ಹುಣಸೂರು: ನಗರದ ಪೌರ ಕಾರ್ಮಿಕರ ಕಾಲೋನಿಯ ಶ್ರೀ ಆಧಿಶಕ್ತಿ ಮಹಾಕಾಳಮ್ಮನವರ ಜಾತ್ರಾಮಹೋತ್ಸವವು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು.
ಉತ್ಸವದ ಅಂಗವಾಗಿ ದೇವಳ ಹಾಗೂ ಕಾಲೋನಿಯ ರಸ್ತೆಗಳುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ಬುಧವಾರ ಸಂಜೆ ದೇವರನ್ನು ನಗರದ ಪಂಪ್ ಹೌಸ್ ಬಳಿಯ ಲಕ್ಷ್ಮಣರ್ತೀ ನದಿ ತಟಕ್ಕೆ ಕೊಂಡೊಯ್ದು ಹೋಮ-ಹವನ, ವಿಶೇಷ ಪೂಜೆ ನೆರವೇರಿಸಿ, ನಂತರ ಅಲಂಕೃತ ಪಲ್ಲಕ್ಕಿಯಲ್ಲಿರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯ. ಕೇರಳದ ಚಂಡೆ, ತಮಟೆ, ಡೋಲು ಸದ್ದಿನೊಂದಿಗೆ ಮೆರವಣಿಗೆ ನಡೆಸಿದರು.
ಈ ಸಂದಭದಲ್ಲಿ ಯುವಕರು ತಮಟೆ, ಚಂಡೆ ವಾದ್ಯದ ಸದ್ದಿಗೆ ಹೆಜ್ಜೆ ಹಾಕಿ ಕುಣಿದರು. ಹರಕೆ ಹೊತ್ತಿದ್ದವರು ಬಾಯಿಗೆ ಬೀಗ ಹಾಕಿಸಿಕೊಂಡು ಮೆರವಣಿಗೆಯಲ್ಲಿ ಸಾಗಿ ಬಂದರು. ಮೆರವಣಿಗೆಯುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ತಂಬಿಟ್ಟು ಆರತಿ:
ಬುಧವಾರದಂದು ಬಡಾವಣೆಯ ಪ್ರತಿ ಮನೆಯ ಮಹಿಳೆಯುರು ಹಾಗೂ ಯುವತಿಯರು ಮಡಿಯುಟ್ಟು ದೇವಾಲಯದಿಂದ ತಲೆ ಮೇಲೆ ತಂಬಿಟ್ಟು ಆರತಿ ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದು ದೇವಾಲಯಕ್ಕೆ ಆಗಮಿಸಿದರು. ಮದ್ಯಾಹ್ನ ಮಹಾ ಮಂಗಳಾರತಿ ನಂತರ ಪ್ರಸಾದ ಆಯೋಜಿಸಲಾಗಿತ್ತು. ಉತ್ಸವದ ಅಂಗವಾಗಿ ಶುಕ್ರವಾರ ಮದ್ಯಾಹ್ನ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ.