Advertisement

‘ರಕ್ತದಾನ’ ಮಾಡಿ ವರ್ಧಂತಿ ಆಚರಿಸಿಕೊಂಡ ‘ಸ್ವರ್ಣವಲ್ಲೀ ಶ್ರೀ’

06:44 PM Jun 09, 2022 | Team Udayavani |

ಶಿರಸಿ: ಮಠಾಧೀಶರೊಬ್ಬರು ತಮ್ಮ ವರ್ಧಂತಿ ಉತ್ಸವ ದಿನದಂದು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ‘ರಕ್ತದಾನ ಮಹಾದಾನ’ ಎಂಬ ಅಭಿಯಾನದಲ್ಲಿ ಭಾಗಿಯಾಗಿ ನಾಡಿಗೇ ಮಾದರಿಯಾದ ಘಟನೆ ನಡೆದಿದೆ.

Advertisement

ಹಸುರು ಸ್ವಾಮೀಜಿ ಎಂದೇ ಹೆಸರಾದ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ವರ್ಧಂತಿ ಉತ್ಸವದ ಹಿನ್ನಲೆಯಲ್ಲಿ ಶ್ರೀಮಠದಲ್ಲಿ ಮಠದ ಅಂಗ ಸಂಸ್ಥೆ ಗ್ರಾಮಾಭ್ಯುದಯ ಸಂಸ್ಥೆ ಹಮ್ಮಿಕೊಂಡ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರದಲ್ಲಿ ಸ್ವತಃ ಶ್ರೀಗಳೂ ರಕ್ತದಾನ ಮಾಡಿದರು.

ಜೀವ ಉಳಿಸಿಕೊಳ್ಳುವ ಸಂದರ್ಭದಲ್ಲಿ ರಕ್ತಗಳ ಅಲಭ್ಯತೆ ಆದರೆ ಸಮಸ್ಯೆ ಆಗುವದನ್ನು ತಪ್ಪಿಸಬೇಕು, ಎಲ್ಲರೂ ರಕ್ತದಾನದಲ್ಲಿ ಪಾಲ್ಗೊಳ್ಳಬೇಕು ಎಂಬ ಆಶಯದಲ್ಲಿ ಸ್ವರ್ಣವಲ್ಲೀಯ ಸಮಾಜಮುಖಿ ಶ್ರೀಗಳು ಈ ಕಾರ್ಯದಲ್ಲಿ ಪಾಲ್ಗೊಂಡರು. ಕಳೆದ ಹದಿಮೂರು ವರ್ಷಗಳಿಂದ ವರ್ಧಂತಿ ಉತ್ಸವದಲ್ಲಿ ರಕ್ತದಾನ ಮಾಡಿಯೇ ಆರೋಗ್ಯ ತಪಾಸಣೆ, ರಕ್ತದಾನ, ರಕ್ತವರ್ಗೀಕರಣ ಶಿಬಿರ, ಇಸಿಜಿಯಂತಹ ತಪಾಸಣೆಗೆ ಚಾಲನೆ ನೀಡುವದು ವಿಶೇಷವಾಗಿದೆ. ಗುರುವಾರ ನಡೆದ ವರ್ಧಂತಿ ಉತ್ಸವದಲ್ಲಿಯೂ ಈ ಕೈಂಕರ್ಯ ನಡೆಸಿ ಯುವ ಪೀಳಿಗೆಗೂ ಮತ್ತೆ ಮೇಲ್ಪಂಕ್ತಿ ಆದರು. ಶಿರಸಿ ಟಿಎಸ್‌ಎಸ್, ಸರಕಾರಿ ಆಸ್ಪತ್ರೆ ಹಾಗೂ ಹೃದಯ ರೋಗ ತಜ್ಞ ಡಾ. ವಿವೇಕಾನಂದ ಗಜಪತಿ ಅವರು ಸಹಕಾರ ನೀಡಿದರು.

ಶ್ರೀಗಳ ಜೊತೆಗೆ ಮೂವತ್ತಕ್ಕೂ ಅಧಿಕ ಶಿಷ್ಯರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ಶ್ರೀಗಳ ಐವತ್ತೈದನೇ ವರ್ಧಂತಿ ಉತ್ಸವಕ್ಕೆ ಈ ಮೂಲಕ ಸಾಕ್ಷಿಯಾದರು. ಶ್ರೀಗಳು ವರ್ಧಂತಿ ಉತ್ಸವದ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ಗಿಡ ನೆಡಬೇಕು ಎಂಬ ಕರೆ ನೀಡುವದೂ ವಿಶೇಷವೇ ಆಗಿದೆ.

ಐವತ್ತಕ್ಕೂ ಅಧಿಕ ವೈದಿಕರಿಂದ ಶ್ರೀಮಠದಲ್ಲಿ ಗಣಪತಿ ಅಥರ್ವಶೀರ್ಷ ಹವನ, ಮೃತ್ಯುಂಜಯ ಹವನ, ಶ್ರೀಸೂಕ್ತ, ಪುರಷಸೂಕ್ತ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೂ ನಡೆದವು. ಈ ವೇಳೆ ಮಠದ ವ್ಯವಸ್ಥಾಪಕ ಎಸ್.ಎನ್.ಗಾಂವಕರ್, ಕೃಷಿ ಪ್ರತಿಷ್ಠಾನದ ಆರ್.ಎನ್.ಹೆಗಡೆ ಉಳ್ಳಿಕೊಪ್ಪ, ಗ್ರಾಮಾಭ್ಯುದಯ ಸಂಚಾಲಕ ರಮೇಶ ಹೆಗಡೆ ದೊಡ್ನಳ್ಳಿ, ಅಧ್ಯಕ್ಷ ಎಂ.ಸಿ.ಹೆಗಡೆ ಶಿರಸಿಮಕ್ಕಿ, ಕಾರ್ಯದರ್ಶಿ ಸಂತೋಷ ಭಟ್ಟ ಕೋಡಿಗಾರ, ಎಂ.ಕೆ. ಹೆಗಡೆ ಗೋಳಿಕೊಪ್ಪ, ಶ್ರೀಧರ ಭಟ್ಟ ಕಳವೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next