನ್ನು ಬೇರೆ ಯಾರೂ ಕೊಂಡುಕೊಳ್ಳದ ಹಾಗೆ ಸ್ಥಳೀಯ ಪೇಪರಿನಲ್ಲಿ ಒಂದು ಎಚ್ಚರಿಕೆ ನೋಟೀಸನ್ನು ಕೊಡುವ ತಮ್ಮ ಯೋಜನೆಯನ್ನು ಹೇಳಿದಾಗ ಶೆಟ್ಟರು, “”ಕೊಡಿ! ಕೊಡಿ!” ಎಂದದ್ದಲ್ಲದೆ, “”ನಾನೂ ಶಾಮರಾಯನಿಗೆ ಸ್ವಲ್ಪ ಬುದ್ಧಿವಾದ ಹೇಳುತ್ತೇನೆ” ಎಂದಿದ್ದರು.
ಈಗ ಶಾಮರಾಯ ಮತ್ತೂ ಅಲ್ಲಿಯೇ ಕುಳಿತು ಗೋಗರೆಯತೊಡಗಿದಾಗ ಶೆಟ್ಟರು ಒಮ್ಮೆಗೇ ಸಿಟ್ಟಿಗೆದ್ದರು.

“”ಏನು ಶಾಮರಾಯ ನಿನ್ನ ಹುಡುಗಾಟಿಕೆ? ಜಾಗವನ್ನು ಶಿವರಾಯನಿಗೆ ಮಾರುವುದು ಬಿಟ್ಟು ಏನು ನಿನ್ನ ಅವತಾರ? ಅವನಿಗೆ ಮಾರಿದರೆ ನಿನ್ನ ದಿನದ ಖರ್ಚಿಗಾದರೂ ಏನಾದರೂ ಸಿಕ್ಕೀತು. ಇಲ್ಲದಿದ್ದರೆ ಹಾಳಾಗಿಹೋಗು” ಎಂದು ಗದರಿಸಿದರು. ಶಾಮರಾಯ ತುಂಬ ಹೊತ್ತು ಯೋಚಿಸುತ್ತಿದ್ದು ಕೊನೆಗೆ ಮೆಲ್ಲನೆ, “”ಶೆಟ್ರೇ, ನೀವೇ ಒಂದು ರಾಜಿ ಪಂಚಾತಿಕೆ ಮಾಡಿ ಜಾಗವನ್ನು ಶಿವರಾಯನೇ ತೆಗೆದುಕೊಳ್ಳುವಂತೆ ಮಾಡಿ. ನನಗೆ ಮೋಸ ಆಗಬಾರದು. ನಿಮ್ಮನ್ನೇ ನಂಬಿದ್ದೇನೆ” ಎಂದನು!
.
.
ಆಮೇಲೆ ಆದ ಎಗ್ರಿಮೆಂಟಿನಲ್ಲಿ ಶಾಮರಾಯನ ಜಾಗ ಶಿವರಾಯನಿಗೆ ಸೇರಿತು. ಜಾಗಕ್ಕೆ ನಿಶ್ಚಯಿಸಿದ ಬೆಲೆಯನ್ನು ಒಂದೇ ಗಂಟಿನಲ್ಲಿ ಕೊಡಲು ಶಿವರಾಯನಿಗೆ ಸಾಧ್ಯವಾಗದ ಕಾರಣ, ಶಾಮರಾಯನ ದಿನದ ಖರ್ಚಿಗೆಂದು ಶಿವರಾಯನು ದಿನಕ್ಕೆ ಐವತ್ತು ರೂಪಾಯಿಯಂತೆ ಪ್ರತಿದಿನ ಬೆಳಗ್ಗೆ ಕೊಟ್ಟು ತೀರಿಸಬೇಕೆಂದು ತೀರ್ಮಾನವಾಯಿತು. ಅದರಂತೆ ಶಾಮರಾಯನು ತಾನು ಬದುಕಿರುವವರೆಗೆ ಶಿವರಾಯನ ಮನೆಯಿಂದ ಐವತ್ತು ರೂಪಾಯಿಗಳನ್ನು ತೆಗೆದುಕೊಂಡು ತನ್ನ ಮಟ್ಟಿಗೆ ಚಿಂತೆಯಿಲ್ಲದೆ ಸುಖವಾಗಿಯೇ ಬದುಕಿದ.

ಬಿ. ಜನಾರ್ದನ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next