ನವದೆಹಲಿ: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮ್ಯಾನ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರು ಬೆನ್ನುನೋವಿಗೆ ಶಸ್ತ್ರಚಿಕಿತ್ಸೆಗೊಳಗಾಗುವ ಸಾಧ್ಯತೆಯಿದೆ ಎಂದು ಮೂಲಗಳು ಬುಧವಾರ(ಮಾ23) ರಂದು ಖಚಿತಪಡಿಸಿವೆ.
ಬಾರ್ಡರ್-ಗವಾಸ್ಕರ್ ಟ್ರೋಫಿ 2023 ರ ಅಂತಿಮ ದಿನದಿಂದ ಹೊರಗುಳಿದಿರುವ ಅಯ್ಯರ್, ಬಿಸಿಸಿಐನ ಕಟ್ಟುನಿಟ್ಟಿನ ಮಾರ್ಗದರ್ಶನದಲ್ಲಿ ಲಂಡನ್‌ನಲ್ಲಿ ಅಥವಾ ಭಾರತದ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ನಿರೀಕ್ಷೆಯಿದೆ.
ಮುಂಬೈ ಮೂಲದ ವೈದ್ಯರೊಂದಿಗಿನ ಅವರ ಮೂರನೇ ಸಭೆಯಲ್ಲಿ ಅಯ್ಯರ್ ಅವರಿಗೆ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
ಮೂಲಗಳ ಪ್ರಕಾರ, ಅಯ್ಯರ್ ಅವರ ಶಸ್ತ್ರಚಿಕಿತ್ಸೆಯ ನಂತರ ಕನಿಷ್ಠ ಐದು ತಿಂಗಳ ಕಾಲ ಆಟದಿಂದ ಹೊರಗುಳಿಯುವ ನಿರೀಕ್ಷೆಯಿದೆ, ಅವರು ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್, ಇಂಡಿಯನ್ ಪ್ರೀಮಿಯರ್ ಲೀಗ್‌ನಂತಹ ಉನ್ನತ ಮಟ್ಟದ ಪಂದ್ಯಾವಳಿಗಳನ್ನು ಕಳೆದುಕೊಳ್ಳುತ್ತಾರೆ.