ಮುಂಬಯಿ: ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಇದರ ವಾರ್ಷಿಕೋತ್ಸವ ಹಾಗೂ ಗುರುವಂದನೆ ಸಮಾರಂಭವು ಆ. 5 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಒಡಿಯೂರು ಯುವ ಸೇವಾ ಬಳಗ ಮುಂಬಯಿ ಸದಸ್ಯರು ಜೀವನದಲ್ಲಿ ಕತ್ತಲಿನಲ್ಲಿರುವವರಿಗೆ ನೇತ್ರದಾನ ಮಹಾಯೋಜನೆಯ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಚಾಲನೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಯುವ ವಿಭಾಗದ ಡಾ| ಆದಿತ್ಯ ಕೃಷ್ಣ ಶೆಟ್ಟಿ ಮತ್ತು ಡಾ| ಜಾನಕಿ ಕೋಡ್ಕಣ್ ಅವರು ನೇತ್ರದಾನದ ಮಹತ್ವದ ಬಗ್ಗೆ ಹಾಗೂ ಅದರ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಬೆಂಬಲಿಸುವುದರೊಂದಿಗೆ ಗುರುದೇವ ಸೇವಾ ಬಳಗದ 20 ಕ್ಕಿಂತಲೂ ಅಧಿಕ ಕಾರ್ಯಕರ್ತರು, ಗುರುಭಕ್ತರು ತಮ್ಮ ನೇತ್ರದಾನ ಮಾಡುವುದಾಗಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀ ಜಿಗಳಿಂದ ದೃಢೀಕರಣ ಪತ್ರ ಸ್ವೀಕರಿಸಿದರು. ಅಲ್ಲದೆ ಆರ್ಥಿಕವಾಗಿ ಹಿಂದುಳಿದ 25 ಕ್ಕಿಂತಲೂ ಅಧಿಕ ಕಣ್ಣಿನಪೊರೆಯಿಂದ ಬಳಲುತ್ತಿವವರಿಗೆ ಸಹಾಯವಾಗುವ ಪತ್ರವನ್ನು ಶ್ರೀಗಳು ವಿತರಿಸಿ ಶುಭಹಾರೈಸಿದರು.ಯುವ ವಿಭಾಗದ ಸಮಾಜಪರ ಕಾರ್ಯಗಳ ಬಗ್ಗೆ ಶ್ರೀಗಳು ಶ್ಲಾಘಿಸಿ ಮಾತನಾಡಿ, ಇದು ಸಮಾಜದ ಕಣ್ಣು ತೆರೆಯುವ ಕಾರ್ಯವಾಗಿದೆ. ಯುವ ವಿಭಾಗದ ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು. ಇನ್ನೊಬ್ಬರ ಬಾಳಿಗೆ ಬೆಳಕನ್ನು ನೀಡುವ ಕಾರ್ಯಕ್ಕೆ ಭಗವಂತ ಕೃಪೆ ಸದಾಯಿರುತ್ತದೆ ಎಂದರು.
ಸಾಧ್ವಿ ಮಾತಾನಂದಮಮಯಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವ ವಿಭಾಗದ ನ್ಯಾಯವಾದಿ ಕವಿತಾ ಧೀರಾಜ್ ಶೆಟ್ಟಿ ಅವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಗುರುದೇವ ಸೇವಾ ಬಳಗದ ಅಧ್ಯಕ್ಷ ನ್ಯಾಯವಾದಿ ಕೃಷ್ಣ ಶೆಟ್ಟಿ, ಅತಿಥಿಗಳಾಗಿ ಬಂಟರ ಸಂಘದ ಮಾಜಿ ಅಧ್ಯಕ್ಷ ಬಿ. ವಿವೇಕ್ ಶೆಟ್ಟಿ, ಬಂಟರ ಸಂಘದ ಮಾಜಿ ಕಾರ್ಯದರ್ಶಿ ಸಿಎ ಸದಾಶಿವ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಗುರುದೇವಾ ಸೇವಾ ಬಳಗದ ಉಪಾಧ್ಯಕ್ಷ ಬೊಳ್ನಾಡುಗುತ್ತು ಚಂದ್ರಹಾಸ ರೈ, ದಾಮೋದರ ಶೆಟ್ಟಿ, ಪೇಟೆಮನೆ ಪ್ರಕಾಶ್ ಶೆಟ್ಟಿ, ಪುಣೆ ಗುರುದೇವ ಸೇವಾ ಬಳಗದ ಸದಾನಂದ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ರೇವತಿ ವಾಮಯ್ಯ ಶೆಟ್ಟಿ, ಉದ್ಯಮಿ ವಾಮಯ್ಯ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ಸದಸ್ಯರು, ಗುರುಭಕ್ತರು ಉಪಸ್ಥಿತರಿದ್ದರು.
ಚಿತ್ರ-ವರದಿ:ಸುಭಾಷ್ ಶಿರಿಯಾ