Advertisement

ಆದೇಶ ಹಿಂಪಡೆಯುವ ತನಕ ಹೋರಾಟ: ಕೊಂಡೆವೂರು ಶ್ರೀ

06:15 AM May 26, 2018 | |

ಕಾಸರಗೋಡು: ಅಚ್ಚಗನ್ನಡ ಪ್ರದೇಶವಾದ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ಮಲಯಾಳ ಭಾಷೆ ಹೇರಿಕೆಯ ಮೂಲಕ ಕನ್ನಡ ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಹತ್ತಿಕ್ಕಲು ಪ್ರಯತ್ನಿಸುವ ಕೇರಳ ಸರಕಾರದ ಧೋರಣೆಯ ವಿರುದ್ಧ ಕಾಸರಗೋಡಿನ ಕನ್ನಡಿಗರು ಒಗ್ಗೂಡಿ ನಡೆಸಿದ ಹೋರಾಟ ಇಲ್ಲಿಗೆ ಕೊನೆಯಾಗುವುದಿಲ್ಲ. ಕಾಸರಗೋಡು ಪ್ರದೇಶದಲ್ಲಿ ಮಲಯಾಳ ಹೇರಿಕೆಯನ್ನು ಹಿಂಪಡೆಯುವ ತನಕ ಹೋರಾಟ ನಿಲ್ಲದು ಎಂದು ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಹೇಳಿದರು.

Advertisement

ಕೇರಳ ಸರಕಾರ ಜಾರಿಗೆ ತಂದಿರುವ ಒಂದನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ಮಲಯಾಳ ಕಡ್ಡಾಯ ಕಲಿಕೆಯನ್ನು ಪ್ರತಿಭಟಿಸಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ಆಯೋಜಿಸಿದ ಒಂದು ವಾರ ಧರಣಿ ಸತ್ಯಾಗ್ರಹದ ಮೂರನೇ ದಿನವಾದ ಶುಕ್ರವಾರ ಆಶೀರ್ವದಿಸುತ್ತ ಸ್ವಾಮೀಜಿಯವರು ಮಾತನಾಡಿದರು.
ಕನ್ನಡ ಭಾಷೆ, ಸಂಸ್ಕೃತಿಯ ರಕ್ಷಣೆಗೆ ಇನ್ನೂ ಹೋರಾಟ ಅನಿವಾರ್ಯವಾಗಿದೆ. ನಾವು ಮಲಯಾಳ ಭಾಷೆ ದ್ವೇಷಿಗಳಲ್ಲ. ಕಾಸರಗೋಡಿನ ಕನ್ನಡಿಗರಿಗೆ ಸಂವಿಧಾನ ಬದ್ಧವಾಗಿ ನೀಡಲಾದ ಹಕ್ಕು, ಸವಲತ್ತು ಗಳನ್ನು ಕೇಳುತ್ತಿದ್ದೇವೆ. ನಮಗೆ ಯಾರ ಭಿಕ್ಷೆಯೂ ಬೇಡ. ಆದರೆ ನಮ್ಮ ಸವಲತ್ತು ಪಡೆದೇ ತೀರುತ್ತೇವೆ. ಕಾನೂನಾತ್ಮಕ ಹೋರಾಟದ ಮೂಲಕ ನಮ್ಮ   ಹಕ್ಕು ಸಂರಕ್ಷಿಸಿ ಕೊಳ್ಳಬೇಕು. ಅದಕ್ಕಾಗಿ ಕನ್ನಡಿಗ ರೆಲ್ಲ ಏಕ ಸೂತ್ರದಡಿ ಕೆಲಸ ಮಾಡಬೇಕಾ ಗಿದೆ. ಕನ್ನಡಿಗರು ಇನ್ನಷ್ಟು ಶಕ್ತಿಶಾಲಿಯಾಗಿ ಕನ್ನಡದ ರಕ್ಷಣೆಗಾಗಿ ಕೇರಳ ಸರಕಾರದ ಎಲ್ಲಾ ಕನ್ನಡ ವಿರೋಧಿ ನಿರ್ಣಯಗಳನ್ನು ವಿರೋಧಿಸುತ್ತಿದ್ದೇವೆ ಎಂದರು.

ಕಾಸರಗೋಡು ಕನ್ನಡಿಗರು ಅತಂತ್ರ ಸ್ಥಿತಿ ಯಲ್ಲಿದ್ದಾರೆ. ಕರ್ನಾಟಕವನ್ನು ಆಶ್ರಯಿಸ ಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಈ ಹಿನ್ನೆಲೆಯಲ್ಲಿ ಕಾಸರಗೋಡಿನ ಎಲ್ಲ ಕಚೇರಿಗಳು ಕನ್ನಡ ಮಯವಾಗಬೇಕು. ಅದಕ್ಕಾಗಿ ಕನ್ನಡಿಗರು ಕೇರಳದ ಪಿಎಸ್‌ಸಿ  ಪರೀಕ್ಷೆ    ಬರೆದು ಸರಕಾರಿ ಉದ್ಯೋಗಕ್ಕೆ ಸೇರಿ ಕೊಳ್ಳುವಂತಾಗಬೇಕು. ಸರಕಾರಿ ಕಚೇರಿಗಳಲ್ಲಿ ಕನ್ನಡಿಗರನ್ನು ನೇಮಿಸ ಬೇಕಾದುದು ಸಂವಿಧಾನಬದ್ಧ ಹಕ್ಕು ಎಂದ ಸ್ವಾಮೀಜಿಯವರು ತಿರುವ ನಂತಪುರದ ಸೆಕ್ರೆಟರಿಯೇಟ್‌ ಮುಂದೆ ಕೂಡ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಈ ನಿಟ್ಟಿನಲ್ಲಿ ಅಲ್ಲೂ ಹೋರಾಟ ನಡೆಸಲು ಹಿಂದೆ ಸರಿಯುವವರಲ್ಲ ಎಂದರು. ಸಂವಿಧಾನಬದ್ಧ ನ್ಯಾಯ ಸಿಗುವ ತನಕ ಹೋರಾಟ ನಡೆಯಬೇಕಾಗಿದೆ ಎಂದರು.

ಜನಪ್ರತಿನಿಧಿಗಳೇ ಸದನದಲ್ಲಿ ಮಾತನಾಡಿ
ಕಾಸರಗೋಡಿನ ಕನ್ನಡಿಗರು ಎದುರಿಸು ತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ನಮ್ಮ ಜನಪ್ರತಿನಿಧಿಗಳು ಶಾಸನ ಸಭೆಯಲ್ಲಿ ಧ್ವನಿಸಬೇಕೆಂದು ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿದ ಎಣ್ಮಕಜೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ರೂಪವಾಣಿ ಆರ್‌. ಭಟ್‌ ಅವರು ಹೇಳಿದರು.

ಧರಣಿ ಸತ್ಯಾಗ್ರಹದಲ್ಲಿ ಕನ್ನಡ ಹೋರಾಟ ಸಮಿತಿ ಸಂಚಾಲಕ ತಾರಾನಾಥ ಮಧೂರು ಅಧ್ಯಕ್ಷತೆ ವಹಿಸಿದರು.

Advertisement

ಕ್ಯಾಂಪ್ಕೋ ಸಂಸ್ಥೆಯ ಸತೀಶ್ಚಂದ್ರ ಭಂಡಾರಿ, ಎಣ್ಮಕಜೆ ಗ್ರಾಮ ಪಂಚಾಯತ್‌ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಪೆರ್ಲ ಎ.ಎ., ಪಾರ್ತಿಸುಬ್ಬ ಯಕ್ಷಗಾನ ಕಲಾಸಂಸ್ಥೆ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು, ಕೇಶವ ಪ್ರಸಾದ್‌ ಬದಿಯಡ್ಕ, ವಿಶ್ವನಾಥ ರಾವ್‌, ಡಾ| ರಾಧಾಕೃಷ್ಣ ಬೆಳ್ಳೂರು, ಪ್ರೊ| ಎ. ಶ್ರೀನಾಥ್‌ ಮೊದಲಾ ದವರು ಮಾತನಾಡಿದರು. ಧರಣಿ ಸತ್ಯಾಗ್ರಹದಲ್ಲಿ ಬಾಲ ಮಧುರಕಾನನ, ಶ್ರದ್ಧಾ ನಾಯರ್ಪಳ್ಳ, ಶಿವರಾಮ ಭಟ್‌, ಪದ್ಮಾವತಿ, ಪ್ರದೀಪ್‌ ಕುಮಾರ್‌ ಬೇಳ, ಪದ್ಮರಾಜ್‌ ಮೊದಲಾದವರು ಉಪಸ್ಥಿತರಿದ್ದರು.

ಸತೀಶ್‌ ಮಾಸ್ಟರ್‌ ಕೂಡ್ಲು ಸ್ವಾಗತಿಸಿದರು. ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಭಾಸ್ಕರ ಕಾರ್ಯಕ್ರಮ ನಿರೂಪಿಸಿದರು. ಎಂ.ವಿ. ಮಹಾಲಿಂಗೇಶ್ವರ ಭಟ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಹೋರಾಟದ ಕಿಚ್ಚು ಹೆಚ್ಚಲಿ
ಕನ್ನಡಿಗರ ಬೇಡಿಕೆ ಈಡೇರುವ ತನಕ ವಿಶ್ರಾಂತಿ ಎಂಬುದಿಲ್ಲ ಎಂದ ಅವರು ಅಗತ್ಯ ಬಿದ್ದಲ್ಲಿ ತಿರುವನಂತಪುರದ ಸೆಕ್ರೆಟರಿಯೇಟ್‌ ಮುಂದೆ ಕೂಡ ಸತ್ಯಾಗ್ರಹಕ್ಕೆ ಕನ್ನಡಿಗರು ಸಿದ್ಧರಾಗಬೇಕೆಂದರು. ಪ್ರತಿಯೊಂದು ಮನೆಯಲ್ಲೂ ಹೋರಾಟದ ಕಿಚ್ಚು ಎದ್ದೇಳಬೇಕು. ಹೋರಾಟದ ಮೂಲಕ ಸರಕಾರಕ್ಕೆ ಸ್ಪಷ್ಟ ಸಂದೇಶವನ್ನು ಕಳುಹಿಸಬೇಕು. ಹೋರಾಟ ತೀಕ್ಷ್ಣತೆ ಪಡೆಯಬೇಕೆಂದರು. ಸಂವಿಧಾನಬದ್ಧ ಹಕ್ಕುಗಳನ್ನು ಕಸಿದುಕೊಳ್ಳುತ್ತಾ ಕನ್ನಡಿಗರ ಶೋಷಣೆ ನಡೆಯುತ್ತಿದೆ. ದಮನಿಸುವ ಯತ್ನವೂ ನಡೆಯುತ್ತಿದೆ. ಇದು ಹೀಗೆ ಮುಂದುವರಿದರೆ ನಮ್ಮ ಎಲ್ಲ ಹಕ್ಕುಗಳನ್ನು ಕಳೆದುಕೊಳ್ಳುವ ದಿನ ದೂರವಿಲ್ಲ.
– ರೂಪವಾಣಿ ಆರ್‌. ಭಟ್‌
ಅಧ್ಯಕ್ಷೆ , ಎಣ್ಮಕಜೆ ಗ್ರಾಮ ಪಂಚಾಯತ್‌ 

Advertisement

Udayavani is now on Telegram. Click here to join our channel and stay updated with the latest news.

Next