ಕೋಲ್ಕತಾ : ಐಪಿಎಲ್ 2024 ರಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟ್ಸ್ ಮ್ಯಾನ್ ಶ್ರೇಯಸ್ ಅಯ್ಯರ್ ಅವರು ಕೋಲ್ಕತಾ ನೈಟ್ ರೈಡರ್ಸ್ ಅನ್ನು ಮುನ್ನಡೆಸಲಿದ್ದಾರೆ ಎಂದು ಮ್ಯಾನೇಜ್‌ಮೆಂಟ್ ಗುರುವಾರ ಪ್ರಕಟಿಸಿದೆ.
ಎಪ್ರಿಲ್‌ನಲ್ಲಿ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದ ಬೆನ್ನಿನ ಗಾಯದಿಂದಾಗಿ ಅಯ್ಯರ್ 2023 ರ ಸಂಪೂರ್ಣ ಐಪಿಎಲ್ ಋತುವನ್ನು ಕಳೆದುಕೊಂಡಿದ್ದರು. ಕೆಕೆಆರ್ ನಿತೀಶ್ ರಾಣಾಗೆ ನಾಯಕತ್ವವನ್ನು ನೀಡಿತ್ತು.
ನಾಯಕತ್ವದ ಕುರಿತು ಘೋಷಣೆ ಮಾಡಿದ ಕೆಕೆಆರ್ ಸಿಇಒ ವೆಂಕಿ ಮೈಸೂರು, ಅಯ್ಯರ್ ಮತ್ತೆ ನಾಯಕನಾಗಿ ಅಧಿಕಾರ ವಹಿಸಿಕೊಂಡಿರುವುದು ನಮಗೆ ಸಂತಸ ತಂದಿದೆ” ಎಂದಿದ್ದಾರೆ.
ಶ್ರೇಯಸ್ ಅಯ್ಯರ್ ಸೆಪ್ಟೆಂಬರ್‌ನಲ್ಲಿ ಏಷ್ಯಾ ಕಪ್‌ನಲ್ಲಿ ತಂಡಕ್ಕೆ ಪುನರಾಗಮನ ಮಾಡಿ, ಮೊಹಾಲಿಯಲ್ಲಿ 86 ಎಸೆತಗಳಿಂದ ಶತಕದೊಂದಿಗೆ ಆಸ್ಟ್ರೇಲಿಯ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಫಾರ್ಮ್‌ಗೆ ಮರಳಿದ್ದರು.ಏಕದಿನ ವಿಶ್ವಕಪ್‌ನಲ್ಲಿ, ನಂ. 4 ಸ್ಲಾಟ್‌ನಲ್ಲಿ ಬ್ಯಾಟಿಂಗ್ ಮಾಡಿ 11 ಇನ್ನಿಂಗ್ಸ್‌ಗಳಿಂದ 66.25 ರ ಸರಾಸರಿಯಲ್ಲಿ ಎರಡು ಶತಕ ಮತ್ತು ಮೂರು ಅರ್ಧಶತಕಗಳೊಂದಿಗೆ 530 ರನ್ ಗಳಿಸಿ ಅತ್ಯಮೋಘ ನಿರ್ವಹಣೆ ತೋರಿದ್ದರು.
ಐಪಿಎಲ್ 2023 ರಲ್ಲಿ ಕೆಕೆಆರ್ ಏಳನೇ ಸ್ಥಾನಕ್ಕೆ ಕುಸಿದಿತ್ತು. ಈ ಬಾರಿ ರಾಣಾ ಅವರನ್ನು ಉಪನಾಯಕನನ್ನಾಗಿ ನೇಮಿಕ ಮಾಡಲಾಗಿದೆ.
“ಕಳೆದ ಋತುವಿನಲ್ಲಿ ಗಾಯದ ಕಾರಣ ನನ್ನ ಅನುಪಸ್ಥಿತಿ ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸಿದ್ದೇವೆ ಎಂದು ನಾನು ನಂಬುತ್ತೇನೆ. ನಿತೀಶ್ ಅವರು ನನ್ನ ಜಾಗ ತುಂಬಲು ಮಾತ್ರವಲ್ಲದೆ, ಶ್ಲಾಘನೀಯ ನಾಯಕತ್ವದಿಂದಲೂ ಉತ್ತಮ ಕೆಲಸ ಮಾಡಿದರು. ಕೆಕೆಆರ್ ಅವರನ್ನು ಉಪನಾಯಕ ಎಂದು ಹೆಸರಿಸಿರುವುದು ನನಗೆ ಖುಷಿ ತಂದಿದೆ. ಇದು ನಾಯಕತ್ವದ ಗುಂಪನ್ನು ಬಲಪಡಿಸುವುದರಲ್ಲಿ ಸಂದೇಹವಿಲ್ಲ” ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.