Advertisement

ಗರ್ಭಗುಡಿಯ ಮೂರ್ತಿ ಶ್ರೀಚಕ್ರ ಸ್ಥಳಾಂತರ: ಸ್ಥಳಕ್ಕೆ ಭೇಟಿ ನೀಡದ ಸಚಿವ ಆನಂದ್ ಸಿಂಗ್; ಆಕ್ರೋಶ

10:22 AM May 28, 2022 | Team Udayavani |

ಗಂಗಾವತಿ: ಇತಿಹಾಸ ಪ್ರಸಿದ್ಧ ತಾಲ್ಲೂಕಿನ ಪಂಪಾಸರೋವರದ ಜೀರ್ಣೋದ್ಧಾರ ಸಂದರ್ಭದಲ್ಲಿ ಇಲ್ಲಿಯ ಆರಾಧ್ಯ ದೈವ ಜಯಲಕ್ಷ್ಮಿ ಗರ್ಭಗುಡಿಯ ದೇವತೆಯ ಮೂರ್ತಿ ಮತ್ತು ಶ್ರೀಚಕ್ರ ಶಿಲೆಯನ್ನು ಸ್ಥಳಾಂತರ ಮಾಡಿ ಗರ್ಭಗುಡಿ ಅಗೆದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಮತ್ತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಭೇಟಿ ನೀಡದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಇತಿಹಾಸ ಪ್ರಸಿದ್ಧ ದೇಗುಲದ ಗರ್ಭಗುಡಿಯ ಅಗೆದು ಅಲ್ಲಿಯ ಸ್ಮಾರಕಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿರುವ ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದು, ಜತೆಗೆ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಮಾಹಿತಿಯನ್ನು ಸಚಿವ ಆನಂದ್ ಸಿಂಗ್ ಪಡೆದರೂ ಸಹ ಪಂಪಾಸರೋವರಕ್ಕೆ ಭೇಟಿ ನೀಡದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.

ಗರ್ಭಗುಡಿಯಲ್ಲಿರುವ ಮೂರ್ತಿ ಮತ್ತು ಶ್ರೀ ಚಕ್ರವನ್ನು ಸ್ಥಳಾಂತರ ಮಾಡುವ ವಿಷಯ ಕಾಮಗಾರಿ ನಿರ್ವಹಿಸುವ ವ್ಯಕ್ತಿಗಳು ಪುರಾತತ್ವ ಪ್ರಾಚ್ಯವಸ್ತು ಇಲಾಖೆ ಮತ್ತು ಆನೆಗುಂದಿ ಭಾಗವನ್ನು ನಿರ್ವಹಿಸುವ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಶಾಸಕರು, ಸಂಸದರು, ಜಿಲ್ಲಾ ಆಡಳಿತದ ಗಮನಕ್ಕೆ ತಾರದೆ ಏಕಾಏಕಿ ಯಾರೂ ಇಲ್ಲದ ಸಂದರ್ಭದಲ್ಲಿ ಮೂರ್ತಿ ಮತ್ತು ಶ್ರೀ ಚಕ್ರವನ್ನು ಕಿತ್ತು ಬೇರೆಡೆ ಇಟ್ಟಿದ್ದಾರೆ. ಸುಮಾರು 14 ಶತಮಾನದ ಆರಂಭದಲ್ಲಿ ಪಂಪಾಸರೋವರದಲ್ಲಿ ಜಯಲಕ್ಷ್ಮಿ ಗುಡಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಎಂಬ ಮಾಹಿತಿ ಪುರಾಣ ಪ್ರವಚನ ಮತ್ತು ಇತಿಹಾಸದಲ್ಲಿ ಉಲ್ಲೇಖವಾಗಿದೆ.

ಇಂತಹ ಪವಿತ್ರ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಮಾಡುವಾಗ ಸ್ಥಳೀಯರನ್ನು ಮತ್ತು ತಾಲ್ಲೂಕು ಜಿಲ್ಲಾಡಳಿತವನ್ನು ಕಾಮಗಾರಿ ಮಾಡುವವರು ಸಂಪರ್ಕಿಸಬೇಕಿತ್ತು. ಗರ್ಭಗುಡಿಯನ್ನು ಅಗೆದು ಅಲ್ಲಿಯ ಸ್ಮಾರಕ ತೆಗೆದು ಬೇರೆ ಕಡೆ ಇಡಲಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಇದುವರೆಗೂ ಎಲ್ಲಿಯೂ ಮಾತನಾಡಿಲ್ಲ. ಜೊತೆಗೆ ಪಂಪಾಸರೋವರಕ್ಕೆ ಭೇಟಿ ಕೊಟ್ಟಿಲ್ಲ. ಪಂಪಾಸರೋವರದ ಜೀರ್ಣೋದ್ಧಾರ ಸಂದರ್ಭದಲ್ಲಿ ಇಲ್ಲಿಗೆ 1ಬಾರಿ ಮಾತ್ರ ಆಗಮಿಸಿ ವೀಕ್ಷಣೆ ಮಾಡಿದ್ದರು .ಇದೀಗ ಗರ್ಭಗುಡಿ ಸ್ಮಾರಕ ತೆಗೆದು ಬೇರೆ ಕಡೆ ಇಟ್ಟರೂ ಸಹ ಸ್ಥಳಕ್ಕೆ ಭೇಟಿ ನೀಡದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಸಿದ್ದುಗೆ ಕಿಚ್ಚಿಟ್ಟ ಮೂಲ; “ಆರೆಸ್ಸೆಸ್‌ನವರು ಮೂಲ ಭಾರತದವರೇ?’ ಹೇಳಿಕೆಗೆ ಆಕ್ರೋಶ

Advertisement

ಕೊಪ್ಪಳ ಜಿಲ್ಲಾ ಉಸ್ತುವಾರಿಯಾದ ನಂತರ ಜಿಲ್ಲಾ ಮಟ್ಟದ ಸಭೆ ಸಮಾರಂಭಗಳು ಮತ್ತು ಕೆಲವು ಪ್ರದೇಶಗಳಲ್ಲಿ ಮಾತ್ರ ಸಚಿವರು ಪ್ರವಾಸ ಮಾಡಿದ್ದಾರೆ. ಉಳಿದಂತೆ ಹೆಚ್ಚಾಗಿ ಹೊಸಪೇಟೆಯನ್ನು ಕೇಂದ್ರಿಕರಣ ಮಾಡಿಕೊಂಡು ಸಚಿವರು ಕಾರ್ಯನಿರ್ವಹಿಸುತ್ತಿದ್ದಾರೆ. ಆನೆಗೊಂದಿ ಭಾಗದಲ್ಲಿ ಇದ್ದ ಹೋಟೆಲ್ ರೆಸಾರ್ಟ್ ಗಳನ್ನು ವಿವಿಧ ಕಾರಣಕ್ಕಾಗಿ ಜಿಲ್ಲಾಡಳಿತ ಸೀಜ್ ಮಾಡಿದೆ. ಈ ಸಂದರ್ಭದಲ್ಲಿ ಸಚಿವ ಆನಂದ್ ಸಿಂಗ್ ಒಮ್ಮೆ ಹೋಟೆಲ್ ಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಗಮನಿಸಿದ್ದರು. ಒಂದೇ ತಿಂಗಳಲ್ಲಿ ಸೂಕ್ತ ಕಾನೂನು ಅನ್ವಯ ಎಲ್ಲಾ ಹೋಟೆಲ್ ಗಳನ್ನು ಆರಂಭಿಸುವುದಾಗಿ ಭರವಸೆ ನೀಡಿ 6 ತಿಂಗಳು ಕಳೆದರೂ ಆನೆಗೊಂದಿ ಭಾಗದಲ್ಲಿ ಇದುವರೆಗೂ  ಹೋಟೆಲ್ ಗಳು ಆರಂಭವಾಗಿಲ್ಲ. ಹಂಪಿ ಭಾಗದಲ್ಲಿ ಅರವತ್ತಕ್ಕೂ ಹೆಚ್ಚು ಹೋಟೆಲ್ ಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ. ಇದೀಗ ಪಂಪಾಸರೋವರದ ಗರ್ಭಗುಡಿ ಅಗೆದಿರುವ ಘಟನೆಯಿಂದ ಆನೆಗೊಂದಿ ಭಾಗದ ಜನರು ಆಕ್ರೋಶಗೊಂಡಿದ್ದಾರೆ.

ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಪಂಪಾಸರೋವರಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಂಡು ಜಯಲಕ್ಷ್ಮಿ ಮೂರ್ತಿ ಮತ್ತು ಶ್ರೀ ಚಕ್ರವನ್ನು ಪುನರ್ ಪ್ರತಿಷ್ಠಾಪಿಸುವ ಕಾರ್ಯ ಮಾಡಬೇಕಿದೆ ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next