ಪುತ್ತೂರು: ದೇಯಿ ಬೈದೇತಿ, ಕೋಟಿ-ಚೆನ್ನಯ ಮೂಲ ಸ್ಥಾನ ಗೆಜ್ಜೆಗಿರಿ ಕ್ಷೇತ್ರದ ಸ್ಥಳ ಪುರಾಣ ಆಧಾರಿತ ಶ್ರೀ ದೇಯಿ ಬೈದೇತಿ ಕೋಟಿ ಚೆನ್ನಯ ಕೃಪಾಪೋಷಿತ ಯಕ್ಷಗಾನ ಮಂಡಳಿಯನ್ನು ರಚಿಸಿ “ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ’ ಎಂಬ ಕಥಾ ಯಕ್ಷಗಾನ ಪ್ರಸಂಗವನ್ನು ಪ್ರದ ರ್ಶಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ಗೆಜ್ಜೆಗಿರಿಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ, ಅಪೂರ್ವ ರೀತಿಯಲ್ಲಿ ಪುನರ್ ನಿರ್ಮಾಣಗೊಂಡ ಈ ಕ್ಷೇತ್ರದ ಬಹುಸಂಖ್ಯೆಯ ಭಕ್ತರ ಬೇಡಿಕೆ ಯಂತೆ ಗೆಜ್ಜೆಗಿರಿ ಮೇಳ ವನ್ನು ಪ್ರಾರಂಭಿ ಸಲು ತೀರ್ಮಾನಿಸಲಾಗಿದೆ.
ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದ್ದು ತೆಂಕು ತಿಟ್ಟಿನ ನೂತನ ಮೇಳ, ಪ್ರಸಿದ್ಧ ಭಾಗವತ ರಾದ ಗಾನಮಂದಾರ ಗಿರೀಶ್ ರೈ ಕಕ್ಕೆಪದವು, ನಿರಂಜನ ಪೂಜಾರಿ ಬಡಗಬೆಳ್ಳೂರು ಅವರ ಗಾನ ಸುಧೆಯನ್ನೊಳಗೊಂಡಂತೆ ಬಲಿಷ್ಠ ಹಿಮ್ಮೇಳ, ಮುಮ್ಮೇಳವನ್ನೊಳಗೊಂಡ ಸಮತೋಲಿತ ಮೇಳವಾಗಿ ಹೊರ ಹೊಮ್ಮಲಿದೆ ಎಂದರು.
ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಉಪಾಧ್ಯಕ್ಷ ರಾದ ರವಿ ಪೂಜಾರಿ ಚಿಲಿಂಬಿ, ಜತೆ ಕಾರ್ಯ ದರ್ಶಿ ಮೋಹನ್ ದಾಸ್ ವಾಮಂಜೂರು, ಚಂದ್ರಶೇಖರ್ ಉಚ್ಚಿಲ, ಮೇಳ ಸಂಚಾಲಕ ನವೀನ್ ಸುವರ್ಣ, ಕಾನೂನು ಸಲಹೆಗಾರ ನವನೀತ್ ಹಿಂಗಾಣಿ, ರಾಜೇಂದ್ರ ಚಿಲಿಂಬಿ, ಜನಾರ್ದನ ಪೂಜಾರಿ ಪಡು ಮಲೆ, ಸುರೇಶ್ ಪೂಜಾರಿ ಉಜಿರೆ, ನಿತಿನ್ ಕುಮಾರ್ ತೆಂಕ ಕಾರಂದೂರು, ಗಿರೀಶ್ ರೈ ಕಕ್ಕೆಪದವು, ಶಶಿಕಿರಣ ಕಾವು, ನಾರಾಯಣ ಸುವರ್ಣ, ದಾಮೋದರ ಪಾಟಾಳಿ ಸರಾವು, ಚಂದ್ರಶೇಖರ ಸುಳ್ಯ ಪದವು, ದಿವಾಕರ್ ದಾಸ್ ಕಾವಳಕಟ್ಟೆ, ಜಗದೀಶ್ ಕಜೆಕಾರ್ ಉಪಸ್ಥಿತರಿದ್ದರು.
ಗೆಜ್ಜೆಗಿರಿ ಕ್ಷೇತ್ರ
ತುಳುನಾಡಿನ ಕಾರಣಿಕ ಶಕ್ತಿಗಳಾದ ದೇಯಿ ಬೈದೇತಿ, ಕೋಟಿ-ಚೆನ್ನಯರ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರವು 500 ವರ್ಷಗಳ ಬಳಿಕ ಜೀರ್ಣೋದ್ಧಾರ ನಡೆದು 2020ರಲ್ಲಿ ಲಕ್ಷಾಂತರ ಭಕ್ತರ ಸಮಾಗಮದೊಂದಿಗೆ ಬ್ರಹ್ಮಕಲಶ ನಡೆದಿತ್ತು. ತುಳುನಾಡಿನಲ್ಲಿ ಬಾಳಿ ಬದುಕಿ, ಅತುಲ ಪರಾಕ್ರಮದಿಂದ ಮೆರೆದಿದ್ದ ಅವಳಿ ವೀರರನ್ನು ಕಾರಣಿಕ ಪುರುಷರಾಗಿಯೂ ದೈವಾಂಶ ಸಂಭೂತರೆಂಬ ನೆಲೆಯಲ್ಲಿ ಆರಾಧನೆ ಮಾಡುತ್ತಾ ಬರಲಾಗುತ್ತಿದೆ. ಕ್ಷೇತ್ರದ ಮಹತ್ವವನ್ನು ಯಕ್ಷಗಾನದ ಮೂಲಕ ಸಾರುವ ಪ್ರಯತ್ನವೀಗ ಗೆಜ್ಜೆಸೇವೆ ಮೂಲಕ ನಡೆಯಲಿದೆ.