Advertisement

ಯಾವ ಕ್ರಮಾಂಕವಾದರೂ ಓಕೆ: ಗಿಲ್‌

10:53 AM May 01, 2019 | Team Udayavani |

ಕೋಲ್ಕತಾ: ಶುಭಮನ್‌ ಗಿಲ್‌ ಮತ್ತೂಂದು ಅರ್ಧ ಶತಕ ಬಾರಿಸಿ ಮಿಂಚಿದ್ದಾರೆ. ಮುಂಬೈ ವಿರುದ್ಧ ಈಡನ್‌ನಲ್ಲಿ ನಡೆದ ದೊಡ್ಡ ಮೊತ್ತದ ಮೇಲಾಟದಲ್ಲಿ ಅವರು 45 ಎಸೆತಗಳಿಂದ ಜೀವನಶ್ರೇಷ್ಠ 76 ರನ್‌ ಸಿಡಿಸಿದರು. ಈ ಬಾರಿ ಕೇವಲ 3ನೇ ಸಲ ಇನ್ನಿಂಗ್ಸ್‌ ಆರಂಭಿಸಿದ ಅವರಿಂದ ದಾಖಲಾದ 2ನೇ ಅರ್ಧ ಶತಕ ಇದಾಗಿದೆ.

Advertisement

ಹಾಗಾದರೆ 19ರ ಹರೆಯದ, ರಣಜಿಯಲ್ಲಿ ಪಂಜಾಬ್‌ ತಂಡವನ್ನು ಪ್ರತಿನಿಧಿಸುವ ಶುಭಮನ್‌ ಗಿಲ್‌ ಅವರಿಗೆ ಓಪನಿಂಗ್‌ ಕ್ರಮಾಂಕ ವೆಂದರೆ ಹೆಚ್ಚು ಖುಷಿಯೇ ಎಂಬ ಕುತೂಹಲ ಹುಟ್ಟುವುದು ಸಹಜ. ಇದಕ್ಕೆ ಪ್ರತಿಕ್ರಿಯಿಸಿದ ಗಿಲ್‌, ತನಗೆ ಯಾವ ಕ್ರಮಾಂಕ ವಾದರೂ ಸೈ ಎಂದಿದ್ದಾರೆ.

“ಓಪನಿಂಗ್‌ ನನ್ನ ನೆಚ್ಚಿನ ಕ್ರಮಾಂಕ ನಿಜ. ಆದರಿಲ್ಲಿ ಲಿನ್‌- ನಾರಾಯಣ್‌ ಉತ್ತಮ ಆರಂಭ ನೀಡುತ್ತ ಇದ್ದಾರೆ. ನನಗೊಂದು ಅವಕಾಶ ಸಿಕ್ಕಿತು. ಇದನ್ನು ಬಳಸಿಕೊಂಡೆ. ನಾನು ಯಾವ ಕ್ರಮಾಂಕದಲ್ಲೂ ಬ್ಯಾಟಿಂಗ್‌ ಮಾಡಬಲ್ಲೆ…’ ಎಂದು ಗಿಲ್‌ ಹೇಳಿದರು.

“ಇದು ನನ್ನ ಅತ್ಯುತ್ತಮ ಐಪಿಎಲ್‌ ಇನ್ನಿಂಗ್ಸ್‌ಗಳಲ್ಲಿ ಒಂದು. ಎಲ್ಲರೂ ಸತತ 6 ಸೋಲುಗಳಿಂದ ಹತಾಶರಾಗಿದ್ದ ವೇಳೆ ಈ ಬ್ಯಾಟಿಂಗ್‌ ದಾಖಲಾಗಿದೆ. ಹೀಗಾಗಿ ಇದರ ಮಹತ್ವ ಸಹಜವಾಗಿಯೇ ಹೆಚ್ಚು’ ಎಂದು ಗಿಲ್‌ ಅಭಿಪ್ರಾಯಪಟ್ಟರು.

ಪಾಂಡ್ಯ ಸ್ಫೋಟಕ ಆಟ
ಈಡನ್‌ ಪಂದ್ಯದಲ್ಲಿ ಮೊದಲು ಬ್ಯಾಟ್‌ ಬೀಸಿದ ಕೆಕೆಆರ್‌ 2 ವಿಕೆಟಿಗೆ 232 ರನ್‌ ರಾಶಿ ಹಾಕಿದರೆ, ಮುಂಬೈ 7 ವಿಕೆಟಿಗೆ 198 ರನ್‌ ತನಕ ಬಂದು ಸೋಲೊಪ್ಪಿಕೊಂಡಿತು. ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಹಾರ್ದಿಕ್‌ ಪಾಂಡ್ಯ 34 ಎಸೆತಗಳಿಂದ 91 ರನ್‌ ಸಿಡಿಸಿದರು (9 ಸಿಕ್ಸರ್‌, 6 ಬೌಂಡರಿ). ಇವರ ಅಬ್ಬರದ ವೇಳೆ ಮುಂಬೈ ಅಮೋಘ ಜಯವೊಂದನ್ನು ಒಲಿಸಿಕೊಳ್ಳುವ ಸಾಧ್ಯತೆ ಇದ್ದದ್ದು ಸುಳ್ಳಲ್ಲ.

Advertisement

ಸಂಕ್ಷಿಪ್ತ ಸ್ಕೋರ್‌: ಕೆಕೆಆರ್‌-2 ವಿಕೆಟಿಗೆ 232. ಮುಂಬೈ-7 ವಿಕೆಟಿಗೆ 198 (ಹಾರ್ದಿಕ್‌ ಪಾಂಡ್ಯ 91, ಸೂರ್ಯಕುಮಾರ್‌ 26, ಕೃಣಾಲ್‌ ಪಾಂಡ್ಯ 24, ಪೊಲಾರ್ಡ್‌ 20, ರಸೆಲ್‌ 25ಕ್ಕೆ 2, ಗರ್ನಿ 37ಕ್ಕೆ 2, ನಾರಾಯಣ್‌ 44ಕ್ಕೆ 2). ಪಂದ್ಯಶ್ರೇಷ್ಠ: ಆ್ಯಂಡ್ರೆ ರಸೆಲ್‌.

ರಸೆಲ್‌ ಸ್ಮರಣೀಯ ಬರ್ತ್‌ಡೇ
40 ಎಸೆತಗಳಿಂದ ಅಜೇಯ 80 ರನ್‌, ಜತೆಗೆ 2 ವಿಕೆಟ್‌ ಬೇಟೆ, ಪಂದ್ಯಶ್ರೇಷ್ಠ ಗೌರವ, ಕೆಲವೇ ಗಂಟೆಗಳಲ್ಲಿ ಬರ್ತ್‌ಡೇ ಸಂಭ್ರಮ! ಇಂಥದೊಂದು ಸ್ಮರಣೀಯಗಳಿಗೆ ಎದುರಾದದ್ದು ಕೆಕೆಆರ್‌ ತಂಡದ ಬಿಗ್‌ ಹಿಟ್ಟರ್‌ ಆ್ಯಂಡ್ರೆ ರಸೆಲ್‌ ಅವರಿಗೆ. ಅವರು ಸೋಮವಾರ 32ನೇ ವರ್ಷಕ್ಕೆ ಕಾಲಿಟ್ಟರು.
ಇದನ್ನು ರಸೆಲ್‌ ಇನ್ನೂ ಒಂದು ರೀತಿಯಲ್ಲಿ ಸ್ಮರಣೀಯಗೊಳಿಸಿದರು. ಕೆಕೆಆರ್‌ನ ಪ್ರತಿಯೊಂದು ಪಂದ್ಯದ ವೇಳೆಯೂ ತಪ್ಪದೇ “ಈಡನ್‌ ಗಾರ್ಡನ್ಸ್‌’ಗೆ ಆಗಮಿ ಸುವ ವಿಶೇಷ ಅಭಿಮಾನಿ, ಮೆದುಳಿನ ಲಕ್ವಕ್ಕೊಳಗಾಗಿರುವ ಹಷುìಲ್‌ ಗೋಯೆಂಕಾ ಅವರನ್ನು ಭೇಟಿಯಾಗಿ ಕೈ ಕುಲುಕಿದರು. ಅವರೊಂದಿಗೆ ಫೋಟೋ ಕೂಡ ತೆಗೆಸಿಕೊಂಡರು. ಡ್ರೆಸ್ಸಿಂಗ್‌ ರೂಮ್‌ನಲ್ಲೂ ಬರ್ತ್‌ಡೇ ಆಚರಣೆ ಜೋರಾಗಿತ್ತು. ಕೆಕೆಆರ್‌ ಕ್ರಿಕೆಟಿಗರ ಸಮ್ಮುಖದಲ್ಲಿ ರಸೆಲ್‌ ಕೇಕ್‌ ಕತ್ತರಿಸಿದರು. ಆಟಗಾರರೆಲ್ಲ ರಸೆಲ್‌ ಮುಖಕ್ಕೆ ಕೇಕ್‌ ಮೆತ್ತಿ ಶುಭಾಶಯ ಸಲ್ಲಿಸಿದರು. ರಸೆಲ್‌ ಪತ್ನಿ ಜಾಸ್ಸಿಮ್‌ ಲೋರಾ ಕೂಡ ಈ ಸಂಭ್ರಮದ ಗಳಿಗೆಗೆ ಸಾಕ್ಷಿಯಾದರು.

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಕೆಕೆಆರ್‌ ತವರಿನ ಈಡನ್‌ ಗಾರ್ಡನ್ಸ್‌ನಲ್ಲಿ ಸತತ 4 ಪಂದ್ಯಗಳ ಸೋಲಿನಿಂದ ಹೊರಬಂತು. ಹಾಗೆಯೇ ಒಟ್ಟಾರೆಯಾಗಿ ತನ್ನ 2ನೇ ಅತೀ ದೊಡ್ಡ ಸೋಲಿನ ಸರಪಳಿಯನ್ನೂ ಕಡಿದುಕೊಂಡಿತು (ಸತತ 6 ಪಂದ್ಯ).
* ಮುಂಬೈ ಎದುರಿನ ಕಳೆದ 9 ಪಂದ್ಯಗಳಲ್ಲಿ ಕೆಕೆಆರ್‌ ಮೊದಲ ಜಯ ಸಾಧಿಸಿತು. ಮುಂಬೈ ವಿರುದ್ಧ ಕೆಕೆಆರ್‌ ಕೊನೆಯ ಜಯ ದಾಖಲಿಸಿದ್ದು 2015ರ ಕೋಲ್ಕತಾ ಪಂದ್ಯದಲ್ಲಿ.
* ಕೆಕೆಆರ್‌ 100ನೇ ಟಿ20 ಗೆಲುವು ದಾಖಲಿಸಿತು. ಕೆಕೆಆರ್‌ ಈ ಸಾಧನೆಗೈದ ವಿಶ್ವದ 6ನೇ ಹಾಗೂ ಐಪಿಎಲ್‌ನ 3ನೇ ತಂಡ. ಉಳಿದ 5 ತಂಡಗಳೆಂದರೆ ಮುಂಬೈ ಇಂಡಿಯನ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌, ಲಂಕಾಶೈರ್‌, ನಾಟಿಂಗಂಶೈರ್‌ ಮತ್ತು ವಾರ್ವಿಕ್‌ಶೈರ್‌.
* ಕೆಕೆಆರ್‌ ತನ್ನ 2ನೇ ಸರ್ವಾಧಿಕ ಸ್ಕೋರ್‌ ದಾಖಲಿಸಿತು (2ಕ್ಕೆ 232). ಕಳೆದ ವರ್ಷ ಪಂಜಾಬ್‌ ವಿರುದ್ಧ 6ಕ್ಕೆ 245 ರನ್‌ ಪೇರಿಸಿದ್ದು ದಾಖಲೆ.
* ಮುಂಬೈ ವಿರುದ್ಧ ಕೆಕೆಆರ್‌ ಅತೀ ಹೆಚ್ಚು ರನ್‌ ಪೇರಿಸಿದ 2ನೇ ತಂಡವೆನಿಸಿತು. 2015ರಲ್ಲಿ ಆರ್‌ಸಿಬಿ ಒಂದಕ್ಕೆ 235 ರನ್‌ ಗಳಿಸಿದ್ದು ದಾಖಲೆ.
* ಕೆಕೆಆರ್‌ “ಈಡನ್‌ ಗಾರ್ಡನ್ಸ್‌’ನಲ್ಲಿ ಅತ್ಯಧಿಕ ರನ್‌ ಗಳಿಸಿದ ದಾಖಲೆ ಬರೆಯಿತು (2ಕ್ಕೆ 232). ಇದೇ ಋತುವಿನಲ್ಲಿ ಪಂಜಾಬ್‌ ವಿರುದ್ಧ 4ಕ್ಕೆ 218 ರನ್‌ ಪೇರಿಸಿದ ತನ್ನದೇ ದಾಖಲೆಯನ್ನು ಮುರಿಯಿತು.
* ಐಪಿಎಲ್‌ನಲ್ಲಿ ಕೇವಲ 3ನೇ ಸಲ ಇನ್ನಿಂಗ್ಸ್‌ ಒಂದರಲ್ಲಿ 3 ಮಂದಿ 50 ಪ್ಲಸ್‌ ರನ್‌ ಬಾರಿಸಿದರು (ಗಿಲ್‌, ಲಿನ್‌ ಮತ್ತು ರಸೆಲ್‌).
* ಆ್ಯಂಡ್ರೆ ರಸೆಲ್‌ ಈ ಐಪಿಎಲ್‌ನಲ್ಲಿ 50 ಸಿಕ್ಸರ್‌ ಸಿಡಿಸಿದರು. ಇದು ಐಪಿಎಲ್‌ ಋತುವೊಂದರಲ್ಲಿ ಆಟಗಾರನೊಬ್ಬ ಬಾರಿಸಿದ 3ನೇ ಅತ್ಯಧಿಕ ಸಂಖ್ಯೆಯ ಸಿಕ್ಸರ್‌ ದಾಖಲೆ. ಕ್ರಿಸ್‌ ಗೇಲ್‌ 2012 ಮತ್ತು 2013ರಲ್ಲಿ ಕ್ರಮವಾಗಿ 59 ಮತ್ತು 51 ಸಿಕ್ಸರ್‌ ಬಾರಿಸಿದ್ದರು. ಈ ದಾಖಲೆ ಮುರಿಯುವ ಅವಕಾಶ ರಸೆಲ್‌ ಮುಂದಿದೆ.
* ಹಾರ್ದಿಕ್‌ ಪಾಂಡ್ಯ 6ನೇ ಹಾಗೂ ಇದಕ್ಕಿಂತ ಕೆಳ ಕ್ರಮಾಂಕದಲ್ಲಿ ಅತ್ಯಧಿಕ ರನ್‌ ಬಾರಿಸಿದ ಐಪಿಎಲ್‌ ದಾಖಲೆ ಬರೆದರು (91). ಕಳೆದ ವರ್ಷ ಚೆನ್ನೈ ವಿರುದ್ಧ ರಸೆಲ್‌ ಅಜೇಯ 88 ರನ್‌ ಹೊಡೆದ ದಾಖಲೆ ಪತನಗೊಂಡಿತು.
* ಪಾಂಡ್ಯ 267.64ರ ಸ್ಟ್ರೈಕ್‌ರೇಟ್‌ ದಾಖಲಿಸಿದರು. ಇದು 30 ಪ್ಲಸ್‌ ರನ್‌ ಗಳಿಕೆಯ ವೇಳೆ ದಾಖಲಾದ 3ನೇ ಅತ್ಯುತ್ತಮ ಸ್ಟ್ರೈಕ್‌ರೇಟ್‌.
* ಪಾಂಡ್ಯ ಮುಂಬೈ ಪರ ಅತೀ ಕಡಿಮೆ ಎಸೆತಗಳಲ್ಲಿ (17) ಅರ್ಧ ಶತಕ ಬಾರಿಸಿದ 3ನೇ ಆಟಗಾರ. 2016ರಲ್ಲಿ ಕೈರನ್‌ ಪೊಲಾರ್ಡ್‌, 2018ರಲ್ಲಿ ಇಶಾನ್‌ ಕಿಶನ್‌ ಕೂಡ 17 ಎಸೆತಗಳಲ್ಲಿ ಅರ್ಧ ಶತಕ ಹೊಡೆದಿದ್ದರು. ಮೂವರೂ ಕೆಕೆಆರ್‌ ವಿರುದ್ಧವೇ ಈ ಸಾಧನೆ ಮಾಡಿದ್ದು ಕಾಕತಾಳೀಯ.
* ಹಾರ್ದಿಕ್‌ ಪಾಂಡ್ಯ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್‌ ಉರುಳಿಸುವ ಜತೆಗೆ 2 ಸಾವಿರ ರನ್‌ ಪೂರ್ತಿಗೊಳಿಸಿದರು. ಅವರು ಈ ಸಾಧನೆಗೈದ ಭಾರತದ 2ನೇ ಕ್ರಿಕೆಟಿಗ. ರವೀಂದ್ರ ಜಡೇಜ ಮೊದಲಿಗ.
* ರೋಹಿತ್‌ ಶರ್ಮ 100 ಐಪಿಎಲ್‌ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ 4ನೇ ಕ್ರಿಕೆಟಿಗನೆನಿಸಿದರು. ಧೋನಿ, ಗಂಭೀರ್‌ ಮತ್ತು ಕೊಹ್ಲಿ ಉಳಿದ ಮೂವರು.
* ಪೀಯೂಷ್‌ ಚಾವ್ಲಾ ಐಪಿಎಲ್‌ನಲ್ಲಿ 150 ವಿಕೆಟ್‌ ಉರುಳಿಸಿದ 3ನೇ, ಭಾರತದ 2ನೇ ಬೌಲರ್‌ ಎನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next