Advertisement

ನೀರಿಲ್ಲದೇ ನರಸಿಂಹ ದರ್ಶನ ಬಂದ್‌!

09:45 AM May 06, 2019 | Team Udayavani |

ಬೀದರ: ಇಲ್ಲಿನ ಪ್ರಸಿದ್ಧ ಹಾಗೂ ಪೌರಾಣಿಕ ನರಸಿಂಹ ಝರಣಿ ಧಾರ್ಮಿಕ ಕ್ಷೇತ್ರಕ್ಕೂ ಬರದ ಬಿಸಿ ತಟ್ಟಿದ್ದು, ನೀರಿನ ಅಭಾವದ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ದೇವರ ದರ್ಶನಕ್ಕೆ ದೇವಸ್ಥಾನ ಆಡಳಿತ ಮಂಡಳಿ ನಿಷೇಧ ಹೇರಿದೆ!

Advertisement

400ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ನರಸಿಂಹ ಝರಣಾ ದೇವಸ್ಥಾನಕ್ಕೆ ಪ್ರತಿ ವರ್ಷ ದೇಶದ ವಿವಿಧ ರಾಜ್ಯಗಳು ಸೇರಿದಂತೆ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಗಡಿ ಭಾಗದ ಪವಿತ್ರ ತಾಣಗಳಲ್ಲೊಂದಾಗಿರುವ ದೇವಸ್ಥಾನಕ್ಕೆ ನಿತ್ಯ ನೂರಾರು ಹಾಗೂ ವಿಶೇಷ ಸಂದರ್ಭಗಳಲ್ಲಿ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ದೇವಸ್ಥಾನದ ಗುಹೆಯಲ್ಲಿ ಇರು ತ್ತಿದ್ದ ಸುಮಾರು 600 ಮೀಟರ್‌ ನೀರಿನಲ್ಲಿ ನಡೆದು ಕೊಂಡು ಹೋಗಿ ಗರ್ಭಗುಡಿಯಲ್ಲಿ ನೆಲೆಸಿರುವ ಝರಣಿ ನರಸಿಂಹ ಸ್ವಾಮಿ ದರ್ಶನ ಪಡೆಯುವುದು ಇಲ್ಲಿನ ವಿಶೇಷ. ಈ ರೀತಿ ನೀರಿನಲ್ಲಿ ನಡೆದು ಹೋಗಿ ದರ್ಶನ ಪಡೆಯುವುದರಿಂದ ರೋಗಗಳು ನಿವಾರಣೆಯಾಗುತ್ತವೆ ಎಂಬ ಪ್ರತೀತಿ ಇದೆ.

ಸಾಮಾನ್ಯವಾಗಿ ಗುಹೆಯಲ್ಲಿ 4ರಿಂದ 5 ಅಡಿ ನೀರು ಇರುತ್ತಿತ್ತು. ಆದರೆ, ಬರದಿಂದ ಗುಹೆಯಲ್ಲಿ ಸದ್ಯ ಕೇವಲ ಅರ್ಧ ಅಡಿ ನೀರು ಇರುವ ಕಾರಣ ದೇವರ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ. 1972ರ ಭೀಕರ ಬರಗಾಲದಲ್ಲಿ ಕೂಡ ಇಲ್ಲಿನ ದೇವಸ್ಥಾನದಲ್ಲಿನ ನೀರು ಬತ್ತಿರಲಿಲ್ಲ. ಆದರೆ, ಇದೀಗ ಭಾರೀ ಪ್ರಮಾಣದಲ್ಲಿ ನೀರಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ದೇವರ ದರ್ಶನ ಭಾಗ್ಯ ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ದೇವಸ್ಥಾನದ ಪ್ರಾಂಗಣದಲ್ಲಿ ಕುಡಿಯುವ ನೀರಿಗೂ ಅಭಾವ ಎದುರಾಗಿದೆ ಎನ್ನುತ್ತಾರೆ ದೇವಸ್ಥಾನ ಅರ್ಚಕ ಹೇಮಂತಕುಮಾರ.

ಪುಣ್ಯ ಸ್ನಾನಕ್ಕೂ ಬರ: ದೇವರ ಗರ್ಭಗುಡಿಯಿಂದ ಹರಿದು ಬರುವ ನೀರು ಅಲ್ಲಿನ ಪುಷ್ಕರಣಿಗೆ ಸೇರುತ್ತಿತ್ತು. ಆದರೆ, ಗರ್ಭಗುಡಿಯಲ್ಲಿಯೇ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಪುಷ್ಕರಣಿ ಕೂಡ ಖಾಲಿಯಾಗಿದೆ. ದೇವಸ್ಥಾನಕ್ಕೆ ಬರುವ ಜನರು ಮೊದಲು ಪುಷ್ಕರಣಿಯಲ್ಲಿ ಪುಣ್ಯ ಸ್ನಾನ ಮಾಡುವ ವಾಡಿಕೆ ಬೆಳೆದು ಬಂದಿದೆ. ಹನಿ ನೀರಿಲ್ಲದ ಕಾರಣ ಭಕ್ತರು ಪರದಾಡುವ ಸ್ಥಿತಿ ಎದುರಾಗಿದೆ. ದೇವರ ದರ್ಶನಕ್ಕೆ ಬರುವ ಜನರು ಇಲ್ಲಿನ ಸ್ಥಿತಿ ನೋಡಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ನೀರು ಬತ್ತಿದ್ದು ಏಕೆ?
ಕಳೆದ ಎರಡು ವರ್ಷಗಳಿಂದ ಬರದ ಕರಿನೆರಳು ಜಿಲ್ಲೆಯ ಜನರಿಗೆ ಕಾಡುತ್ತಿದ್ದು, ನೀರಿಗಾಗಿ ಹೊಸ ಕೊಳವೆ ಬಾವಿಗಳನ್ನು ಎಲ್ಲೆಡೆ ಕೊರೆಸಲಾಗುತ್ತಿದೆ. ಅದೇ ರೀತಿ ನರಸಿಂಹ ಝರಣ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಹೊಸ ಕೊಳವೆ ಬಾವಿಗಳು ಹೆಚ್ಚಾಗಿ ಕೊರೆಸುತ್ತಿರುವುದೇ ಗರ್ಭಗುಡಿ ನೀರಿಗೂ ಬರ ಬಂದಿದೆ ಎನ್ನಲಾಗುತ್ತಿದೆ. ಝರಿ ಮೂಲಕ ಹರಿದು ಬರುವ ನೀರು ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿದೆ. ಜಿಲ್ಲಾಡಳಿತ ಕೊಳವೆ ಬಾವಿ ಕೊರೆಸುವುದಕ್ಕೆ ನಿಷೇಧಿಸಿದರೆ ಮಾತ್ರ ಐತಿಹಾಸಿಕ ನರಸಿಂಹ ಝರಣ ಉಳಿಯುತ್ತದೆ ಎಂಬುದು ದೇವಸ್ಥಾನ ಸಿಬ್ಬಂದಿ ಅನಿಸಿಕೆ.

Advertisement

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next