ಮುಂಬೈ: ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯ ಅಂತಿಮ ಪಂದ್ಯವನ್ನು ಟೀಂ ಇಂಡಿಯಾ ಬುಧವಾರ ಆಡಲಿದ್ದು, ಬಳಿಕ ಟೆಸ್ಟ್ ಸರಣಿಗೆ ಸಜ್ಜಾಗಲಿದೆ. ಫೆ.9ರಿಂದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ – ಗಾವಸ್ಕರ್ ಟೆಸ್ಟ್ ಸರಣಿ ಆರಂಭವಾಗಲಿದೆ. ಟಿ20 ತಂಡದಲ್ಲಿರದ ಸೀನಿಯರ್ ಆಟಗಾರರು ಈಗಾಗಲೇ ಟೆಸ್ಟ್ ಸರಣಿಗೆ ಸಿದ್ದತೆ ಆರಂಭಿಸಿದ್ದಾರೆ.
ಇದರ ನಡುವೆ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಹೊರಬಿದ್ದಿದ್ದಾರೆ.
ಬೆನ್ನು ನೋವಿನ ಕಾರಣದಿಂದ ಅಯ್ಯರ್ ಅವರು ಕಿವೀಸ್ ಸರಣಿಯಿಂದಲೂ ಹೊರಬಿದ್ದಿದ್ದರು. ಸದ್ಯ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ.
“ಶ್ರೇಯಸ್ ಅಯ್ಯರ್ ಇನ್ನೂ ಸರಿಯಾಗಿ ಗುಣಮುಖರಾಗಿಲ್ಲ. ಅವರಿಗೆ ಇನ್ನೂ ಎರಡು ವಾರಗಳ ಕಾಲ ವಿಶ್ರಾಂತಿ ಬೇಕಾಗಿದೆ. ಸದ್ಯ ಅವರು ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಎರಡನೇ ಪಂದ್ಯ ಆಡುವ ಕುರಿತು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು” ಎಂದು ಮೂಲವೊಂದು ತಿಳಿಸಿದೆ.
Related Articles
ಅಯ್ಯರ್ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಅಥವಾ ಶುಭ್ಮನ್ ಗಿಲ್ ಆಡುವ ಸಾಧ್ಯತೆಯಿದೆ. ತಂಡಕ್ಕೆ ಕೆಎಲ್ ರಾಹುಲ್ ಅವರು ಮರಳಿದ ಕಾರಣ ಆರಂಭಿಕನ ಸ್ಥಾನದಲ್ಲಿ ಆಡಲಿದ್ದಾರೆ. ಹೀಗಾಗಿ ಗಿಲ್ ಅವರು ಮಧ್ಯಮ ಕ್ರಮಾಂಕದಲ್ಲಿ ಆಡಬಹುದು.