ಹಾಸನ: ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಆದಿ ಚುಂಚನಗಿರಿ ಆಸ್ಪತ್ರೆಯಲ್ಲಿ ಜಿನೈಕ್ಯರಾಗಿದ್ದಾರೆ. 73 ವರ್ಷದ ಸ್ವಾಮೀಜಿಯವರು ಕೆಲಕಾಲದಿಂದ ಅನಾರೋಗ್ಯಕ್ಕೀಡಾಗಿದ್ದು ಶ್ರವಣಬೆಳಗೊಳದ ಮಠದಲ್ಲಿಯೇ ಅವರಿಗೆ ಶುಶ್ರೂಷೆ ಮಾಡಲಾಗುತ್ತಿತ್ತು.ಅರೋಗ್ಯ ತೀವ್ರ ಹದಗೆಟ್ಟ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಾಚೀನ ಧರ್ಮಪೀಠದ ಪೀಠಾಧಿಪತಿಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ಅಪಾರ ಭಕ್ತರು ಆಗಮಿಸಲಿದ್ದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಐದು ದಶಕಗಳ ಕಾಲ ಸಮಾಜಕ್ಕೆ ಹಲ ವಾರು ಕೊಡುಗೆಗಳನ್ನು ನೀಡಿದ್ದ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಅಹಿಂಸೆ, ತ್ಯಾಗ ಹಾಗೂ ಶಾಂತಿಯಿಂದ ಜೈನ ಪರಂಪರೆಯನ್ನು ಬೆಳಗಿದ್ದರು.
73 ಸಂವತ್ಸರ ಪೂರೈಸಿದ್ದ ಸ್ವಾಮೀಜಿಯವರ ಪೂರ್ವಾಶ್ರಮದ ಹೆಸರು ರತ್ನವರ್ಮ. 1949 ಮೇ 3 ರಂದು ದಕ್ಷಿಣ ಕನ್ನಡ ಜಿಲ್ಲೆ ವರಂಗ ಗ್ರಾಮದ ಉಪಾಧ್ಯಾಯ ಮನೆತನದಲ್ಲಿ ಜನಿಸಿದ್ದರು. 1969 ಡಿಸೆಂಬರ್ 12 ರಂದು ಸನ್ಯಾಸ ದೀಕ್ಷೆ ಪಡೆದಿದ್ದ ಅವರು 1970 ರ ಏಪ್ರಿಲ್ 19 ರಂದು ಶ್ರವಣಬೆಳಗೊಳ ಮಠದ ಪೀಠಾರೋಹಣ ಮಾಡಿದ್ದರು.
Related Articles
ಮೈಸೂರು ವಿ.ವಿ.ಯಿಂದ ತತ್ವಶಾಸ್ತ್ರ ಮತ್ತು ಬೆಂಗಳೂರು ವಿ.ವಿ.ಯಿಂದ ಇತಿಹಾಸದ ಸ್ನಾತಕೋತ್ತರ ಪದವೀಧರರಾದ ಸ್ವಾಮೀಜಿಯವರು ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಪ್ರಭಾವಶಾಲಿ ಭಾಷಣಕಾರ, ವಾಗ್ಮಿ ಶ್ರೀಗಳು ಅಮೆರಿಕಾ, ಇಂಗ್ಲೆಂಡ್, ಸಿಂಗಪುರ್, ಕೀನ್ಯಾ ಮತ್ತಿತರ ದೇಶಗಳಿಗೂ ಭೇಟಿ ನೀಡಿದ್ದರು.
ಧಾರ್ಮಿಕ ಕೇಂದ್ರ ಶ್ರವಣಬೆಳಗೊಳವನ್ನು ಪ್ರವಾಸಿ ಹಾಗೂ ಶೈಕ್ಷಣಿಕ ಕೇದ್ರವಾಗಿ ಅಭಿವೃದ್ಧಿ ಪಡಿಸುವ ಕನಸು ಕಂಡಿದ್ದ ಶ್ರೀಗಳು ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿದ್ದರು. ಶ್ರವಣಬೆಳಗೊಳದಲ್ಲಿ ಎಂಜಿನಿಯರಿಂಗ್ ಕಾಲೇಜು ಹಾಗೂ ಪ್ರಾಕೃತ ವಿ.ವಿ.ಸ್ಥಾಪಿಸಿದ್ದರು.
1981 ರಲ್ಲಿ ಶ್ರೀ ಸಾವಿರ ವರ್ಷದ ಗೊಮ್ಮಟ ಮೂರ್ತಿಗೆ ಮಹಾಮಸ್ತಕಾಭಿಷೇಕ ಸೇರಿದಂತೆ ನಾಲ್ಕು ಮಹಾಮಸ್ತಕಾಭಿಷೇಕವನ್ನು ಯಶಸ್ವಿ ಯಾಗಿ ನಡೆಸಿದ ದಾಖಲೆಯನ್ನು ಶ್ರೀಗಳು ನಿರ್ಮಿಸಿದ್ದಾರೆ. ಧಾರ್ಮಿಕ ಗುರುಗಳಾದರೂ ಪ್ರಗತಿರಪರ ಚಿಂತಕರಾಗಿದ್ದ ಶ್ರೀಗಳು ಶ್ರವಣಬೆಳಗೊಳಕ್ಕೆ ವಿಶ್ವಮಟ್ಟದ ಪ್ರಖ್ಯಾತಿ ತಂದುಕೊಟ್ಟಿದ್ದ ಶ್ರೀಗಳು ಇಹಲೋಕ ತ್ಯಜಿಸಿರುವುದು ಜೈನ ಸಮುದಾಯಕ್ಕಷ್ಟೇ ಅಲ್ಲ ಕರುನಾಡಿನ ಪರಂಪರೆಗೆ ನಷ್ಟವಾಗಿದೆ.