ಮುಂಬಯಿ: ಶ್ರೀ ಭುವನೇಶ್ವರಿ ಸೇವಾ ಸಮಿತಿ ಬೋರಾ ಬಜಾರ್, ಫೋರ್ಟ್ ಮುಂಬಯಿ ಇದರ ಶ್ರೀ ಭುವನೇಶ್ವರಿ ಮಾತೆಯ 39ನೇ ವರ್ಷದ ಮೂರ್ತಿ ಪ್ರತಿಷ್ಠೆ ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮವು ಜೂ. 12ರಂದು ಬೆಳಗ್ಗೆ 6.15ರಿಂದ ಅಪರಾಹ್ನ 4ರ ವರೆಗೆ ದೇವಸ್ಥಾನದ ಪ್ರಧಾನ ಅರ್ಚಕ ರಾಜೇಶ್ ಭಟ್ ಮುಂದಾಳತ್ವದಲ್ಲಿ ಜರಗಲಿದೆ.
ಬೆಳಗ್ಗೆ 6.15ರಿಂದ ದೇವಸ್ಥಾನದ ಪ್ರತಿಷ್ಠಾ ಮೂರ್ತಿಗೆ ವಿಶೇಷ ಮಹಾ ಅಭಿಷೇಕ, ವಸ್ತ್ರ ಪೂಜೆ, ಗಣಪತಿ ಹೋಮ ಮತ್ತು ಮಂಗಳಾರತಿ ಜರಗಲಿದೆ. ಬಳಿಕ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಮೆರವಣಿಗೆ ಮೂಲಕ ಕಾಂಜಿ ಖೇಟ್ಸೆ ಭಾಟಿಯಾವಾಡಿ ಸಭಾಗೃಹಕ್ಕೆ ತಂದು ಪ್ರತಿಷ್ಠೆ ಮಾಡಲಾಗುವುದು. ಈ ಸಂದರ್ಭ ಅಲ್ಲಿ ಮಹಾಗಣಪತಿ ಹೋಮ, ಶುದ್ಧ ಪೂಜೆ, ಭಜನೆ, ಮಹಾಮಂಗಳಾರತಿ ಮತ್ತು ಭುವನೇಶ್ವರಿ ತಾಯಿಯ ಆವೇಶ ಸೇವೆ ನಡೆಯಲಿದೆ.
ಅಪರಾಹ್ನ 4ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದ್ದು, ಈ ಸಂದರ್ಭ ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಸುರೇಶ್ ರಾವ್ ಅವರನ್ನು ಸಮ್ಮಾನಿಸಲಾಗುವುದು. ಭುವನೇಶ್ವರಿ ಸೇವಾ ಸಮಿತಿಯ ಉಪಾಧ್ಯಕ್ಷ ಡಾ| ಪ್ರಕಾಶ್ ಕುಮಾರ್ ಮೂಡುಬಿದ್ರಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಕ್ಷಯ ಮಾಸ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಧರ್ಮೇಶ್ ಸಾಲ್ಯಾನ್, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಉಪಾಧ್ಯಕ್ಷ ಅರವಿಂದ್ ಗಾಬ್ಡೆ, ಉದ್ಯಮಿ ಕೇಶವ ಪೂಜಾರಿ ಮೊದಲಾದವರು ಭಾಗವಹಿಸಲಿದ್ದಾರೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅನ್ನಪೂರ್ಣೇಶ್ವರಿ ಮಾತೆಯ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಸೇವಾ ಸಮಿತಿಯ ಪ್ರಧಾನ ಅರ್ಚಕ ಹಾಗೂ ದೇವಿ ಪಾತ್ರಿ ರಾಜೇಶ್ ಭಟ್, ಅಧ್ಯಕ್ಷ ಆರ್.ಕೆ. ಮೂಲ್ಕಿ, ಕಾರ್ಯದರ್ಶಿ ಸುರೇಶ್ ಸಾಲ್ಯಾನ್, ಮಧ್ಯಸ್ಥರಾದ ನಾರಾಯಣ ಬಂಗೇರ, ಸಂಜೀವ್ ಬಂಗೇರ, ರಘು ಪುತ್ರನ್ ಹಾಗೂ ಸಮಿತಿಯ ಎಲ್ಲ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.