ನವದೆಹಲಿ: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಶ್ರೇಯಸ್ ಐಯ್ಯರ್ ಮಾ.31ರಿಂದ ಆರಂಭವಾಗುವ ಐಪಿಎಲ್ ಸಹಿತ ಮುಂಬರುವ ವಿಶ್ವಕಪ್ ಕೂಟದಲ್ಲೂ ಆಡುವುದಿಲ್ಲ. ಅವರು ಸದ್ಯದಲ್ಲಿಯೇ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ. ಈ ನಿರ್ಧಾರವನ್ನು ಆಟಗಾರನ ಉತ್ತಮ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗುತ್ತಿದೆ. ಏಕೆಂದರೆ ಇದೀಗ ಶಸ್ತ್ರಚಿಕಿತ್ಸೆ ನಡೆಸಿದರೆ ಅವರು ಅಕ್ಟೋಬರ್‌ನಲ್ಲಿ ವಿಶ್ವಕಪ್‌ಗೆ ಮೊದಲು ಪುನರಾಗಮನ ಮಾಡುವ ಸಾಧ್ಯತೆ ಸ್ವಲ್ಪಮಟ್ಟಿಗೆ ಇರಲಿದೆ. ಸದ್ಯದ ಸ್ಥಿತಿಯಲ್ಲಿ ಆಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಜಸ್‌ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಈಗಾಗಲೇ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಐಪಿಎಲ್‌ನಲ್ಲಿ ಆಡುವುದು ಅನುಮಾನವಾಗಿದೆ.
ಆಟಗಾರರಿಗೆ ಚಿಕ್ಕ ಬ್ರೇಕ್: ಆಸ್ಟ್ರೇಲಿಯ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಪಾಲ್ಗೊಂಡ ಭಾರತೀಯ ಆಟಗಾರರು ತಮ್ಮ ಐಪಿಎಲ್ ಫ್ರಾಂಚೈಸಿಗೆ ಸೇರುವ ಮೊದಲು ಮೂರು ಅಥವಾ ನಾಲ್ಕು ದಿನಗಳ ಬ್ರೇಕ್ ಪಡೆಯಲಿದ್ದಾರೆ. ಈ ಬಾರಿಯ ಐಪಿಎಲ್ ಮಾ. 31ರಿಂದ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.