ಶೃಂಗೇರಿ: ಮಂಗಳೂರಿನಿಂದ ಶಿವಮೊಗ್ಗಕ್ಕೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 169ರ ರಸ್ತೆ ಸೇತುವೆಗಳಿಗೆ ವಾಹನಗಳು ಡಿಕ್ಕಿ ಹೊಡೆದು ಸೇತುವೆಗೆ ಧಕ್ಕೆಯಾಗುತ್ತಿದೆ. ಅಲ್ಲದೇ, ನಿರಂತರ ಅಪಘಾತಗಳು ಸಂಭವಿಸಿ ಸಾವು-ನೋವುಗಳಿಗೆ ಕಾರಣವಾಗುತ್ತಿದ್ದರೂ ಸರ್ಕಾರ ಸೇತುವೆಗಳ ದುರಸ್ತಿಗೆ ಮುಂದಾಗಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
Advertisement
ಶೃಂಗೇರಿ-ಕೊಪ್ಪ, ಶೃಂಗೇರಿ-ಕೆರೆಕಟ್ಟೆ ಮಾರ್ಗದಲ್ಲಿರುವ 10ಕ್ಕೂ ಹೆಚ್ಚು ಸೇತುವೆಗಳು ತೀವ್ರ ಜಖಂಗೊಂಡಿದ್ದು, ರಾಜ್ಯದಲ್ಲಿ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣವಾಗಿರುವ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಪರಿಸ್ಥಿತಿ ಕಿಂಚಿತ್ ಸುಧಾರಿಸಿಲ್ಲ ಎಂಬುದು ವಾಹನ ಮಾಲಿಕರ ಆಕ್ರೋಶವಾಗಿದೆ.
Related Articles
Advertisement
ರಸ್ತೆ ವಿಸ್ತರಣೆಗೆ ವಿರೋಧ: ಈ ಭಾಗದ ರಸ್ತೆ ಮತ್ತು ಸೇತುವೆ ದುರಸ್ತಿಗೆ ರಾಷ್ಟ್ರೀಯ ಉದ್ಯಾನದ ವಿರೋಧ ಇರುವ ಕಾರಣ ರಸ್ತೆ ಅಭಿವೃದ್ಧಿಗೊಳ್ಳುತ್ತಿಲ್ಲ. ಈ ಮಾರ್ಗ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯೊಳಗೆ ಬರುವುದರಿಂದ ವನ್ಯ ಜೀವಿಗಳಿಗೆ ತೊಂದರೆಯಾಗುತ್ತಿದೆ ಎಂಬ ನೆಪವೊಡ್ಡಿ ವನ್ಯಜೀವಿ ಇಲಾಖೆ ಇಲ್ಲಿನ ರಸ್ತೆ ಅಗಲೀಕರಣ, ರಸ್ತೆ ದುರಸ್ತಿ, ಸೇತುವೆ ದುರಸ್ತಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಪಡಿಸುತ್ತಲೇ ಬಂದಿದೆ. ಇತ್ತ ಹೆದ್ದಾರಿ ಪ್ರಾಧಿಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯವಹಿಸುತ್ತಲೇ ಬಂದಿದ್ದಾರೆ. ವನ್ಯಜೀವಿ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರದ ಜಂಗಿಕುಸ್ತಿ ನಡುವೆ ರಸ್ತೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಜನಪ್ರತಿನಿಧಿಗಳು ಇದು ರಾಜ್ಯ ಸರ್ಕಾರ, ಇದು ಕೇಂದ್ರ ಸರ್ಕಾರ ಅಧೀನದ್ದೆಂದು ಹೇಳಿ ಹಗ್ಗಾಜಗ್ಗಾಟ ಮಾಡುತ್ತಿದ್ದರೆ,
ಹೆದ್ದಾರಿ ಪ್ರಾಧಿಕಾರದವರು ವನ್ಯಜೀವಿ ಇಲಾಖೆ ಅಡ್ಡಿ ಎಂದು ತೋರಿಸುತ್ತಿವೆ. ವನ್ಯಜೀವಿ ಇಲಾಖೆ ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ ಎಂಬ ಸಬೂಬು ಹೇಳುತ್ತಿವೆ. ಒಟ್ಟಾರೆ ಪರಿಣಾಮ ಪ್ರತಿನಿತ್ಯ ಇಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಲೇ ಇವೆ. ಹೆಸರಿಗೆ ಮಾತ್ರ ರಾಷ್ಟ್ರೀಯ ಹೆದ್ದಾರಿಯಾದರೂ ಇಲ್ಲಿನ ತಿರುವುಗಳಿಂದ ಕೂಡಿದ ಇಕ್ಕಟ್ಟಾದ ರಸ್ತೆಯಲ್ಲಿ ಏಕಮುಖ ಸಂಚಾರ ಮಾತ್ರ ಸಾಧ್ಯ ಒಮ್ಮೆಲೆ ವಾಹನಗಳು ಎದುರು ಬದುರಾದರೆ ಅಪಘಾತ ಸಂಭವಿಸುವುದು ನಿಶ್ಚಿತವಾಗಿದೆ.