Advertisement

ಇದು ನಕ್ಕು ನಗಿಸುವ ಪಯಣ: ವೈಜಯಂತಿ ಪಾತ್ರದಲ್ಲಿ ಶ್ವೇತಾ ಮಿಂಚು

03:55 PM Apr 21, 2023 | Team Udayavani |

ನಟಿ ಶ್ವೇತಾ ಶ್ರೀವಾತ್ಸವ್‌ “ಸಿಂಪಲ್ಲಾಗೊಂದ ಲವ್‌ ಸ್ಟೋರಿ’ ಮೂಲಕ ಕನ್ನಡಿಗರ ಮನಗೆದ್ದ ಚೆಲುವೆ. ಕಳೆದ 5-6 ವರ್ಷಗಳಿಂದ ಮಗಳು, ಸಂಸಾರ ಎಂದು ಸಿನಿಮಾ ರಂಗದಿಂದ ದೂರವಿದ್ದ ನಟಿ ಇತ್ತೀಚೆಗೆ ಚಿತ್ರರಂಗದಲ್ಲಿ ಬಿಝಿಯಾಗುತ್ತಿದ್ದಾರೆ. ನವರಸನಾಯಕ ಜಗ್ಗೇಶ್‌ ಅಭಿನಯದ, ನಿರ್ದೇಶಕ ಸಂತೋಷ ಆನಂದ್‌ ರಾಮ್‌ ಹಾಗೂ ವಿಜಯ ಕಿರಗಂದೂರು ಕಾಂಬಿನೇಶನ್‌ನ ಚಿತ್ರ “ರಾಘವೇಂದ್ರ ಸ್ಟೋರ್’ ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, “ಉದಯವಾಣಿ’ಯೊಂದಿಗೆ ತಮ್ಮ ನೂತನ ಚಿತ್ರದ ಕುರಿತು ಮಾತನಾಡಿದ್ದಾರೆ

Advertisement

ದೊಡ್ಡ ಗ್ಯಾಪ್‌ನ ನಂತರ, ದೊಡ್ಡ ಮಟ್ಟದಲ್ಲಿ ಚಿತ್ರರಂಗಕ್ಕೆ ಮರಳುತ್ತಿದ್ದೀರಿ ಏನಂತೀರಿ?

ಮಗಳು ಹುಟ್ಟಿದ ನಂತರ ಚಿತ್ರರಂಗದಿಂದ ಬ್ರೇಕ್‌ ತೆಗೆದುಕೊಂಡಿದ್ದ ನಾನು, ಮಗಳ ಪಾಲನೆಯಲ್ಲಿ ಬಿಝಿಯಾಗಿದ್ದೆ. ಆಗಷ್ಟೇ ಮತ್ತೆ ಚಿತ್ರರಂಗಕ್ಕೆ ಮರಳಬೇಕು ಅನ್ನುವಾಗ ಈ ಅವಕಾಶ ಬಂತು. ಈ ಥರದ ಅವಕಾಶ, ಇಷ್ಟು ದೊಡ್ಡ ಬ್ಯಾನರ್‌, ಉತ್ತಮ ಚಿತ್ರತಂಡ ನನಗೆ ಸಿಗುತ್ತೆ ಎಂದು ಎಣಿಸಿರಲಿಲ್ಲ. ಅದರಲ್ಲೂ ಒಂದು ಉತ್ತಮ ಕಥೆ ಜೊತೆ ಮರಳುತ್ತಿರುವುದು ಸಂತೋಷ.

ನಿಮ್ಮ ಪಾತ್ರದ ಬಗ್ಗೆ ಹೇಳಿ?

ಚಿತ್ರದಲ್ಲಿ ವೈಜಯಂತಿ ಎನ್ನುವ ಪಾತ್ರದಲ್ಲಿ ಕಾಣಿಕೊಳ್ಳಲಿದ್ದೇನೆ. ವೈಜಯಂತಿ ಓರ್ವ ಸಂಗೀತಗಾರ್ತಿ. ಜಗ್ಗೇಶ್‌ ಅವರ ಹೆಂಡತಿ ಪಾತ್ರದಲ್ಲಿ, ಅಪ್ಪಟ ಗೃಹಿಣಿಯಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ನನಗೆ ಪ್ರಾಮುಖ್ಯತೆ ಇದೆ. ನವರಸಗಳನ್ನು ತೋರ್ಪಡಿಸುವ ಅವಕಾಶ ಇಲ್ಲಿತ್ತು. ಚಿತ್ರದಲ್ಲಿ ವಿಭಿನ್ನ ಶೇಡ್‌ನ‌ಲ್ಲಿ ಕಾಣಿಸಿಕೊಂಡಿದ್ದೇನೆ. ಕಾಮಿಡಿ, ಎಮೋಷನ್ಸ್‌, ರೊಮ್ಯಾನ್ಸ್‌, ಗ್ಲಾಮರ್‌ ಎಲ್ಲವೂ ಇದೆ.

Advertisement

ಜಗ್ಗೇಶ್‌ ಜೊತೆಗೆ ಅಭಿನಯಿಸಿದ ಅನುಭವ ?

ಜಗ್ಗೇಶ್‌ ಸರ್‌ ಒಂದು ಲಿವಿಂಗ್‌ ಲೆಜೆಂಡ್‌. ಸೆಟ್‌ನಲ್ಲಿ ಕಾಮಿಡಿ ಮಾಡ್ತಾ ಕೆಲಸ ಮಾಡ್ತಾರೆ. ಅವರ ಸೆನ್ಸ್‌ ಆಫ್ ಹ್ಯೂಮರ್‌ ಸಖತ್‌ ಇಷ್ಟ. ಎಲ್ಲರೂ ಅವರನ್ನು ಇಷ್ಟಪಡ್ತಾರೆ. ನನ್ನ ಮಗಳು ಸಹ ಶೂಟಿಂಗ್‌ಗೆ ಬರುತ್ತಿದ್ದಳು. ಅವಳನ್ನೂ ಸಹ ಅಷ್ಟೇ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಜಗ್ಗೇಶ್‌ ಅವರ ಜೀವನ, ಆಧ್ಯಾತ್ಮದ ಕುರಿತು ಮಾತನಾಡುವ ಬಗೆ, ಕಥೆ ಹೇಳುವ ಬಗೆ ನನಗೆ ತುಂಬಾ ಇಷ್ಟ. ಅವರ ಕೆಲಸ ಮಾಡುವ ಪರಿ ನಮಗೂ ಒಂದು ಸ್ಫೂರ್ತಿ.

“ರಾಘವೇಂದ್ರ ಸ್ಟೋರ್ ‘ನ ಸಾರಾಂಶ ?

ಒಂದು ವಿಭಿನ್ನವಾದ ಚಿತ್ರ ರಾಘವೇಂದ್ರ ಸ್ಟೋರ್ . ಒಂದು ಸೂಕ್ಷ್ಮ ವಿಷಯವನ್ನು ನಕ್ಕು ನಗಿಸುವ ರೀತಿಯಲ್ಲಿ ಹೇಳುವುದು ಸುಲಭದ ಕೆಲಸವಲ್ಲ. ಆ ಕೆಲಸವನ್ನು ಈ ಚಿತ್ರ ಮಾಡುತ್ತಿದೆ. ಎಲ್ಲಾ ವರ್ಗದ ಪ್ರೇಕ್ಷಕರು ಕುಳಿತು ನೋಡುವಂತ ಚಿತ್ರ. ಪ್ರತಿಯೊಂದು ಸಂಸಾರದಲ್ಲೂ ನಡೆಯುವ ಕಥೆಯಾದ್ದರಿಂದ, ಎಲ್ಲಾ ಸಾಮಾನ್ಯ ಜನರಿಗೂ ಚಿತ್ರ ತುಂಬಾ ಹತ್ತಿರವಾಗುತ್ತದೆ.

ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಸಿಕ್ಕ ಅವಕಾಶದ ಬಗ್ಗೆ ಏನು ಹೇಳ್ತಿರಾ?

ಆಗಷ್ಟೇ ಕೆ.ಜಿ.ಎಫ್ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿ ಎಲ್ಲೆಡೆ ಮನೆಮಾತಾಗಿತ್ತು. ಹೊಂಬಾಳೆ ಫಿಲಂಸ್‌ ನಿಂದ ಯೋಗಿ ಹಾಗೂ ಸಂತೋಷ ಅವರು ಕರೆ ಮಾಡಿದಾಗ ಆಶ್ಚರ್ಯ, ಸಂತೋಷ ಎಲ್ಲವೂ ಆಗಿತ್ತು. ನನ್ನ ಮಗಳ ಅದೃಷ್ಟವೋ ಏನೋ ಮತ್ತೆ ಚಿತ್ರರಂಗಕ್ಕೆ ಮರಳಬೇಕು ಎನ್ನುವಾಗ ಹೊಂಬಾಳೆಯಂಥಹ ಚಿತ್ರ ಸಂಸ್ಥೆ ನನಗೆ ಅವಕಾಶ ನೀಡಿದ್ದು, ಇದು ನಿಜಕ್ಕೂ ನನ್ನ ಪಾಲಿನ ಅದೃಷ್ಟ.

ವಾಣಿ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next