“ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಹೇಗೆಲ್ಲ ನಡೆಯುತ್ತದೆ. ಅದರಿಂದ ಆಡಳಿತದ ಮೇಲೆ ಏನೆಲ್ಲ ಪರಿಣಾಮ ಬೀರುತ್ತದೆ. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವಾಗ ಏನೇನು, ಸಮಸ್ಯೆ-ಸವಾಲುಗಳನ್ನು ಎದುರಿಸುತ್ತಾರೆ. ವ್ಯವಸ್ಥೆಯೊಳಗೆ ಅವರ ಹೋರಾಟ ಹೇಗಿರುತ್ತದೆ ಅನ್ನೋದು ನನ್ನ ಪಾತ್ರ. ನಮ್ಮ ಸುತ್ತಮುತ್ತ ನಡೆಯುವ, ಆಗಾಗ ಮಾಧ್ಯಮಗಳಲ್ಲೂ ವರದಿಯಾಗುವ ಒಂದು ಗಂಭೀರ ವಿಷಯವನ್ನು ನನ್ನ ಪಾತ್ರದ ಮೂಲಕ ತೆರೆಮೇಲೆ ಹೇಳಲಾಗುತ್ತಿದೆ. ಎಲ್ಲರಿಗೂ ಕನೆಕ್ಟ್ ಆಗುವಂಥ ಸಬೆjಕ್ಟ್ ಮತ್ತು ಕ್ಯಾರೆಕ್ಟರ್ ಸಿನಿಮಾದಲ್ಲಿರುವುದರಿಂದ ಆಡಿಯನ್ಸ್‌ಗೆ ಈ ಸಿನಿಮಾ ಇಷ್ಟವಾಗುತ್ತದೆ ಎಂಬ “ಹೋಪ್’ ನಮಗೂ ಇದೆ’ ಇದು ಇಂದು ತೆರೆಗೆ ಬರುತ್ತಿರುವ “ಹೋಪ್’ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ನಾಯಕಿ ಶ್ವೇತಾ ಶ್ರೀವಾತ್ಸವ್ ಮಾತು.
ಹೌದು, ಸುಮಾರು ಐದು ವರ್ಷದ ಬಳಿಕ ಶ್ವೇತಾ ಶ್ರೀವಾತ್ಸವ್ ನಾಯಕಿಯಾಗಿ ಅಭಿನಯಿಸಿರುವ ಪೊಲಿಟಿಕಲ್ ಥ್ರಿಲ್ಲರ್ ಕಥಾಹಂದರದ “ಹೋಪ್’ ಸಿನಿಮಾ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಇದೇ ವೇಳೆ ಮಾತಿಗೆ ಸಿಕ್ಕ ಶ್ವೇತಾ, “ಹೋಪ್’ ಸಿನಿಮಾದ ಬಗ್ಗೆ ಒಂದಷ್ಟು ವಿಷಯ ಹಂಚಿಕೊಂಡರು.
“ನನ್ನ ಮಗಳ ಆರೈಕೆ, ಲಾಲನೆ-ಪಾಲನೆಗಾಗಿ ಎರಡು-ಮೂರು ವರ್ಷ ತೆಗೆದಿಡಬೇಕಾಯ್ತು. ಅದೆಲ್ಲ ಆದ ನಂತರವೂ ಮತ್ತೆ ಸಿನಿಮಾದಲ್ಲಿ ಆ್ಯಕ್ಟಿವ್ ಆಗಬೇಕು ಅಂದುಕೊಂಡಾಗ ನನಗೆ ಸಿಕ್ಕ ಸಬ್ಜೆಕ್ಟ್ “ಹೋಪ್’ ಸಿನಿಮಾದ್ದು. ನನ್ನ ಸಿನಿಮಾ ಕೆರಿಯರ್‌ನಲ್ಲಿ ಇಲ್ಲಿಯವರೆಗೆ ಮಾಡಿದ ಪಾತ್ರಗಳಿಗಿಂತ ಸಂಪೂರ್ಣ ವಿಭಿನ್ನವಾಗಿರುವಂಥ ಸಬ್ಜೆಕ್ಟ್ ಮತ್ತು ಕ್ಯಾರೆಕ್ಟರ್ ಎರಡೂ ಈ ಸಿನಿಮಾದಲ್ಲಿದೆ. ಇದರಲ್ಲಿ ನಾನು ಸಿವಿಲ್ ಸರ್ವೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ತನ್ನ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಮಾಡುವ ದಕ್ಷ ಅಧಿಕಾರಿ ಪಾತ್ರ ನನ್ನದು. ತುಂಬ ಯಾವುದಕ್ಕೂ ಸ್ಟ್ರಾಂಗ್ ಆಗಿರುವಂಥ, ಬೇರೆ ಬೇರೆ ಶೇಡ್ ಇರುವಂಥ, ಒಂದಷ್ಟು ಮಹಿಳೆಯರಿಗೆ ಮಾದರಿ ಆಗಿರುವಂಥ ಪಾತ್ರ ಈ ಸಿನಿಮಾದಲ್ಲಿ ಸಿಕ್ಕಿದೆ’ ಎನ್ನುತ್ತಾರೆ ಶ್ವೇತಾ.
“ಗೋಲ್ಡಿ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ವರ್ಷಾ ಸಂಜೀವ್ ನಿರ್ಮಾಣದಲ್ಲಿ ಮೂಡಿಬಂದಿರುವ “ಹೋಪ್’ ಚಿತ್ರಕ್ಕೆ ಅಂಬರೀಶ್ ಎಂ. ನಿರ್ದೇಶನವಿದೆ. “ಅಭಿಜಿತ್ ಎಂಟರ್‌ಪ್ರೈಸಸ್’ ಚಿತ್ರದ ಬಿಡುಗಡೆ ಮಾಡುತ್ತಿದ್ದು, ಸುಮಾರು 80ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ “ಹೋಪ್’ ತೆರೆಗೆ ಬರುತ್ತಿದೆ.
ಚಿತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ಅವರೊಂದಿಗೆ ಸುಮಲತಾ ಅಂಬರೀಶ್, ಪ್ರಮೋದ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಗೋಪಾಲಕೃಷ್ಣ ದೇಶಪಾಂಡೆ, ಅಶ್ವಿನ್ ಹಾಸನ್ ಮೊದಲಾದ ವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ “ಹೋಪ್’ ಟ್ರೇಲರ್ ಗಮನ ಸೆಳೆಯುತ್ತಿದ್ದು, ಸಿನಿಮಾ ಥಿಯೇಟರ್‌ನಲ್ಲಿ ಹೇಗಿರಲಿದೆ ಅನ್ನೋದು ಈ ವಾರಾಂತ್ಯದಲ್ಲಿ ಗೊತ್ತಾಗಲಿದೆ.
ಜಿ.ಎಸ್.ಕಾರ್ತಿಕ ಸುಧನ್